

ಭಾನುವಾರ ಹೃದಯಾಘಾತದಿಂದ ನಿಧನರಾದ ಸ್ಯಾಂಡಲ್ವುಡ್ ನಟ ಚಿರಂಜೀವಿ ಸರ್ಜಾ ಅವರನ್ನು ನೆನೆದು ಕನ್ನಡ ಚಿತ್ರರಂಗ ಕಂಬನಿ ಮಿಡಿದಿದೆ. ಅದರಲ್ಲೂ ಹಿರಿಯ ನಟ ಜಗ್ಗೇಶ್, ತಮ್ಮ ಮತ್ತು ಚಿರಂಜೀವಿ ಸರ್ಜಾ ಅವರ ಸಂಬಂಧವನ್ನು ನೆನಪಿಸಿಕೊಂಡು ಸಾಕಷ್ಟು ಮಾತನಾಡಿದ್ದರು. ಅಷ್ಟೇ ಅಲ್ಲ, ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್ ಅವರನ್ನು ಹೇಗೆ ಒಂದುಗೂಡಿಸಿದ್ದಾಗಿ ಹೇಳಿದ್ದರು.
ಚಿರಂಜೀವಿ ಸರ್ಜಾ ಅವರ ಸಾವಿನಿಂದ, ನಿನ್ನೆಯಿಂದ ಹುಚ್ಚನಂತಾಗಿರುವೆ ಎಂದು ಜಗ್ಗೇಶ್ ಟ್ವೀಟ್ ಮಾಡಿದ್ದಾರೆ. ಚಿರಂಜೀವಿ ಸರ್ಜಾ ಅವರ ಅಂತ್ಯಸಂಸ್ಕಾರ ಇಂದು ಮಧ್ಯಾಹ್ನ ನಡೆಯಲಿದ್ದು, ಅದಕ್ಕೂ ಮುನ್ನ ಅವರ ಮನೆಯಲ್ಲಿ ಕೆಲವು ಧಾರ್ಮಿಕ ವಿಧಿ-ವಿಧಾನಗಳು ನಡೆಯುತ್ತಿವೆ. ಈ ಸಂದರ್ಭದಲ್ಲಿ ಚಿರು ಅವರ ತಂದೆ ವಿಜಯಕುಮಾರ್ ಅವರು ಮಗನ ವಿಧಿವಿಧಾನದಲ್ಲಿ ಭಾಗವಹಿಸಿರುವುದನ್ನು ನೋಡಿ ತಮಗೆ ದುಃಖ ತಡೆಯಲಾಗುತ್ತಿಲ್ಲ ಎಂದು ಜಗ್ಗೇಶ್ ಹೇಳಿಕೊಂಡಿದ್ದಾರೆ.
ಒಬ್ಬ ತಂದೆ ಮಗನ ಅಂತ್ಯಕ್ರಿಯೆ ವಿಧಿವಿಧಾನ ಮಾಡುವುದು ನೋಡಿ ದುಃಖ ತಡೆಯಲಾಗಲಿಲ್ಲಾ. ಬಾಳಿಬದುಕಬೇಕಿದ್ದ ಕಂದಮ್ಮ. ನೆನ್ನೆಯಿಂದ ಹುಚ್ಚನಂತಾಗಿರುವೆ, ಚಿರು ಸಾವುಕಂಡು! ಮೇಘಳ ನೋಡಿ ನನಗೂ ಪರಿಮಳನಿಗೆ ಅಳು ತಡೆಯಲಾಗಲಿಲ್ಲಾ. ಪರಿಮಳ ವಿಧಿಶಪಿಸಿ ಎದ್ದು ಹೋಗಿಬಿಟ್ಟಳು. ಹಾಳಾದ್ದು ಕರೊನಾ ಮನುಕುಲ ಸೇರದಂತೆ ಏಕಾಂಗಿ ಮಾಡಿಬಿಟ್ಟಿತು! ಓಂ ಶಾಂತಿ ಚಿರು ಕಂದ ಎಂದು ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.
ಇನ್ನು, ಚಿರಂಜೀವಿ ಸರ್ಜಾ ಅವರ ಅಂತಿಮ ಸಂಸ್ಕಾರ ಕನಕಪುರ ರಸ್ತೆಯಲ್ಲಿರುವ ನೆಲಗುಳಿಯ ಧ್ರುವ ಸರ್ಜಾ ಅವರ ಬೃಂದಾವನ ಫಾರ್ಮ್ ಹೌಸ್ನಲ್ಲಿ ನಡೆಯಲಿದೆ. ಅಲ್ಲಿ ಭರದಿಂದ ಕೆಲಸಗಳು ನಡೆಯುತ್ತಿದ್ದು, ಇಂದು ಮಧ್ಯಾಹ್ನ ಚಿರು ಅವರ ಪಾರ್ತೀವ ಶರೀರವನ್ನು ಅಲ್ಲಿಗೆ ಕೊಂಡಯ್ಯಲಾಗುತ್ತದೆ.