

ಹಿಮಾಚಲ ಪ್ರದೇಶ: ಹಮೀರ್‌ಪುರದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ (NIT) ಭೌತಶಾಸ್ತ್ರ ಮತ್ತು ಫೋಟೊನಿಕ್ಸ್ ವಿಜ್ಞಾನ ವಿಭಾಗದ ಎಂಎಸ್ಸಿ ಭೌತಶಾಸ್ತ್ರದ ವಿದ್ಯಾರ್ಥಿ ದೀಪಕ್ ಭಾರದ್ವಾಜ್ ಅವರಿಗೆ ವಿದೇಶದಲ್ಲಿ ಪಿಎಚ್ಡಿ ಮಾಡಲು ಇದೀಗ 2 ಕೋಟಿ ರೂ. ಮೌಲ್ಯದ ವಿದ್ಯಾರ್ಥಿವೇತನ ಲಭಿಸಿದೆ.
ಹರಿಯಾಣದ ಪಾಣಿಪತ್ ಮೂಲದ ದೀಪಕ್ ಎಂಬ ವಿದ್ಯಾರ್ಥಿ, ಮುಂದಿನ ನಾಲ್ಕು ವರ್ಷಗಳ ಅವಧಿಯಲ್ಲಿ ಕ್ವಾಂಟಮ್ ಇಂಜಿನಿಯರಿಂಗ್‌ನಲ್ಲಿ ಸಂಶೋಧನೆ ಮಾಡಲಿದ್ದಾರೆ. ನೀಡಲಾಗಿರುವ ಬೃಹತ್ ಮೊತ್ತದ ವಿದ್ಯಾರ್ಥಿವೇತನವು ಇಲ್ಲಿಯವರೆಗೂ ಕೊಡಲಾದ ಸ್ಕಾಲರ್ಶಿಪ್ನಲ್ಲಿ ಇದೇ ಅತೀ ಹೆಚ್ಚು ಎಂದು ತಿಳಿಸಿದ್ದು, ಈ ಸಂಗತಿ ದೀಪಕ್ ಮತ್ತು ಇನ್‌ಸ್ಟಿಟ್ಯೂಟ್‌ಗೆ ಭಾರೀ ಸಂತಸ ತಂದಿದೆ.
ಪ್ರೊ.ಜಾರ್ಜ್ ಬ್ಯಾರೆಟ್ ಅವರ ಮಾರ್ಗದರ್ಶನದಲ್ಲಿ ಕ್ವಾಂಟಮ್ ಎಂಜಿನಿಯರಿಂಗ್ ಕ್ಷೇತ್ರದಲ್ಲಿ ದೀಪಕ್ ಅವರು ಬ್ರಿಸ್ಟಲ್ ವಿಶ್ವವಿದ್ಯಾಲಯದಿಂದ ಈ ವಿಶೇಷ ವಿದ್ಯಾರ್ಥಿವೇತನವನ್ನು ಪಡೆದುಕೊಂಡಿದ್ದಾರೆ.
ಕ್ವಾಂಟಮ್ ಇಂಜಿನಿಯರಿಂಗ್ ಸಂಶೋಧನೆಗಾಗಿ ದೀಪಕ್ಗೆ ಪ್ರತಿ ವರ್ಷ 2 ಕೋಟಿ ರೂ.ಗೂ ಹೆಚ್ಚಿನ ಮೊತ್ತವನ್ನು ನೀಡಲಾಗುವುದು ಎಂದು ಹೇಳಲಾಗಿದ್ದು, ಸ್ಕಾಲರ್ಶಿಪ್ ಲಭಿಸುವುದಕ್ಕೆ ಸಹಾಯ ಮಾಡಿದ ಎನ್ಐಟಿ ಹಮೀರ್‌ಪುರದ ಪ್ರಾಧ್ಯಾಪಕರು ಮತ್ತು ಅಧ್ಯಾಪಕರಿಗೆ ದೀಪಕ್ ಕೃತಜ್ಞತೆ ಸಲ್ಲಿಸಿದ್ದಾರೆ,(ಏಜೆನ್ಸೀಸ್).