ಫುಟ್​ಪಾತ್​ನಲ್ಲಿದ್ದವರಿಗೆ ಊಟ ಹಂಚಲು ಹೋದವ ಹೊಸ ಬದುಕನ್ನೂ ನೀಡಿದ

Wedding
Published on

ಕಾನ್ಪುರ: ಕರೊನಾ ವೈರಸ್​ ಮಾನವರಲ್ಲಿ ಮಾನವೀಯತೆ ಗುಣವನ್ನು ಹೆಚ್ಚಿಸಿದೆ ಎನ್ನಬಹುದು. ಉಳ್ಳವರು ಇಲ್ಲದವರಿಗೆ ಸಹಾಯ ಹಸ್ತ ಚಾಚುತ್ತಿದ್ದಾರೆ. ತಮ್ಮಲ್ಲಿರುವುದನ್ನೇ ಹಂಚಿಕೊಂಡು ಬದುಕು ಸಾಗಿಸುವ ಬುದ್ಧಿಯನ್ನು ಈ ಕೋವಿಡ್​ ಕಾಲ ನೀಡಿದೆ.

ಅಂತೆಯೇ ತನ್ನ ಉದ್ಯೋಗದಾತನೊಂದಿಗೆ ಸಂಕಷ್ಟದಲ್ಲಿರುವ ವ್ಯಕ್ತಿಗಳಿಗೆ ಊಟ ಹಂಚಲು ಹೋಗುತ್ತಿದ್ದ ವ್ಯಕ್ತಿಯೊಬ್ಬ ಭಿಕ್ಷೆ ಬೇಡುತ್ತಿದ್ದ ಯುವತಿಗೆ ಹೊಸ ಬದುಕನ್ನು ನೀಡಿದ್ದಾನೆ. ಲಾಕ್​​ಡೌನ್​ ನಡುವೆಯೇ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅನಿಲ್​ ಹಾಗೂ ನೀಲಂ ಹೊಸ ಜೀವನ ಆರಂಭಿಸಿದ್ದಾರೆ.

ಇಲ್ಲಿನ ಕಾಕಾದೇವ್​ ಪ್ರದೇಶದಲ್ಲಿ ಕಾರು ಚಾಲಕ ಅನಿಲ್​ ತನ್ನ ಮಾಲೀಕನೊಂದಿಗೆ ಊಟ ಹಂಚಲು ಹೋಗುತ್ತಿದ್ದ. ಆಗ ಅಲ್ಲಿ ಭಿಕ್ಷೆ ಬೇಡುತ್ತಿದ್ದ ನೀಲಂ ಪರಿಚಯವಾಗಿದೆ. ಆಕೆಯ ತಂದೆ ತುಂಬಾ ವರ್ಷಗಳ ಹಿಂದೆ ಮೃತಪಟ್ಟಿದ್ದರು. ತಾಯಿಗೆ ಲಕ್ವಾ ಆಗಿತ್ತು. ಆಕೆಯ ಸಹೋದರ ಮತ್ತು ನಾದಿನಿ ನೀಲಂಳನ್ನು ಮನೆಯಿಂದ ಹೊರ ಹಾಕಿದ್ದರು. ಹೀಗಾಗಿ ಆಕೆಗೆ ಭಿಕ್ಷೆ ಬೇಡುವುದು ಬಿಟ್ಟರೆ ಬೇರೆ ಮಾರ್ಗ ಕಂಡಿರಲಿಲ್ಲ. ಅದರೆ ಲಾಕ್​ಡೌನ್​ನಿಂದಾಗಿ ಬದುಕು ಇನ್ನಷ್ಟು ಕಷ್ಟವಾಗಿತ್ತು.

ನೀಲಂ ಪರಿಚಯವಾದ ಬಳಿಕ ಆಕೆಯ ಹಿನ್ನೆಲೆಯನ್ನು ಅನಿಲ್​ ಅರಿತುಕೊಂಡಿದ್ದ. ಆಕೆಗೆ ಭಿಕ್ಷಾಟನೆ ತೊರೆಯುವಂತೆ ಹೇಳಿ, ಹೊಸ ಬದುಕು ನೀಡುವುದಾಗಿ ಭರವಸೆ ನೀಡಿದ್ದ. ಅದರಂತೆ ಆಕೆಯನ್ನು ಮದುವೆಯಾದ.

ಬುದ್ಧ ಆಶ್ರಮದಲ್ಲಿ ಇಬ್ಬರೂ ಮದುವೆಯಾಗಿದ್ದಾರೆ. ಇದಕ್ಕೆ ಆತನ ಯಜಮಾನನ ಕುಟುಂಬ ಹಾಗೂ ಹಲವು ಗಣ್ಯರು ಸಾಕ್ಷಿಯಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net