ಮಹಿಳೆ ವಿಧವೆ ಎಂಬ ಕಾರಣಕ್ಕೆ ದೇವಸ್ಥಾನ ಪ್ರವೇಶ ನಿರಾಕರಿಸುವಂತಿಲ್ಲ: ಮದ್ರಾಸ್ ಹೈಕೋರ್ಟ್

highcourt
Published on

ಚೆನ್ನೈ: ವಿಧವೆಯರನ್ನು ದೇವಸ್ಥಾನಗಳಿಗೆ ಪ್ರವೇಶಿಸದಂತೆ ತಡೆಯುವ ಪದ್ಧತಿಯನ್ನು ಮದ್ರಾಸ್ ಹೈಕೋರ್ಟ್ ತೀವ್ರವಾಗಿ ಟೀಕಿಸಿದೆ. ಯಾವುದೇ ಸುಸಂಸ್ಕೃತ ಸಮಾಜದಲ್ಲಿ ಇಂತಹ ಸಂಪ್ರದಾಯಗಳನ್ನು ಮುಂದುವರಿಸುವುದು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ. ಮಹಿಳೆಯೊಬ್ಬರ ಅರ್ಜಿ ವಿಚಾರಣೆ ವೇಳೆ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಮೂಲಗಳ ಪ್ರಕಾರ, ಈರೋಡ್ ಜಿಲ್ಲೆಯ ನಿವಾಸಿ ತಂಗಮಣಿ ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ನಡೆಸುತ್ತಿದೆ. ವಿಧವೆಯಾಗಿರುವ ಆಕೆ ಮತ್ತು ಆಕೆಯ ಮಗನನ್ನು ಕೆಲವು ಗ್ರಾಮಸ್ಥರು ಸ್ಥಳೀಯ ದೇವಸ್ಥಾನಕ್ಕೆ ಪ್ರವೇಶಿಸದಂತೆ ಮತ್ತು ಮುಂಬರುವ ದೇವಾಲಯದ ಉತ್ಸವದಲ್ಲಿ ಭಾಗವಹಿಸದಂತೆ ತಡೆಯುತ್ತಿದ್ದಾರೆ ಎಂದು ಆರೋಪಿಸಲಾಗಿದೆ. 2017ರ ಆಗಸ್ಟ್ 28ರಂದು ಸಾವನ್ನಪ್ಪಿದ್ದ ತನ್ನ ಪತಿ ದೇವಸ್ಥಾನದಲ್ಲಿ ಅರ್ಚಕರಾಗಿದ್ದರು ಎಂದು ಮಹಿಳೆ ನ್ಯಾಯಮೂರ್ತಿ ಆನಂದ್ ವೆಂಕಟೇಶ್ ಅವರ ಪೀಠಕ್ಕೆ ತಿಳಿಸಿದ್ದಾರೆ. ತನ್ನ ಮಗನ ಜೊತೆ ದೇವಸ್ಥಾನದ ಉತ್ಸವದಲ್ಲಿ ಭಾಗವಹಿಸಲು ಮತ್ತು ಪೂಜೆ ಮಾಡಲು ಬಯಸಿದ್ದೆ. ಆದರೆ ಕೆಲವರು ತಡೆಯುತ್ತಿದ್ದಾರೆ. ದೇವಸ್ಥಾನದ ಕಾರ್ಯಕ್ರಮದಲ್ಲಿ ಭಾಗವಹಿಸಲು ಪೊಲೀಸ್ ರಕ್ಷಣೆ ನೀಡಬೇಕೆಂದು ಮಹಿಳೆ ಮನವಿಯಲ್ಲಿ ಕೋರಿದ್ದಾರೆ.

ಅಸಮಾಧಾನ ವ್ಯಕ್ತಪಡಿಸಿದ ಪೀಠ
ಆಕೆ ವಿಧವೆಯಾಗಿರುವುದರಿಂದ ದೇವಸ್ಥಾನವನ್ನು ಪ್ರವೇಶಿಸಲು ಸಾಧ್ಯವಿಲ್ಲ ಎಂದು ಜನರು ಹೇಳಿರುವುದನ್ನು ಗಮನಿಸಿದ ಪೀಠವು ಇಡೀ ವಿಷಯದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ನ್ಯಾಯಮೂರ್ತಿ ವೆಂಕಟೇಶ್ ಮಾತನಾಡಿ, ರಾಜ್ಯದಲ್ಲಿ ಇಂದಿಗೂ ಇಂತಹ ನಂಬಿಕೆಗಳು ಚಾಲ್ತಿಯಲ್ಲಿರುವುದು ವಿಷಾದನೀಯ. ಮಹಿಳೆ ತನ್ನದೇ ಆದ ಸ್ಥಾನಮಾನ ಮತ್ತು ಗುರುತನ್ನು ಹೊಂದಿದ್ದು, ಆಕೆಯ ವೈವಾಹಿಕ ಸ್ಥಾನಮಾನದ ಆಧಾರದ ಮೇಲೆ ಅದನ್ನು ಮೊಟಕುಗೊಳಿಸಲು ಅಥವಾ ಯಾವುದೇ ರೀತಿಯಲ್ಲಿ ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

ತಡೆಯುವ ಹಕ್ಕು ಅವರಿಗಿಲ್ಲ
ವಿಧವೆಯರನ್ನು ದೇವಸ್ಥಾನ ಪ್ರವೇಶಿಸದಂತೆ ತಡೆಯಲು ಯಾರಾದರೂ ಪ್ರಯತ್ನ ಮಾಡಿದರೆ ಅವರ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು. ಅರ್ಜಿದಾರರು ಮತ್ತು ಅವರ ಮಗ ಉತ್ಸವದಲ್ಲಿ ಭಾಗವಹಿಸುವುದನ್ನು ಮತ್ತು ದೇವರ ಪೂಜೆಯನ್ನು ತಡೆಯುವ ಹಕ್ಕು ಅವರಿಗೆ ಇಲ್ಲ ಎಂದು ನ್ಯಾಯಾಲಯ ಹೇಳಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net