ಜೂನ್​ ತಿಂಗಳು ಸರ್ಜಾ ಕುಟುಂಬಕ್ಕೆ ಅಪಶಕುನವೇ? ಈ ಹಿಂದೆ ನಡೆದಿತ್ತೊಂದು ದುರಂತ!

collage (2)
Published on

ಬೆಂಗಳೂರು: ಕರುನಾಡು ಸದ್ಯ ಶೋಕದ ಮಡುವಿನಲ್ಲಿದೆ. ಚಿರು ಸರ್ಜಾ ನಿಧನದ ಹಿನ್ನೆಲೆಯಲ್ಲಿ ಅಭಿಮಾನಿಗಳು, ಆಪ್ತರು, ಸಿನಿಮಾ ಸಹೋದ್ಯೋಗಿಗಳು ನೆಚ್ಚಿನ ಮಗು ಮನಸಿನ ನಟನಿಗೆ ಕಂಬನಿ ಮಿಡಿಯುತ್ತಿದ್ದಾರೆ. ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಬಸವನಗುಡಿಯ ಮನೆ ಬಳಿ ಆಗಮಿಸಿ ಅಂತಿಮ ನಮನ ಸಲ್ಲಿಸುತ್ತಿದ್ದಾರೆ. ಆದರೆ, ಇಂಥ ದುರ್ಘಟನೆ ಕಳೆದ 11 ವರ್ಷದ ಹಿಂದೆ ಜೂನ್​ ತಿಂಗಳಲ್ಲಿಯೇ ಸರ್ಜಾ ಕುಟುಂಬದಲ್ಲಿ ಘಟಿಸಿತ್ತು ಎಂದರೆ ನೀವು ನಂಬಲೇಬೇಕು!

ಹೌದು, ಚಿರಂಜೀವಿ ಸರ್ಜಾ ಸೋದರ ಮಾವ, ಅರ್ಜುನ್​ ಸರ್ಜಾ ಅಣ್ಣ ಕಿಶೋರ್​ ಸರ್ಜಾ ಸಹ ಜೂನ್​ ತಿಂಗಳಲ್ಲಿಯೇ ದುರಂತ ಸಾವನ್ನಪ್ಪಿದ್ದರು. ತೀವ್ರ ಹೃದಯಾಘಾತದಿಂದ ಮಲ್ಲೇಶ್ವರದ ಮಣಿಪಾಲ್​ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. ಆ ಸಾವು ಆವತ್ತು ಸರ್ಜಾ ಕುಟುಂಬಕ್ಕೆ ಬರಸಿಡಿಲು ಬಡಿದಂತಾಗಿತ್ತು. ಇದೀಗ ಆವತ್ತಿನ ನೋವು ಮರೆತು ಹಗುರಾಯಿತು ಎನ್ನುವಷ್ಟರಲ್ಲೇ, ಇದೀಗ ಯುವ ನಟ 39 ವರ್ಷದ ಚಿರಂಜೀವಿ ಸರ್ಜಾ ಸಾವು ಗಾಯದ ಮೇಲೆ ಬರೆ ಎಳೆದಂತಾಗಿದೆ. ಅದೂ ಜೂನ್ ತಿಂಗಳಲ್ಲೇ ಎಂಬುದು ದುರಂತ!

2009ರಲ್ಲಿ ಚಿರು ಸರ್ಜಾನನ್ನು ಸ್ಯಾಂಡಲ್​ವುಡ್​ಗೆ ಪರಿಚಯಿಸುವ ಹೊಣೆ ಹೊತ್ತಿದ್ದ ಮಾವ ಕಿಶೋರ್​ ಸರ್ಜಾ, ‘ವಾಯುಪುತ್ರ’ ಸಿನಿಮಾ ಕೈಗೆತ್ತಿಕೊಂಡಿದ್ದರು. ಆ ಚಿತ್ರಕ್ಕೆ ಕಿರಿ ಮಾವ ಅರ್ಜುನ್​ ಸರ್ಜಾ ಬಂಡವಾಳ ಹೂಡಿದ್ದರು. ಸಿನಿಮಾ ಸಿದ್ಧವಾಯ್ತು, ಇನ್ನೇನು ತೆರೆಕಾಣಬೇಕೆನ್ನುವಷ್ಟರಲ್ಲಿಯೇ ಜೂನ್​ 27ಕ್ಕೆ ಕಿಶೋರ್​ ಸರ್ಜಾ ಇಹಲೋಕ ತ್ಯಜಿಸಿದರು. ಮಾವನ ಸಾವಿನ ನೋವಲ್ಲೇ 2009 ಸೆಪ್ಟೆಂಬರ್​ 3ರಂದು ‘ವಾಯುಪುತ್ರ’ ಸಿನಿಮಾ ತೆರೆಕಂಡಿತು.

ಒಟ್ಟಿನಲ್ಲಿ, ಜೂನ್​ ತಿಂಗಳು ಸರ್ಜಾ ಕುಟುಂಬಕ್ಕೆ ಒಂದರ ಮೇಲೆ ಒಂದು ಆಘಾತ ಎದುರಾಗುತ್ತಿದೆ. ಅಪಾರ ಪ್ರಮಾಣದ ಅಭಿಮಾನಿಗಳಿಗೂ ಚಿರು ಸಾವನ್ನು ಅರಗಿಸಿಕೊಳ್ಳಲು ಸಾದ್ಯವಾಗುತ್ತಿಲ್ಲ. ದೂರದ ಊರುಗಳಿಂದ ಆಗಮಿಸಿ ನೆಚ್ಚಿನ ನಟನಿಗೆ ಕೊನೆಯ ವಿದಾಯ ಹೇಳುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net