ಎಆರ್​ಟಿಒ ಹುದ್ದೆ ಮುಂಬಡ್ತಿ ಬೇಡ್ವಂತೆ!

RTO
Published on

ಬೆಂಗಳೂರು: ಸಾರಿಗೆ ಇಲಾಖೆಯಲ್ಲಿ ಹಲವು ವರ್ಷಗಳಿಂದ ಖಾಲಿ ಉಳಿದಿರುವ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ (ಎಆರ್​ಟಿಒ) ಹುದ್ದೆಗಳ ಭರ್ತಿ ಪ್ರಕ್ರಿಯೆಗೆ ಚಾಲನೆ ಸಿಕ್ಕಿದ್ದರೂ ಕೆಲ ಹಿರಿಯ ಇನ್​ಸ್ಪೆಕ್ಟರ್​ಗಳು ಮುಂಬಡ್ತಿ ನಿರಾಕರಿಸಿ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಬಡ್ತಿ ಪಡೆದರೆ ಖಾಕಿ ಸಮವಸ್ತ್ರ ಧರಿಸಲಾಗದೆಂಬುದರ ಜತೆಗೆ, ‘ಕಲೆಕ್ಷನ್’ ಮಾಡಲಾಗದೆಂಬುದು ಸಹ ಕಾರಣ ಎಂಬ ಮಾತು ಕೇಳಿಬರುತ್ತಿದೆ.

ರಾಜ್ಯಾದ್ಯಂತ 30 ಎಆರ್​ಟಿಒ ಹುದ್ದೆಗಳಿಗೆ ಬಡ್ತಿ ಕೊಡಲಾಗುತ್ತಿದೆ. ಜ್ಯೇಷ್ಠತೆ ಆಧಾರದಲ್ಲಿ ಬಡ್ತಿಗೆ ಅರ್ಹರಿರುವ ಮೋಟಾರು ವಾಹನ ಸೀನಿಯರ್ ಇನ್​ಸ್ಪೆಕ್ಟರ್​ಗಳ ಪಟ್ಟಿ ಸಿದ್ಧಪಡಿಸಲಾಗಿದೆ. ಆದರೆ, 10ಕ್ಕೂ ಹೆಚ್ಚು ಇನ್​ಸ್ಪೆಕ್ಟರ್​ಗಳು ಅನಾರೋಗ್ಯ, ಕೌಟುಂಬಿಕ ಸಮಸ್ಯೆ ಇನ್ನಿತರ ಕಾರಣ ನೀಡಿ ಬಡ್ತಿ ಬದಲಾಗಿ ಈಗಿರುವ ಹುದ್ದೆಯಲ್ಲೇ ಕಾರ್ಯನಿರ್ವಹಿಸುವುದಾಗಿ ಸಾರಿಗೆ ಇಲಾಖೆಗೆ ಪತ್ರ ಬರೆದಿದ್ದಾರೆ.

ಕರ್ತವ್ಯ ನಿರ್ವಹಿಸುತ್ತಿರುವ ಸೀನಿಯರ್ ಇನ್​ಸ್ಪೆಕ್ಟರ್​ಗಳು ನಾನ್ ಗೆಜೆಟೆಡ್ ಬಿ ಶ್ರೇಣಿಯಲ್ಲಿ ಬರುತ್ತಾರೆ. ಎಆರ್​ಟಿಒ ಹುದ್ದೆಗೆ ಬಡ್ತಿಯಾದರೆ ಬಿ ಶ್ರೇಣಿ ಗೆಜೆಟೆಡ್ ಆಫೀಸರ್ ಹುದ್ದೆಗೆ ಹೋಗುತ್ತಾರೆ. ಉನ್ನತ ಶ್ರೇಣಿ ಹುದ್ದೆ ಅಲಂಕರಿಸಿದ ನಂತರ ಆಡಳಿತಾತ್ಮಕ ವಿಚಾರಗಳ ಉಸ್ತುವಾರಿ ನೋಡಿಕೊಳ್ಳಬೇಕು. ಅಧಿಕಾರಿಯಾಗಿ ಪರಿಗಣನೆಯಾಗುವುದರಿಂದ ಇನ್​ಸ್ಪೆಕ್ಟರ್​ಗಳಂತೆ ಖಾಕಿ ಸಮವಸ್ತ್ರ ಧರಿಸಿ ಕರ್ತವ್ಯ ನಿರ್ವಹಿಸಲಾಗಲ್ಲ. ಕಾನೂನು ಬಾಹಿರವಾಗಿ ಓಡಾಡುವ ವಾಹನಗಳ ವಿರುದ್ಧದ ಕಾರ್ಯಾಚರಣೆ, ಜಪ್ತಿ, ಎಲ್​ಎಲ್/ಡಿಎಲ್, ವಾಹನ ನೋಂದಣಿ ಕೆಲಸದಲ್ಲೂ ನೇರವಾಗಿ ಭಾಗಿಯಾಗಲು ಸಾಧ್ಯವಿಲ್ಲ.

ಹಲವರಿಗೆ ಅನ್ಯಾಯ

ಮಂಜೂರಾಗಿರುವ 168 ಸೀನಿಯರ್ ಇನ್​ಸ್ಪೆಕ್ಟರ್ ಹುದ್ದೆಗಳಲ್ಲಿ 29 ಖಾಲಿ ಇವೆ. ಈಗ 30 ಜನ ಎಆರ್​ಟಿಒ ಹುದ್ದೆಗೆ ಬಡ್ತಿ ಹೊಂದಿದರೆ 59 ಸೀನಿಯರ್ ಇನ್​ಸ್ಪೆಕ್ಟರ್ ಹುದ್ದೆ ಖಾಲಿ ಉಳಿಯುತ್ತವೆ. 10 ಜನ ಎಆರ್​ಟಿಒ ಬಡ್ತಿ ಬೇಡವೆಂದರೆ ಇನ್​ಸ್ಪೆಕ್ಟರ್ ಹುದ್ದೆಯಿಂದ ಸೀನಿಯರ್ ಹುದ್ದೆಗೆ ಬಡ್ತಿ ಹೊಂದಬೇಕಾದವರಿಗೆ ಅನ್ಯಾಯವಾಗುತ್ತದೆ. ಖಾಲಿ ಉಳಿದಿರುವ ಸೀನಿಯರ್ ಇನ್​ಸ್ಪೆಕ್ಟರ್ ಹುದ್ದೆಗೆ ಇನ್​ಸ್ಪೆಕ್ಟರ್​ಗಳಿಗೆ ಬಡ್ತಿ ಕೊಟ್ಟರೆ ಕೆಲಸದ ಒತ್ತಡವೂ ಕಡಿಮೆಯಾಗುತ್ತದೆ.

ಕಾರಣಗಳೇನು
  • ಆರ್​ಟಿಒ ಕಚೇರಿಯಲ್ಲೇ ಕುಳಿತು ಆಡಳಿತಾತ್ಮಕ ಆದೇಶ ಹೊರಡಿಸಲಷ್ಟೇ ಸೀಮಿತ
  • ಸಮವಸ್ತ್ರ ಧರಿಸಲು, ಕಾರ್ಯಾಚರಣೆ ಗಿಳಿಯಲು ಆಗಲ್ಲ. ಹಣ ಕಲೆಕ್ಷನ್ ಸಾಧ್ಯವಿಲ್ಲ
  • ಕಚೇರಿಯ ಪ್ರತಿಯೊಂದು ಆಡಳಿತಾತ್ಮಕ ವಿಚಾರಕ್ಕೂ ಹೊಣೆ ಹೊರಬೇಕಾಗುತ್ತದೆ

ಅರ್ಹತೆ ಹೊಂದಿರುವ ಸೀನಿಯರ್ ಇನ್​ಸ್ಪೆಕ್ಟರ್​ಗಳಿಗೆ ಎಆರ್​ಟಿಒ ಹುದ್ದೆಗೆ ಬಡ್ತಿ ಕೊಡಲು ಪರಿಗಣಿಸಲಾಗುತ್ತದೆ. ಬಡ್ತಿ ಬೇಡವೆಂದು ಕೆಲವರು ಪತ್ರ ಬರೆದಿರಬಹುದು. ಬಡ್ತಿ ಪ್ರಕ್ರಿಯೆ ವೇಳೆ ಪರಿಶೀಲಿಸಿ ನಿಯಮದ ಪ್ರಕಾರ ಕ್ರಮ ತೆಗೆದುಕೊಳ್ಳಲಾಗುತ್ತದೆ. | ಎನ್.ಶಿವಕುಮಾರ್ ಆಯುಕ್ತರು, ಸಾರಿಗೆ ಇಲಾಖೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net