ಬೆಂಬಲ ಬೆಲೆ ರದ್ದಿಲ್ಲ: ರೈತರಿಗೆ ಮೋದಿ ಅಭಯ; ಪ್ರತಿಪಕ್ಷಗಳ ವಿರುದ್ಧ ಕಿಡಿ

Nation Lead
Published on

ನವದೆಹಲಿ: ಕೃಷಿ ವಲಯದಲ್ಲಿ ರಾತ್ರೋರಾತ್ರಿ ಸುಧಾರಣೆ ತಂದಿಲ್ಲ. ಕಳೆದ 22 ವರ್ಷಗಳಿಂದ ಸರ್ಕಾರಗಳು, ರೈತರ ಗುಂಪು, ಕೃಷಿ ಮತ್ತು ಆರ್ಥಿಕ ತಜ್ಞರು, ವಿಜ್ಞಾನಿಗಳು ರ್ಚಚಿಸಿ, ರೈತರ ಆಗ್ರಹಗಳನ್ನು ಪರಿಶೀಲಿಸಿಯೇ ಮೂರು ಹೊಸ ಕಾಯ್ದೆಗಳನ್ನು ರೂಪಿಸಲಾಗಿದೆ. ಹೊಸ ಕಾನೂನು ಜಾರಿಯಾದರೆ ಕನಿಷ್ಠ ಬೆಂಬಲ ಬೆಲೆ (ಎಂಎಸ್​ಪಿ) ರದ್ದುಗೊಳ್ಳುತ್ತದೆ ಎಂಬುದು ದೊಡ್ಡ ಸುಳ್ಳು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಮಧ್ಯಪ್ರದೇಶದ ರಾಯಸೇನ್​ನಲ್ಲಿ ಶುಕ್ರವಾರ ನಡೆದ ಮಹಾಕಿಸಾನ್ ಸಮ್ಮೇಳನದಲ್ಲಿ ವಿಡಿಯೋ ಕಾನ್ಪರೆನ್ಸ್ ಮೂಲಕ ಮಾತನಾಡಿದ ಅವರು, ನಮಗೆ ಎಂಎಸ್​ಪಿ ರದ್ದು ಮಾಡುವ ಉದ್ದೇಶ ಇದ್ದಿದ್ದರೆ ಸ್ವಾಮಿನಾಥನ್ ನೇತೃತ್ವದ ಆಯೋಗದ ವರದಿಯನ್ನು ಜಾರಿಗೊಳಿಸುತ್ತಿರಲಿಲ್ಲ. ಎಂಎಸ್​ಪಿ ಹೆಚ್ಚಿಸುತ್ತಿರಲಿಲ್ಲ. ನಾನು ಅನ್ನದಾತರಿಗೆ ಈ ವೇದಿಕೆ ಮೂಲಕ ವಚನ ನೀಡುವೆ, ಎಂಎಸ್​ಪಿ ತಡೆಹಿಡಿಯುವುದಿಲ್ಲ ಅಥವಾ ರದ್ದು ಮಾಡುವುದಿಲ್ಲ. ಹೊಸ ಕಾಯ್ದೆಯ ಜಾರಿ ನಂತರವೂ ಇದು ಮುಂದುವರಿಯಲಿದೆ ಎಂದರು.

ರೈತರ ಆದಾಯ ಹೆಚ್ಚಿಸಲು ಮತ್ತು ಅವರ ಪ್ರಗತಿಗಾಗಿ ಸರ್ಕಾರ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಆಡಳಿತದಲ್ಲಿದ್ದಾಗ ತಾವು ಮಾಡದನ್ನು, ಈಗ ಎನ್​ಡಿಎ ಸರ್ಕಾರ ಮಾಡುತ್ತಿರುವುದನ್ನು ನೋಡಿ ವಿರೋಧ ಪಕ್ಷಗಳು ಕರುಬುತ್ತಿವೆ. ಇದೆಲ್ಲಾ ಹೇಗೆ ಸಾಧ್ಯ ಎಂದು ಅಚ್ಚರಿ ವ್ಯಕ್ತಪಡಿಸುತ್ತಿವೆ. ಹೀಗಾಗಿ ಹೊಸ ಕೃಷಿ ಕಾಯ್ದೆ ಬಗ್ಗೆ ರೈತರ ದಾರಿತಪ್ಪಿಸುತ್ತಿವೆ. ರೈತರನ್ನು ಎತ್ತಿಕಟ್ಟುವ ಮೂಲಕ ತಮ್ಮ ರಾಜಕೀಯದ ಬೇಳೆ ಬೇಯಿಸಿಕೊಳ್ಳುತ್ತಿವೆ ಎಂದು ದೂರಿದರು.

ಈ ಕಾಯ್ದೆಗಳಿಂದ ಕೃಷಿ ವಲಯಕ್ಕೆ, ರೈತರಿಗೆ ತೊಂದರೆಯಾಗುತ್ತದೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ. ಈ ಬಗ್ಗೆ ಮುಕ್ತವಾಗಿ ಚರ್ಚೆ ನಡೆಸಲು ಸರ್ಕಾರ ಸಿದ್ಧವಿದೆ. ಅದನ್ನು ಬಿಟ್ಟು ರೈತರ ಪ್ರತಿಭಟನೆಯನ್ನು ಲಾಭದ ವೇದಿಕೆ ಮಾಡಿಕೊಳ್ಳಲು ಬಯಸಿದರೆ ಜೋಕೆ ಎಂದು ಪ್ರಧಾನಿ ಎಚ್ಚರಿಕೆ ನೀಡಿದರು.

ಭಾಷಣದ ಪ್ರಮುಖಾಂಶ

  • ಕೃಷಿ ಉತ್ಪನ್ನಗಳ ದಾಸ್ತಾನು ಬಹಳ ಮುಖ್ಯ. ಇದು ಸಮರ್ಪಕವಾಗಿ ಇಲ್ಲದಿದ್ದರೆ ರೈತರು ಎಷ್ಟೇ ಶ್ರಮವಹಿಸಿ ಕೃಷಿ ಮಾಡಿದ್ದರೂ ನಷ್ಟ ಉಂಟಾಗುತ್ತದೆ. ಈ ನಷ್ಟ ರೈತರಿಗೆ ಮಾತ್ರವಲ್ಲ ಇಡೀ ರಾಷ್ಟ್ರಕ್ಕೆ ಹಾಗುವ ಹಾನಿ.
  • ಬೆಳೆಗಳ ದಾಸ್ತಾನಿಗೆ ಗೋದಾಮು, ಮೌಲ್ಯ ವೃದ್ಧಿಸಲು ಆಹಾರ ಸಂಸ್ಕರಣಾ ಕೇಂದ್ರ, ಅಗತ್ಯವಿರುವ ಬೆಳೆಗಳಿಗೆ ಶೈತ್ಯಾಗಾರ, ಬೆಳೆಗಳನ್ನು ಒಣಗಿಸಿ ಇರಿಸುವ ಘಟಕಗಳನ್ನು ಸ್ಥಾಪಿಸಲು ಕಾಯ್ದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.
  • ರೈತರ ಕಲ್ಯಾಣಕ್ಕಾಗಿ ದೊಡ್ಡ ದೊಡ್ಡ ಭರವಸೆಗಳನ್ನು ನೀಡಿದ್ದ ಪಕ್ಷಗಳು, ಗೆದ್ದನಂತರ ರೈತರ ಕಡೆ ತಿರುಗಿಯೂ ನೋಡಲಿಲ್ಲ.
  • ಹೊಸ ಕೃಷಿ ಕಾಯ್ದೆಯಲ್ಲಿರುವ ಅಂಶಗಳನ್ನೇ ಚುನಾವಣಾ ಪ್ರಣಾಳಿಕೆಯಲ್ಲಿ ಪ್ರಕಟಿಸಿದ್ದ ಪಕ್ಷಗಳು ಈಗ ರಾಜಕೀಯ ಲಾಭಕ್ಕಾಗಿ ವಿರೋಧಿಸುತ್ತಿವೆ.
  • ಯೂರಿಯಾಗೆ ಬೇವಿನ ಲೇಪನ ಕಡ್ಡಾಯಗೊಳಿಸಿದ ಬಳಿಕ ಇತರ ಉದ್ದೇಶಗಳಿಗೆ ಬಳಕೆ ತಗ್ಗಿ, ರೈತರಿಗೆ ಸುಲಭವಾಗಿ ಸಿಗುತ್ತಿದೆ.

23 ಸಾವಿರ ಹಳ್ಳಿಗಳಲ್ಲಿ ನೇರ ಪ್ರಸಾರ: ಮೋದಿ ಭಾಷಣವನ್ನು ಮಧ್ಯಪ್ರದೇಶದ 23 ಸಾವಿರ ಹಳ್ಳಿಗಳಲ್ಲಿ ಬಿತ್ತರಿಸಲಾಯಿತು. ವಿಡಿಯೋ ಕಾನ್ಪರೆನ್ಸ್ ಮೂಲಕವೇ ರಾಯಸೇನ್​ನಲ್ಲಿ ಶೈತ್ಯಾಗಾರ ನಿರ್ಮಾಣ ಇನ್ನಿತರ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಕ್ಕೆ ಪ್ರಧಾನಿ ಚಾಲನೆ ನೀಡಿದರು.

ನಿಮ್ಮ (ವಿರೋಧ ಪಕ್ಷಗಳು) ಪ್ರಣಾಳಿಕೆಯಲ್ಲಿದ್ದ ಅಂಶಗಳನ್ನು ಹೊಸ ಕೃಷಿ ಕಾಯ್ದೆ ಮೂಲಕ ಬಿಜೆಪಿ ಈಡೇರಿಸಿದೆ ಎಂದು ಕೊರಗಬೇಡಿ. ಬೇಕಿದ್ದರೆ ಇದರ ಲಾಭವನ್ನು ನೀವೇ ಪಡೆಯರಿ. ನನಗೆ ರೈತರ ಏಳ್ಗೆ ಮತ್ತು ಕೃಷಿ ವಲಯದ ಪ್ರಗತಿಯೇ ಮುಖ್ಯ. ರಾಜಕೀಯ ಲಾಭ, ನಷ್ಟವಲ್ಲ. | ನರೇಂದ್ರ ಮೋದಿ ಪ್ರಧಾನಿ

ಮೋದಿ ನೇತೃತ್ವದ ಸರ್ಕಾರ ಆರು ವರ್ಷದಲ್ಲಿ 8 ಲಕ್ಷ ಕೋಟಿ ರೂಪಾಯಿ  ಎಂಎಸ್​​ಪಿ ನೀಡಿದೆ. ಯುಪಿಎ ಸರ್ಕಾರ 10 ವರ್ಷದಲ್ಲಿ ನೀಡಿದ್ದು, 3.50 ಲಕ್ಷ ಕೋಟಿ ರೂಪಾಯಿ. | ಸ್ಮೃತಿ ಇರಾನಿ ಕೇಂದ್ರ ಜವಳಿ ಸಚಿವೆ

ದೆಹಲಿಗೆ ಮಹಾರಾಷ್ಟ್ರ ರೈತರು

ಕೃಷಿ ಕಾಯ್ದೆ ವಿರುದ್ಧ ಸೋನಿಪತ್​ನಲ್ಲಿ ಪ್ರತಿಭಟನೆ

ದೆಹಲಿ ಗಡಿಗಳಲ್ಲಿ ರೈತರ ಪ್ರತಿಭಟನೆ ಶುಕ್ರವಾರ 23ನೇ ದಿನಕ್ಕೆ ಕಾಲಿಟ್ಟಿದೆ. ಈ ಧರಣಿಯಲ್ಲಿ ಭಾಗವಹಿಸುತ್ತಿರುವವರ ಸಂಖ್ಯೆ ಕೂಡ ಏರುತ್ತಿದೆ. ಮಹಾರಾಷ್ಟ್ರದ ನಾಸಿಕ್​ನ ಅಖಿಲ ಭಾರತ ಕಿಸಾನ್ ಸಭಾ (ಎಐಕೆಎಸ್) ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದು, ಡಿ.21ಕ್ಕೆ 3 ಸಾವಿರ ರೈತರು ದೆಹಲಿಗೆ ಪಯಣಿಸಲಿದ್ದಾರೆ ಎಂದು ತಿಳಿಸಿದೆ. ಚಿಪ್ಕೊ ಚಳವಳಿಯ ನೇತಾರ ಸುಂದರಲಾಲ್ ಬಹುಗುಣ ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದಾರೆ.

ವರ್ಷಾಂತ್ಯದೊಳಗೆ ಬಿಕ್ಕಟ್ಟು ಶಮನ

ರೈತರೊಂದಿಗೆ ಅನೌಪಚಾರಿಕ ಚರ್ಚೆ ಜಾರಿಯಲ್ಲಿದೆ. ರೈತರ ಕಳವಳ ದೂರಮಾಡಲು ನರೇಂದ್ರ ಮೋದಿ ನೇತೃತ್ವದ ಸರ್ಕಾರ ಬದ್ಧವಾಗಿದೆ ಮತ್ತು ಮಾತುಕತೆಗೆ ಮುಕ್ತವಾಗಿದೆ. ಹೀಗಾಗಿ ವರ್ಷಾಂತ್ಯದೊಳಗೆ ಬಿಕ್ಕಟ್ಟು ಶಮನವಾಗಲಿದೆ. ಆದರೆ, ರೈತರ ಹೆಗಲ ಮೇಲೆ ಬಂದೂಕು ಇರಿಸುವ ಕಪಟಿಗಳೊಂದಿಗೆ ಮಾತುಕತೆ ನಡೆಸಿ ಪ್ರಯೋಜನ ಇಲ್ಲ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿದ್ದಾರೆ. ಮೂರು ಕೃಷಿ ಕಾಯ್ದೆಗಳು ರೈತರಿಗೆ ಲಾಭದಾಯವಾಗಿವೆ. ಎಂಎಸ್​ಪಿ ರದ್ದು ಪಡಿಸುವುದಿಲ್ಲ ಮತ್ತು ಎಪಿಎಂಸಿ ವ್ಯವಸ್ಥೆ ಮುಂದುವರಿಯಲಿದೆ ಎಂಬ ಭರವಸೆಯನ್ನು ಲಿಖಿತವಾಗಿ ನೀಡಲು ಸರ್ಕಾರ ಸಿದ್ಧವಿದೆ. ಆದರೆ, ವಿರೋಧ ಪಕ್ಷಗಳು ಸುಖಾಸುಮ್ಮನೆ ಚಿತಾವಣೆ ಮಾಡುತ್ತಿವೆ ಎಂದು ಆರೋಪಿಸಿದ್ದಾರೆ. ರಾಜಕೀಯ ಪಕ್ಷಗಳು ರೈತರ ಹೆಸರಲ್ಲಿ ರಾಜಕೀಯ ಮಾಡಬಾರದು. ಇವತ್ತು ಪ್ರತಿಭಟನೆಗೆ ಕುಮ್ಮಕ್ಕು ನೀಡುತ್ತಿರುವ ಪಕ್ಷಗಳೇ ಚುನಾವಣಾ ಸಮಯದಲ್ಲಿ ಕೃಷಿ ವಲಯದ ಸುಧಾರಣೆಯ ಭರವಸೆಗಳನ್ನು ನೀಡಿದ್ದವು. ಇಂಥ ಭರವಸೆಯಲ್ಲಿ ಈ ಕಾಯ್ದೆಯಲ್ಲಿರುವ ಅಂಶಗಳೇ ಇದ್ದವು ಎಂದು ಅವರು ಹೇಳಿದ್ದಾರೆ.

ಅಮೆರಿಕದಲ್ಲಿರುವ ಭಾರತ ಮೂಲದ 20 ವೈದ್ಯರ ತಂಡ ದೆಹಲಿ-ಹರಿಯಾಣದ ಟಿಕ್ರಿ ಗಡಿಯಲ್ಲಿ ಶಿಬಿರ ತೆರೆದಿದ್ದು, ಅನಾರೋಗ್ಯ ಪೀಡಿತ ರೈತರಿಗೆ ಚಿಕಿತ್ಸೆ ನೀಡುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net