ಎಲ್ಲ ಅಜೀರ್ಣವೂ ಒಂದೇ ಅಲ್ಲ!

Stomach Ache
Published on
ಧನ್ವಂತರಿ
ನಾವು ಸೇವಿಸುವ ಆಹಾರದಲ್ಲಿ ವ್ಯತ್ಯಾಸಗಳಾದಾಗ ಅದು ಜೀರ್ಣಶಕ್ತಿಯ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಪಚನಕ್ರಿಯೆಯಲ್ಲಿ ಏರುಪೇರಾದಾಗ ಅದು ಅಜೀರ್ಣವಾಗಿ ಪರಿಣಮಿಸುತ್ತದೆ. ಮಾನಸಿಕ ಖಿನ್ನತೆ, ಶರೀರವು ಭಾರವಾದಂತೆ ಅನಿಸುವುದು, ತಲೆಸುತ್ತುವುದು, ಹೊಟ್ಟೆಯುಬ್ಬರ, ಮಲಬದ್ಧತೆ ಅಥವಾ ಭೇದಿ ಇವೆಲ್ಲವೂ ಅಜೀರ್ಣದ ಪ್ರಮುಖ ಲಕ್ಷಣಗಳು. ಕಫದೋಷದ ಆಧಿಕ್ಯತೆ ಇದ್ದಾಗ ಆಮಾಜೀರ್ಣ, ಪಿತ್ತದ ಬಾಹುಳ್ಯದಿಂದ ವಿದಗ್ಧಾಜೀರ್ಣ, ವಾತದ ಮುಖ್ಯಪಾತ್ರದಿಂದ ವಿಷ್ಟಬ್ಧಾಜೀರ್ಣ ಉಂಟಾಗುತ್ತದೆ. ಇವಲ್ಲದೆ ರಸಶೇಷಾಜೀರ್ಣ, ದಿನಪಾಕಿ. ಅಜೀರ್ಣ, ಪ್ರತಿವಾಸರ ಅಜೀರ್ಣಗಳೂ ಸೇರಿದಂತೆ ಆರು ವಿಧವಾದ ಅಜೀರ್ಣಗಳನ್ನು ಸಮಗ್ರವಾಗಿ ವಿವರಿಸಿದ ಹೆಗ್ಗಳಿಕೆ ಆಯುರ್ವೆದಕ್ಕಿದೆ.

ಆಮಾಜೀರ್ಣ: ಆಮಾಜೀರ್ಣದಲ್ಲಿ ಕಫದೋಷದ ಪ್ರಾಧಾನ್ಯತೆ ಇರುತ್ತದೆ. ದೇಹವು ಭಾರವಾಗುವುದು, ಜೊಲ್ಲು ಸ್ರಾವ, ಕೆನ್ನೆ ಹಾಗೂ ಕಣ್ಣುಗಳ ಊತ, ಆಹಾರವು ಜೀರ್ಣವಾಗದೆ ಇರುವುದ ರಿಂದ ಅದರ ತೇಗು ಪ್ರಮುಖವಾಗಿ ಕಾಣಿಸಿಕೊಳ್ಳುತ್ತದೆ. ಸರಿಯಾದ ಚಿಕಿತ್ಸೆ ಪಡೆಯದಿದ್ದಲ್ಲಿ ವಿಸೂಚಿಕಾ ಎಂಬ ಕಾಯಿಲೆಗೆ ದಾರಿಮಾಡಿಕೊಡುತ್ತದೆ.

ವಿದಗ್ಧಾಜೀರ್ಣ: ವಿದಗ್ಧಾಜೀರ್ಣವು ಪಿತ್ತ ದೋಷದ ಆಧಿಕ್ಯದಿಂದಾಗುವ ತೊಂದರೆ. ತಲೆ ಸುತ್ತುವುದು, ಬಾಯಾರಿಕೆ, ಎಚ್ಚರ ತಪ್ಪುವುದು, ಉರಿಯಿಂದ ಕೂಡಿದ ನೋವು, ಹುಳಿತೇಗು, ಬಾಯಿಯಿಂದ ಹೊಗೆಯಾಡಿ ದಂತಹ ಅನುಭವ, ಬೆವರು, ಮೈಉರಿಗಳು ಕಾಣಿಸಿಕೊಳ್ಳುತ್ತವೆ. ಇದನ್ನು ನಿರ್ಲಕ್ಷಿಸಿದರೆ ವಿಲಂಬಿಕಾ ಎನ್ನುವ ವ್ಯಾಧಿಯಾಗಿ ಪರಿಣಮಿಸುತ್ತದೆ.

ವಿಷ್ಟಬ್ಧಾಜೀರ್ಣ: ವಿಷ್ಟಬ್ಧಾಜೀರ್ಣ ವಾತದೋಷ ಪ್ರಧಾನವಾಗಿರುವ ವ್ಯಾಧಿ. ಹೊಟ್ಟೆನೋವು, ಹೊಟ್ಟೆ ಉಬ್ಬರ, ವಾತದಿಂದಾಗುವ ವಿವಿಧ ಬಗೆಯ ಶಾರೀರಿಕ ನೋವುಗಳು, ಮಲಬದ್ಧತೆ, ಮಲಪ್ರವೃತ್ತಿಗೆ ತಡೆ ಉಂಟಾಗುವುದು, ದೇಹದ ಬಿಗಿತ, ಮಾನಸಿಕ ಗೊಂದಲ, ಅಂಗಾಂಗಗಳಲ್ಲಿ ವೇದನೆ ಈ ಅಜೀರ್ಣದಲ್ಲಿನ ಮುಖ್ಯವಾದ ಲಕ್ಷಣಗಳು. ಸೂಕ್ತವಾದ ಚಿಕಿತ್ಸೆಗೆ ಒಳಗಾಗದೆ ಇದ್ದಲ್ಲಿ ಅಲಸಕ ಎಂಬ ಕಾಯಿಲೆಯಾಗಿ ತೀವ್ರತೆ ಪಡೆದುಕೊಳ್ಳುತ್ತದೆ.

ರಸಶೇಷಾಜೀರ್ಣ: ರಸಶೇಷಾಜೀರ್ಣದಲ್ಲಿ ಆಹಾರ ಸೇವನೆಯೇ ಬೇಡವೆಂದು ಅನಿಸುತ್ತದೆ. ಹೃದಯವು ಭಾರವಾದಂತೆ ಆಗುವುದಲ್ಲದೆ ಅಶುದ್ಧಿಗೊಳ್ಳುವುದು. ವಾಕರಿಕೆ, ಶರೀರ ಜಡತ್ವಗಳಿದ್ದರೂ ತೇಗು ಬರುವುದಿಲ್ಲ.

ದಿನಪಾಕಿ ಅಜೀರ್ಣ: ದಿನಪಾಕಿ ಅಜೀರ್ಣ ಹೆಸರೇ ಸೂಚಿಸುವಂತೆ ಸೇವಿಸಿದ ಆಹಾರವು ದೀರ್ಘಕಾಲ ತೆಗೆದುಕೊಂಡು 24 ಗಂಟೆಗಳ ಅವಧಿಯಲ್ಲಿ ನಿಧಾನವಾಗಿ ಜೀರ್ಣವಾಗುವುದು. ಪಚನಕಾಲ ಹೆಚ್ಚು ಎಂಬುದನ್ನು ಬಿಟ್ಟರೆ ಇದರಲ್ಲೂ ತೇಗು, ಹೊಟ್ಟೆಉಬ್ಬರ ಇರುವುದಿಲ್ಲ.

ಪ್ರತಿವಾಸರ ಅಜೀರ್ಣದಲ್ಲಿ ಜೀರ್ಣಕ್ರಿಯೆಯು ಪ್ರಾಕೃತವಾಗಿಯೇ ಇರುತ್ತದೆ. ಹೊಟ್ಟೆಯ ಎಡಭಾಗದಲ್ಲಿ ಆಹಾರವು ಭಾಗತಃ ನಿಧಾನ ಚಲನೆಯನ್ನು ಹೊಂದಿರುತ್ತದೆ. ಆದರೆ ಯಾವುದೇ ತೊಂದರೆಯು ವ್ಯಕ್ತಿಗೆ ಆಗುವುದಿಲ್ಲ. ಇದರಲ್ಲಿ ಜೀರ್ಣಾಹಾರದ ಲಕ್ಷಣಗಳು ಕಾಣಿಸಿಕೊಳ್ಳುವುದಿಲ್ಲ ಎಂಬುದೇ ಪ್ರಮುಖವಾಗಿರುವ ಅಂಶ.

ವಿಸೂಚಿಕಾ ರೋಗ: ಅಜೀರ್ಣದ ಚಿಕಿತ್ಸೆಯು ಸಮರ್ಪಕವಾಗಿ ಆಗದಿದ್ದಲ್ಲಿ ಅದು ಹಲವಾರು ತೊಂದರೆಗಳನ್ನು ಉಂಟುಮಾಡುತ್ತದೆ. ವಿಸೂಚಿಕಾ ಎಂಬ ರೋಗ ಉಂಟಾದಾಗ ಎಚ್ಚರ ತಪ್ಪುವುದು, ವಾಂತಿ, ಭೇದಿ, ದೇಹಬಿಗಿತ, ಬಾಯಾರಿಕೆ, ಹೊಟ್ಟೆನೋವು, ತಲೆಸುತ್ತು, ಆಕಳಿಕೆ, ಮೈಉರಿ, ಎದೆನೋವು, ತಲೆನೋವು, ನಡುಕ, ಶರೀರವು ಕಾಂತಿಹೀನ ಆಗುವುದು, ದೇಹದಲ್ಲಿ ಸೂಜಿಯಿಂದ ಚುಚ್ಚಿದ ನೋವಿನ ಅನುಭವವಾಗುವುದು, ಅತಿಯಾದ ಆಹಾರವನ್ನು ಆಹಾರದ ಯಾವುದೇ ವಿಧಿ ನಿಯಮಗಳನ್ನು ಅನುಸರಿಸದೇ ಪ್ರಾಣಿಗಳಂತೆ ತಿನ್ನುವುದರಿಂದ ವಿಸೂಚಿಕಾ ನಮ್ಮನ್ನು ಪೀಡಿಸುತ್ತದೆ.

ಶರೀರವು ದುರ್ಬಲವಾಗಿದ್ದಾಗ ಜೀರ್ಣಶಕ್ತಿಯೂ ಕಡಿಮೆಯಿದ್ದಾಗ ದೇಹದಲ್ಲಿ ಕಫದೋಷವು ಹೆಚ್ಚಾಗಿರುವ ಸನ್ನಿವೇಶದಲ್ಲಿ ಮಲಮೂತ್ರ ವೇಗಗಳನ್ನು ತಡೆಯುವುದರಿಂದ ಹಾಗೂ ಅತಿಯಾಗಿ ಜೀರ್ಣಕ್ಕೆ ಕಷ್ಟಕರವಾದ ಆಹಾರ ಸೇವನೆ, ಒಣ, ಶೀತಲ, ಶುಷ್ಕ, ಅತಿಪ್ರಮಾಣದ ಅನ್ನಪಾನಾದಿಗಳಿಂದ ವಾತದೋಷದ ಜೊತೆ ಕಫವೂ ಸೇರಿಕೊಂಡು ಆಹಾರವು ಮುಂದೆ ಹಿಂದೆ ಹೋಗದೆ ಆಮದೋಷದ ಲಕ್ಷಣವನ್ನು ಹುಟ್ಟುಹಾಕುತ್ತದೆ.

ಅಲಸಕ: ಅಲಸಕ ಎಂಬ ಈ ಕಾಯಿಲೆಯಲ್ಲಿ ತೀವ್ರವಾದ ಹೊಟ್ಟೆ ಉಬ್ಬರ, ಹೊಟ್ಟೆಯಲ್ಲಿ ಶಬ್ದ, ಬಾಯಾರಿಕೆ, ವಾಂತಿಗಳೂ ಕಾಣಿಸಿಕೊಳ್ಳುತ್ತವೆ. ಆಹಾರವು ಜೀರ್ಣವಾಗದೆ ತೀವ್ರ ಹೊಟ್ಟೆನೋವೂ ಕಾಣಿಸಿಕೊಳ್ಳುತ್ತದೆ. ಆಮದೋಷದಿಂದ ತೀವ್ರವಾಗಿ ದೋಷಗಳು ತಡೆಯಲ್ಪಟ್ಟು ಕಾಯಿಲೆ ಉಲ್ಬಣಿಸಿ ದೇಹವು ದಂಡದಂತೆ ಸ್ತಬ್ಧವಾಗಿ ದಂಡಾಲಸಕ ಎಂಬ ವ್ಯಾಧಿಗೂ ಕಾರಣವಾಗುತ್ತದೆ. ವಿಲಂಬಿಕಾ

ವಿಲಂಬಿಕಾ ರೋಗವು ದುಷ್ಟ, ಕಲುಷಿತ ಆಹಾರ ಸೇವನೆಯಿಂದ ಉಂಟಾಗುತ್ತಿದ್ದು ಆಹಾರವು ಮೇಲ್ಮುಖ ಅಥವಾ ಕೆಳಮುಖವಾಗಿ ಚಲಿಸದೆ ಹೊಟ್ಟೆನೋವು, ಹೊಟ್ಟೆಯುಬ್ಬರ ಮೊದಲಾದ ಲಕ್ಷಣಗಳು ಕಂಡುಬರುತ್ತವೆ. ಇದು ಅಲಸಕದಷ್ಟು ತೀವ್ರವಾಗಿರುವುದಿಲ್ಲ. ಇಂತಹ ತೊಂದರೆಗಳು ಬರುವುದನ್ನು ತಡೆಯಬೇಕಾದರೆ ಅಜೀರ್ಣದ ನಿರ್ವಹಣೆಯ ಸೂಕ್ತ ಅರಿವನ್ನು ಹೊಂದಲೇಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net