More

    ಮೂರು ತಿಂಗಳ ಲಾಕ್​ಡೌನ್​ನಲ್ಲಿ ಏನೆಲ್ಲಾ ಆಗಿ ಹೋಯ್ತು!

    ಚಿರಂಜೀವಿ ಸರ್ಜಾ ಅವರ ನಿಧನ, ಕನ್ನಡ ಚಿತ್ರರಂಗವನ್ನು ಅಕ್ಷರಶಃ ಕಂಪಿಸಿದೆ. ಏಕೆಂದರೆ, ಚಿರು ಅವರದ್ದು ಸಾಯುವ ವಯಸ್ಸಲ್ಲ. ಕೇವಲ 35ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ಅವರು ಮೃತಪಟ್ಟ ಸುದ್ದಿ ಬರೀ ಕನ್ನಡ ಚಿತ್ರರಂಗವನ್ನಷ್ಟೇ ಅಲ್ಲ, ಇಡೀ ಭಾರತೀಯ ಚಿತ್ರರಂಗದಲ್ಲೇ ದೊಡ್ಡ ಸುದ್ದಿಯಾಗಿದೆ. ಭಾರತೀಯ ಚಿತ್ರರಂಗದ ಹಲವು ಗಣ್ಯರು ಚಿರಂಜೀವಿ ಸರ್ಜಾ ಅವರ ಸಾವಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ.

    ಇದನ್ನೂ ಓದಿ: ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ನಿಧನ!; ಟ್ರೋಲ್​ ಆಗ್ತಿದೆ ಲೇಖಕಿ ಶೋಭಾ ಡೇ ಟ್ವಿಟರ್ ಪೋಸ್ಟ್​!

    ಹಾಗೆ ನೋಡಿದರೆ, ಕಳೆದ ಮೂರು ತಿಂಗಳಲ್ಲಿ ಕನ್ನಡ ಮತ್ತು ಹಿಂದಿ ಚಿತ್ರರಂಗಗಳೆರಡೂ ಗಣ್ಯರ ಸಾವಿನಿಂದ ತತ್ತರಿಸಿದೆ ಎಂದರೆ ತಪ್ಪಿಲ್ಲ. ಪ್ರಮುಖವಾಗಿ ಏಪ್ರಿಲ್​ ತಿಂಗಳ ಎರಡನೆಯ ವಾರದಲ್ಲಿ ಬುಲೆಟ್​ ಪ್ರಕಾಶ್​ ಅವರ ಸಾವು ಮೊದಲು ಶಾಕ್​ ನೀಡಿತು. ಇತ್ತೀಚಿನ ವರ್ಷಗಳಲ್ಲಿ ತೀವ್ರ ಅನಾರೋಗ್ಯಕ್ಕೆ ಈಡಾಗಿದ್ದ ಬುಲೆಟ್​ ಪ್ರಕಾಶ್​ ಅವರು ಬಹು ಅಂಗಾಂಗ ವೈಫಲ್ಯದಿಂದ ನಿಧನರಾದರು. ಲಾಕ್​ಡೌನ್​ ಉತ್ತುಂಗದಲ್ಲಿದ್ದರಿಂದ, ಅವರ ಅಂತಿಮ ದರ್ಶನ ಸಹ ಕನ್ನಡ ಚಿತ್ರರಂಗದ ಹಲವು ಸೆಲೆಬ್ರಿಟಿಗಳಿಗೆ ಸಾಧ್ಯವಾಗಲಿಲ್ಲ.

    ಇದಾಗಿ ತಿಂಗಳು ಮುಗಿಯುತ್ತಿದ್ದಂತೆಯೇ ಬಾಲಿವುಡ್​ನ ಇಬ್ಬರು ಜನಪ್ರಿಯ ನಟರ ಸಾವು, ಬರೀ ಹಿಂದಿ ಚಿತ್ರರಂಗವನ್ನಷ್ಟೇ ಅಲ್ಲ, ಇಡೀ ದೇಶವನ್ನೇ ಅಲುಗಾಡಿಸಿತು. ಏಪ್ರಿಲ್​ 29ರಂದು ಇರ್ಫಾನ್​ ಖಾನ್​ ಅವರು ನಿಧನರಾದರೆ, ಅದಾದ ಮರುದಿನವೇ ಅಂದರೆ ಏಪ್ರಿಲ್​ 30ರಂದು ಹಿರಿಯ ನಟ ರಿಷಿ ಕಪೂರ್​ ನಿಧನರಾದರು. ಈ ಇಬ್ಬರೂ ಜನಪ್ರಿಯ ಕಲಾವಿದರು ಕ್ಯಾನ್ಸರ್​ನಿಂದ ಬಳಲುತ್ತಿದ್ದುದು ದುರಂತ. ಈ ಇಬ್ಬರೂ ನಟರು ಒಂದೇ ದಿನದ ಅಂತರದಲ್ಲಿ ನಿಧನರಾಗಿದ್ದಷ್ಟೇ ಅಲ್ಲ, ಅವರ ಸಾವಿನ ನೋವಿನಿಂದ ಬಾಲಿವುಡ್​ ಇನ್ನೂ ಪೂರ್ಣವಾಗಿ ಹೊರಬಂದಿಲ್ಲ.

    ಇದನ್ನೂ ಓದಿ: ಚಿರು ಸಾವು ಕಂಡು ನಿನ್ನೆಯಿಂದ ಹುಚ್ಚನಂತಾಗಿರುವೆ: ಜಗ್ಗೇಶ್​

    ಮೇನಲ್ಲಿ ಮತ್ತೆ ಕನ್ನಡ ಚಿತ್ರರಂಗಕ್ಕೆ ಇನ್ನೊಂದು ಆಘಾತವಾಯಿತು. ಜನಪ್ರಿಯ ನಟ ಮೈಕಲ್​ ಮಧು ಅವರು ಹೃದಯಾಘಾತದಿಂದ ನಿಧನರಾದರು. ಅದಾಗಿ ಕೆಲವು ದಿನಗಳ ನಂತರ ಹಿಂದಿ ಚಿತ್ರರಂಗದ ಜನಪ್ರಿಯ ಸಂಗೀತ ನಿರ್ದೇಶಕ ವಾಜಿದ್​ (ಸಾಜಿದ್​-ವಾಜಿದ್​) ನಿಧನರಾದರು.

    ಇನ್ನೇನು ಲಾಕ್​ಡೌನ್​ ಸಂಪೂರ್ಣವಾಗಿ ಮುಗಿಯುವ ಒಂದು ದಿನದ ಹಿಂದೆ, ಅಂದರೆ ಮೇ 7ರಂದು ಕನ್ನಡ ಚಿತ್ರರಂಗದಲ್ಲಿ ಯುವ ಸಾಮ್ರಾಟ್​ ಎಂದೇ ಖ್ಯಾತರಾಗಿದ್ದ ಚಿರಂಜೀವಿ ಸರ್ಜಾ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರ ಅಂತ್ಯಸಂಸ್ಕಾರ ಸೋಮವಾರ ಬೆಂಗಳೂರಿನಲ್ಲಿ ಮುಗಿದಿದೆ.

    ಒಟ್ಟಾರೆ ಮೂರು ತಿಂಗಳುಗಳ ಅಂತರದಲ್ಲಿ ಕನ್ನಡ ಮತ್ತು ಹಿಂದಿ ಚಿತ್ರರಂಗದ ಒಂದಿಷ್ಟು ಖ್ಯಾತನಾಮರು ನಿಧನರಾಗಿದ್ದಾರೆ. ಅವರ ಸಾವಿನಿಂದ ಚಿತ್ರರಂಗಕ್ಕೆ ನಷ್ಟವಾಗಿದ್ದಷ್ಟೇ ಅಲ್ಲ, ಅದರಿಂದ ಚಿತ್ರರಂಗವೇ ಅಕ್ಷರಶಃ ಶಾಕ್​ ಆಗಿದೆ ಎಂದರೆ ತಪ್ಪಿಲ್ಲ.

    ಮಣ್ಣಲ್ಲಿ ಮಣ್ಣಾದ ಚಿರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts