

ಟೋಕಿಯೋ: ಪುಟ್ಟ ರಾಷ್ಟ್ರ ಜಪಾನ್ ಅಭಿವೃದ್ಧಿ ಹೊಂದಿದ, ಜಗತ್ತಿನ ಪ್ರಮುಖ ದೇಶಗಳಲ್ಲೊಂದಾಗಿ ಪರಿಗಣಿಸಲ್ಪಡುತ್ತದೆ. ಆರಂಭದಲ್ಲೇ ಕರೊನಾ ಸೋಂಕು ವಕ್ಕರಿಸಿ ಇಡೀ ದೇಶವನ್ನು ತಲ್ಲಣಗೊಳಿಸಿತ್ತು. ಆದರೆ ದಿಲ್ಲವನ್ನು ಹಿಮ್ಮೆಟ್ಟಿಸಿ ಜಪಾನ್ ಜಗತ್ತೇ ಬೆರಗಾವಂತೆ ಮಾಡಿದೆ.
ಇಲ್ಲಿ ಲಾಕ್ಡೌನ್ ಇರಲಿಲ್ಲ, ಜನ ಹಹಾಗೂ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಿರಲಿಲ್ಲ, ಹೋಟೆಲ್, ಸಲೂನ್ಗಳನ್ನು ಬಂದ್ ಮಾಡಿರಲಿಲ್ಲ. ಎಲ್ಲಕ್ಕೂ ಮುಖ್ಯವಾಗಿ ಇಡೀ ದೇಶದ ಜನರನ್ನು ಸಾಮೂಹಿಕವಾಗಿ ಆರೋಗ್ಯ ತಪಾಸಣೆಗೆ ಒಳಪಡಿಸಿರಲಿಲ್ಲ. ಕರೊನಾ ನಿಯಂತ್ರಣಕ್ಕೆಂದೇ ವಿಶೇಷ ಕೇಂದ್ರವನ್ನು ರೂಪಿಸಿರಲಿಲ್ಲ. ತಾಂತ್ರಿಕವಾಗಿ ಮುಂದುವರಿದಿದ್ದರೂ ಸೋಂಕು ಪತ್ತೆಗಾಗಿ ಸೂಪರ್ ಆ್ಯಪ್ಅನ್ನು ತಯಾರಿಸಿರಲಿಲ್ಲ. ಹೀಗಿದ್ದರೂ ಜಪಾನ್ನಲ್ಲಿ ಸೋಂಕು ನಿಯಂತ್ರಣಕ್ಕೆ ಬಂದಿದ್ದೇಗೆ ಎಂಬುದು ಜಗತ್ತನ್ನು ಅಚ್ಚರಿಗೆ ತಳ್ಳಿದೆ.
ಕಳೆದ ಕೆಲ ದಿನಗಳಿಂದ ಜಪಾನ್ನಲ್ಲಿ ದಿನವೂ ಹತ್ತಾರು ಪ್ರಕರಣಗಳಷ್ಟೇ ವರದಿಯಾಗುತ್ತಿವೆ. ಹೀಗಾಗಿ ಈವರೆಗೆ ಘೋಷಿಸಿದ್ದ ತುರ್ತು ಪರಿಸ್ಥಿತಿಯನ್ನು ಹಿಂಪಡೆಯಲಾಗಿದೆ. ವಯಸ್ಸಾದವರು ಹೆಚ್ಚಾಗಿದ್ದರೂ ಇಲ್ಲಿ ಕರೊನಾದಿಂದ ಮೃತಪಟ್ಟವರ ಸಂಖ್ಯೆ ಒಂದು ಸಾವಿರ. ಉಳಿದ ಅಭಿವೃದ್ಧಿ ಹೊಂದಿದ ದೇಶಗಳಿಗೆ ಹೋಲಿಸಿದಲ್ಲಿ ಅತಿ ಕಡಿಮೆ.
ಸಂಪರ್ಕ ಪತ್ತೆ: ಕರೊನಾ ನಿಯಂತ್ರಣಕ್ಕೆ ಹಲವಾರು ಅಂಶಗಳು ಕಾರಣವಾಗಿವೆ ಎಂದು ವಾಸೆದಾ ವಿವಿ ಪ್ರಾಧ್ಯಾಪಕ ಮಿಕಿಹಿತೋ ಟನಾಕಾ ಹೇಳುತ್ತಾರೆ. ಕೊರೊನಾ ನಿಯಂತ್ರಿಸುವಲ್ಲಿ ಸಂಪರ್ಕ ಪತ್ತೆ ಅತ್ಯಂತ ಪ್ರಮುಖವಾಗಿದೆ. ಎರಡು ವರ್ಷಗಳ ಹಿಂದೆ 50 ಸಾವಿರಕ್ಕೂ ಅಧಿಕ ದಾದಿಯರಿಗೆ ವೈರಸ್ ಸೋಂಕು ಹಾಗೂ ಸಂಪರ್ಕಕ್ಕೆ ಒಳಗಾದವರನ್ನು ಪತ್ತೆ ಹಚ್ಚುವ ತರಬೇತಿ ನೀಡಲಾಗಿತ್ತು. ಹೀಗಾಗಿ ಕರೊನಾ ಸೋಂಕಿತರ ಸಂಪರ್ಕದಲ್ಲಿರುವವರನ್ನು ಹುಡುಕಲು ಜಪಾನ್ಗೆ ಯಾವುದೇ ಆ್ಯಪ್ನ ಅಗತ್ಯ ಬೀಳಲಿಲ್ಲ. ಇವರು ತ್ವರಿತವಾಗಿ ಶಂಕಿತರನ್ನು ಹುಡುಕಿ ಚಿಕಿತ್ಸೆ ಕೊಡಿಸುವಲ್ಲಿ ಯಶಸ್ವಿಯಾದರು.
ಡೈಮಂಡ್ ಪ್ರಿನ್ಸೆಸ್ ಹಡಗು: ಜಪಾನ್ ಕರಾವಳಿಯಲ್ಲಿ ಫೆಬ್ರವರಿಯಲ್ಲಿ ಬೀಡುಬಿಟ್ಟಿದ್ದ ಡೈಮಂಡ್ ಪ್ರಿನ್ಸೆಸ್ ಹಡಗು ಇಲ್ಲಿನ ಜನರಲ್ಲಿ ಅರಿವು ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿತು. ಮನೆ ಮುಂದೆ ಉರಿಯುತ್ತಿರುವ ಕಾರಿದ್ದರೆ ಅದರಿಂದ ದೂರವಿರಲು ಎಲ್ಲ ಮಾರ್ಗಗಳನ್ನು ಜನರು ಹುಡುಕಿಕೊಳ್ಳುತ್ತಾರೆ. ಜಪಾನ್ ವಿಷಯದಲ್ಲೂ ಹೀಗೇ ಆಯಿತು. ಜತೆಗೆ ಕರೊನಾ ಸಂಕಷ್ಟವನ್ನು ಬೇರಾವುದೇ ದಶದ ಸಮಸ್ಯೆ ಎಂದು ಜಪಾನ್ ಪರಿಗಣಿಸಲಿಲ್ಲ.
ವ್ಯಕ್ತಿಗತ ಅಂತರವನ್ನು ಕಾಯ್ದುಕೊಳ್ಳುವುದು ಎಲ್ಲ ಸಮಯಗಳಲ್ಲೂ ಸಾಧ್ಯವಾಗದು. ಹೀಗಾಗಿ ಕ್ಲೋಸ್ಡ್ ಸ್ಪೇಸ್ಸ್, ಕ್ರೌಡೆಡ್ ಸ್ಪೇಸಸ್ ಹಾಗೂ ಕ್ಲೋಸ್-ಕಾಂಟಾಕ್ಟ್ ನಿಯಮಗಳನ್ನು ಪಾಲಿಸುವಂತೆ ಸೂಚಿಸಲಾಗಿತ್ತು.
ಔಷಧಗಳ ಪ್ರಭಾವ: ಕರೊನಾ ರೋಗಿಗಳ ಚಿಕಿತ್ಸೆಗಾಗಿ ರೆಮ್ಡೆಸಿವಿರ್ ಹಾಗೂ ಜಪಾನ್ನ ಆವಿಗಾನ್ ಮಾತ್ರೆಯನ್ನು ನೀಡಲಾಯಿತು. ಇವು ರೋಗಿಗಳ ಚೇತರಿಕೆಯ ಅವಧಿಯನ್ನು ಗಣನೀಯವಾಗಿ ಕಡಿಮೆಗೊಳಿಸಿದವು.
ಆರೋಗ್ಯ ಕಾಳಜಿ: ಜಪಾನಿಯರು ಸದಾ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಾರೆ. ಇದೇ ಅವರನ್ನು ಸೋಂಕಿನಿಂದ ದೂರವಿರಿಸಿ ಕಾಪಾಡಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ವೈರಸ್ ಭಯಂಕರವಾಗಿರಲಿಲ್ಲ: ಜಗತ್ತಿನ ವಿವಿಧೆಡೆ ವ್ಯಾಪಿಸಿದ ಕರೊನಾ ವೈರಸ್ಗೂ ಇಲ್ಲಿನ ಕರೊನಾಗೂ ವ್ಯತ್ಯಾಸವಿತ್ತು. ಉಳಿಧೆಡೆಗಳಂತೆ ಅದು ತೀರಾ ಮಾರಕವಾಗಿರಲಿಲ್ಲ ಎಂದು ವೈದ್ಯರು ಹೇಳುತ್ತಾರೆ.
ಇಷ್ಟೆಲ್ಲ ಇದ್ದರೂ ಕರೊನಾದ ಎರಡನೇ ಅಲೆ ಅಪ್ಪಳಿಸುವ ಬಗ್ಗೆ ಜಪಾನ್ ಎಚ್ಚರಿಕೆ ವಹಿಸಿದೆ. ಅದೇನಾದರೂ ತೀರಾ ಸಂಕಷ್ಟ ತಂದಿಟ್ಟರೆ ದೇಶದ ಆರೋಗ್ಯ ವ್ಯವಸ್ಥೆ ಮೇಲೆ ತೀವ್ರ ಪರಿಣಾಮ ಬೀರಲಿದೆ ಎಂದು ವಿಶ್ಲೇಷಿಸಲಾಗಿದೆ.