

ಬೆಂಗಳೂರು: ರಾಜ್ಯ ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರದ್ದು ಎನ್ನಲಾದ ಸಿಡಿ ಬಿಡುಗಡೆಯಾಗುತ್ತಿದ್ದಂತೆಯೇ ಮುಖ್ಯಮಂತ್ರಿ ಯಡಿಯೂರಪ್ಪ ನಿವಾಸದಲ್ಲಿ ಮಹತ್ವದ ಸಭೆ ನಡೆದಿದೆ. ಸದ್ಯದ ಮಟ್ಟಿಗೆ ಈ ಪ್ರಕರಣದ ಬಗ್ಗೆ ಯಾರೊಬ್ಬರೂ ಯಾವುದೇ ಹೇಳಿಕೆಯನ್ನು ಕೊಡಬೇಡಿ ಎಂದು ಮುಖ್ಯಮಂತ್ರಿಗಳು ಸೂಚನೆ ಕೊಟ್ಟಿದ್ದಾರೆ ಎನ್ನಲಾಗಿದೆ.
ರಮೇಶ್ ಜಾರಕಿಹೊಳಿ ಪ್ರಕರಣದ ಮಾಹಿತಿಯನ್ನು ಹೈ ಕಮಾಂಡ್ಗೆ ನೀಡಲಾಗಿದೆ. ಅಲ್ಲಿಂದ ಸೂಚನೆ ಬಂದ ನಂತರವೇ ಮುಖ್ಯಮಂತ್ರಿಗಳು ಕ್ರಮ ತೆಗೆದುಕೊಳ್ಳಲಿದ್ದಾರೆ. ಅಲ್ಲಿಯವರೆಗೂ ಹೇಳಿಕೆ ಕೊಡದಿರುವಂತೆ ಪಕ್ಷದೆ ನಾಯಕರಿಗೆ ಯಡಿಯೂರಪ್ಪ ಅವರು ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಇಂದು ಸಂಜೆ ಅವರ ಅಧಿಕೃತ ನಿವಾಸದಲ್ಲಿ ಬೊಮ್ಮಯಿ ಹಾಗೂ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವಡಗಿ ಸಭೆ ನಡೆಸಿದ್ದು ಈ ಕುರಿತಾಗಿ ಚರ್ಚೆ ನಡೆಸಿರುವುದಾಗಿ ಹೇಳಲಾಗಿದೆ.
ಸರ್ಕಾರಕ್ಕೆ ಈ ಆರೋಪದಿಂದಾಗಿ ಭಾರೀ ಮುಜುಗರವಾಗಿದ್ದು, ಅದರಿಂದ ತಪ್ಪಿಸಿಕೊಳ್ಳಲು ಹಲವು ರೀತಿಯ ಪ್ಲಾನ್ ಮಾಡುತ್ತಿದೆ ಎನ್ನಲಾಗಿದೆ. ವೀಡಿಯೋ ಯಾವ ವರ್ಷದ್ದು ಅನ್ನುವ ವರದಿ ಪಡೆಯುವ ಸಾಧ್ಯತೆಯಿದೆ. ಮೇಲ್ನೋಟಕ್ಕೆ ಇದು ಹನಿಟ್ರ್ಯಾಪ್ನಂತೆ ಕಂಡುಬಂದಿದೆ. ಮಹಿಳೆ ಜತೆ ಸಚಿವರು ಅನೇಕ ವರ್ಷಗಳಿಂದ ಒಡನಾಟದಲ್ಲಿರುವ ಸಾಧ್ಯತೆಯಿದೆ. ವಿಡಿಯೋ ಬಗ್ಗೆ ತನಿಖೆ ನಡೆಸುವುದಾಗಿ ಹೇಳುವ ಸಾಧ್ಯತೆಯೂ ಇದೆ. ಅದಾದ ಮೇಲೆ ತನಿಖೆ ಬರುವವರೆಗೂ ಈ ಕುರಿತು ಚರ್ಚೆ ಮುಂದೂಡಲಾಗುವುದು. ಒಂದು ವೇಳೆ ವಿರೋಧ ಪಕ್ಷಗಳ ಒತ್ತಡ ಹೆಚ್ಚಾದರೆ ಅಂತಿಮವಾಗಿ ಸಚಿವರ ರಾಜೀನೇಮೆ ಪಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.
ನಾಳೆ ಸಚಿವ ಸಂಪುಟವಿದ್ದು, ಅದರಲ್ಲಿ ಈ ಕುರಿತಾಗಿ ಚರ್ಚೆ ಆಗುವ ಸಾಧ್ಯತೆಯಿದೆ. ಆ ಸಮಯದಲ್ಲಿ ಯಾವ ರೀತಿಯಲ್ಲಿ ಪರಿಸ್ಥಿತಿ ನಿಯಂತ್ರಿಸಬೇಕು ಎನ್ನುವುದರ ಕುರಿತು ನಾಯಕರು ಚರ್ಚೆ ಮಾಡಿರುವುದಾಗಿ ಹೇಳಲಾಗಿದೆ.