ರಾಮಲಲ್ಲಾ ಮೂರ್ತಿ ಇನ್ನೂ ಅಂತಿಮಗೊಂಡಿಲ್ಲ: ಟ್ರಸ್ಟ್​​ ಸ್ಪಷ್ಟನೆ

Ayodhya Sriram
Published on

ಅಯೋಧ್ಯೆ: ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರದ ಉದ್ಘಾಟನೆ ಜನವರಿ 22 ರಂದು ನೆರವೇರಲಿದ್ದು, ಐತಿಹಾಸಿಕ ಕ್ಷಣವನ್ನು ಕಣ್ತುಂಬಿಕೊಳ್ಳಲು ಕೋಟ್ಯಾಂತರ ಭಕ್ತರು ಕಾತುರದಿಂದ ಕಾಯುತ್ತಿದ್ದಾರೆ. ಇತ್ತ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್​​ ನಿರ್ಮಿಸಿರುವ ವಿಗ್ರಹವನ್ನು ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆ ಮಾಡಲಾಗುತ್ತದೆ ಎಂಬ ಸುದ್ದಿ ವ್ಯಾಪಕವಾಗಿ ಹರಿದಾಡುತ್ತಿದೆ. ಆದರೆ, ಈ ಕುರಿತು ಸ್ಪಷ್ಟನೆ ನೀಡಿರುವ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಇನ್ನೂ ಇದರ ಬಗ್ಗೆ ನಿರ್ಧರಿಸಿಲ್ಲ ಎಂದು ತಿಳಿಸಿದೆ.

ಈ ಕುರಿತು ಮಾತನಾಡಿರುವ ಟ್ರಸ್ಟ್​​ನ​ ಪದಾಧಿಕಾರಿ ಒಬ್ಬರು, ಪ್ರತಿಷ್ಠಾಪನೆಗೆ ಮೂರು ಮೂರ್ತಿಗಳು ಸಿದ್ಧವಾಗಿವೆ. ಶಂಕರಾಚಾರ್ಯ ವಿಜಯೇಂದ್ರ ಸರಸ್ವತಿ ಮತ್ತು ಇತರೆ ಸ್ವಾಮೀಜಿಗಳ ಜತೆಗೆ ಚರ್ಚಿಸಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು. ಟ್ರಸ್ಟ್ ತೆಗೆದುಕೊಳ್ಳುವ ತೀರ್ಮಾನವನ್ನು ಸೂಕ್ತ ಕಾಲದಲ್ಲಿ ಸಾರ್ವಜನಿಕವಾಗಿ ಪ್ರಕಟಿಸಲಾಗುವುದು.

ಅಂತಿಮವಾಗಿ ಪ್ರತಿಷ್ಠಾಪಿಸಬೇಕಾದ ಮೂರ್ತಿಯನ್ನು ಆಯ್ಕೆ ಮಾಡುವ ಮುನ್ನ, ಮೂರ್ತಿಯ ದೀರ್ಘಾವಧಿ ಬಾಳಿಕೆ ಕುರಿತು ತಾಂತ್ರಿಕ ವರದಿಯನ್ನು ಪಡೆಯಲಾಗುವುದು. ಆಯ್ಕೆಯಾಗುವ ಮೂರ್ತಿಯನ್ನು ಜನವರಿ 22ರಂದು ನಡೆಯಲಿರುವ ಸಮಾರಂಭದಲ್ಲಿ ಪ್ರತಿಷ್ಠಾಪಿಸಲಾಗುತ್ತದೆ ಎಂದು ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್​​ನ ಪದಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರತಿಷ್ಠಾಪನೆಗಾಗಿ ಮೈಸೂರಿನ ಅರುಣ್‌ ಯೋಗಿರಾಜ್‌ ಅವರು ರೂಪಿಸಿದ್ದ ಮೂರ್ತಿ ಆಯ್ಕೆಯಾಗಿದೆ ಎಂದು ಬಿಜೆಪಿಯ ಹಲವು ಮುಖಂಡರು ಸೋಮವಾರ ಜಾಲತಾಣಗಳಲ್ಲಿ ಅಭಿನಂದನಾ ಸಂದೇಶ ಪೋಸ್ಟ್‌ ಮಾಡಿದ್ದರು. ಈ ಕುರಿತು ಸ್ಪಷ್ಟನೆ ನೀಡಿದ್ದ ಅರುಣ್​ ಯೋಗಿರಾಜ್ ಮೂರ್ತಿ ಆಯ್ಕೆಗೆ ಕುರಿತಾಗಿ ನನಗೆ ಅಧಿಕೃತವಾಗಿ ಯಾವುದೇ ಮಾಹಿತಿ ಬಂದಿಲ್ಲ. ಆದರೆ, ಮೂವರು ಶಿಲ್ಪಿಗಳಲ್ಲಿ ನಾನೂ ಒಬ್ಬ ಎಂಬುದು ನನಗೆ ಖುಷಿ ನೀಡಿದೆ ಎಂದು ಹೇಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net