

ಬೆಂಗಳೂರು: ರಾಜ್ಯ ಸಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರದ್ದು ಎನ್ನಲಾದ ಸಿಡಿಯೊಂದು ಬಿಡುಗಡೆಯಾದ ಬೆನ್ನಲ್ಲೇ ರಾಜ್ಯ ರಾಜಕೀಯದಲ್ಲಿ ಭಾರೀ ಕೋಲಾಹಲ ಎದ್ದಿದೆ. ಇದಿನ್ನೂ ಟ್ರೈಲರ್ ಅಷ್ಟೇ, ಸದ್ಯದಲ್ಲೇ ಇನ್ನಿಬ್ಬರು ಸಚಿವರ ಸಿಡಿ ಬಿಡುಗಡೆಯಾಗಲಿದೆ ಎನ್ನುವ ಚರ್ಚೆಯೂ ಆರಂಭವಾಗಿದೆ.
ಇನ್ನಿಬ್ಬರು ಸಚಿವರ ಸಿಡಿ ಬಿಡುಗಡೆಯಾಗುವ ಬಗ್ಗೆ ರಾಜಕೀಯ ವಲಯದಲ್ಲಿ ಚರ್ಚೆ ನಡೆಯುತ್ತಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳೆರೆಡೂ ಈ ರೀತಿ ಚರ್ಚೆ ನಡೆಸುತ್ತಿವೆ. ಹಳೇ ಮೈಸೂರು ಭಾಗದ ಒಬ್ಬರು ಮತ್ತು ಉತ್ತರ ಕರ್ನಾಟಕ ಭಾಗದ ಒಬ್ಬ ಸಚಿವರ ಸಿಡಿ ಬಿಡುಗಡೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಆದರೆ ಯಾವಾಗ ಆ ಸಿಡಿಗಳು ಬಿಡುಗಡೆಯಾಗಲಿವೆ ಎನ್ನುವುದರ ಬಗ್ಗೆ ಕುತೂಹಲವಿದ್ದು, ಭಾರೀ ಚರ್ಚೆ ನಡೆಯುತ್ತಿದೆ.
ನಾಳೆ ರಾಜ್ಯ ಸಚಿವ ಸಂಪುಟದ ಸಭೆಯಿದ್ದು, ಅದರ ಹಿಂದಿನ ದಿನವೇ ಒಂದು ಮಹತ್ವದ ಬೆಳವಣಿಗೆ ರಾಜ್ಯದಲ್ಲಾಗಿದೆ. ಸಚಿವ ರಮೇಶ್ ಜಾರಕಿಹೊಳಿ ಅವರು ಸಭೆಗೆ ಬರಲಿದ್ದಾರೆಯೇ ಅಥವಾ ಇಲ್ಲವೇ ಎನ್ನುವುದನ್ನು ಕಾದು ನೋಡಬೇಕಿದೆ. ಮುಂದೆ ಏನು ಮಾಡಬೇಕು ಎನ್ನುವುದರ ಬಗ್ಗೆ ಮುಖ್ಯಮಂತ್ರಿಗಳು ಸಚಿವರ ಅಭಿಪ್ರಾಯ ಪಡೆಯಲಿದ್ದಾರೆ ಎನ್ನಲಾಗಿದೆ.