ಪ್ರಶ್ನೆಗಾಗಿ ನಗದು ಪ್ರಕರಣ: ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ಸಿಬಿಐ ತನಿಖೆಗೆ ಆದೇಶಿಸಿದ ಲೋಕಪಾಲ್

Mahua Moitra
Published on

ನವದೆಹಲಿ: ಸಂಸತ್ತಿನಲ್ಲಿ ಪ್ರಶ್ನೆ ಕೇಳುವ ಸಲುವಾಗಿ ನಗದು ಪಡೆದಿರುವ ಪ್ರಕರಣದಲ್ಲಿ ಆರೋಪಿಯಾಗಿರುವ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ಸಿಬಿಐ ತನಿಖೆ ನಡೆಸುವಂತೆ ಆದೇಶಿಸಲಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊಯಿತ್ರಾ ವಿರುದ್ಧ ಸಿಬಿಐ ತನಿಖೆ ನಡೆಸುವಂತೆ ಲೋಕಪಾಲ್ ಆದೇಶಿಸಿದೆ ಎಂದು ಬಿಜೆಪಿ ಸಂಸದ ನಿಶಿಕಾಂತ್ ದುಬೆ ಹೇಳಿದ್ದಾರೆ. ಪ್ರಶ್ನೆಗಾಗಿ ನಗದು ಪ್ರಕರಣದ ಮೂಲಕ ರಾಷ್ಟ್ರದ ಭದ್ರತೆಗೆ ಧಕ್ಕೆ ತರುವಂಥ ಭ್ರಷ್ಟಾಚಾರದಲ್ಲಿ ಭಾಗಿಯಾದ್ದರಿಂದ ಸಿಬಿಐ ಈ ತನಿಖೆಗೆ ಆದೇಶಿಸಿದೆ ಎಂದು ಅವರು ತಿಳಿಸಿದ್ದಾರೆ.

ಇನ್ನು ಈ ಹಿನ್ನೆಲೆಯಲ್ಲಿ ತಮಗೆ ಕರೆ ಮಾಡಿ ಪ್ರತಿಕ್ರಿಯೆ ಕೇಳುತ್ತಿರುವ ಮಾಧ್ಯಮದವರಿಗಾಗಿ ಸೋಷಿಯಲ್ ಮೀಡಿಯಾ ಮೂಲಕ ಮೊಯಿತ್ರಾ ತಮ್ಮ ಪ್ರತಿಕ್ರಿಯೆ ಪೋಸ್ಟ್ ಮಾಡಿದ್ದಾರೆ. ಸಿಬಿಐ ಅವರು ಮೊದಲು 13 ಸಾವಿರ ಕೋಟಿ ರೂ. ಅದಾನಿ ಕಲ್ಲಿದ್ದಲು ಹಗರಣದ ಬಗ್ಗೆ ಎಫ್​ಐಆರ್ ದಾಖಲಿಸಬೇಕು. ಕೇಂದ್ರ ಗೃಹ ಸಚಿವಾಲಯದ ನೆರವಿನೊಂದಿಗೆ ದೇಶದ ಬಂದರು ಮತ್ತು ವಿಮಾನನಿಲ್ದಾಣಗಳನ್ನು ಅದಾನಿ ಖರೀದಿಸುತ್ತಿರುವುದು ಹೇಗೆ ರಾಷ್ಟ್ರೀಯ ಭದ್ರತೆಗೆ ಧಕ್ಕೆ ತರುವಂಥದ್ದು ಎಂಬುದನ್ನು ಸಿಬಿಐ ಮೊದಲು ಗಮನಿಸಲಿ ಎಂಬುದಾಗಿಯೂ ಹೇಳಿರುವ ಮೊಯಿತ್ರಾ, ಸಿಬಿಐನವರಿಗೆ ನನ್ನ ಮನೆಗೆ ಸ್ವಾಗತ, ಬಂದು ನನ್ನ ಶೂಗಳನ್ನು ಎಣಿಸಿಕೊಂಡು ಹೋಗಲಿ ಎಂದೂ ಹೇಳಿದ್ದಾರೆ.

ಉದ್ಯಮಿ ಗೌತಮ್ ಅದಾನಿಯನ್ನು ಗುರಿಯಾಗಿಸಿ ಉದ್ಯಮಿ ದರ್ಶನ್ ಹೀರಾನಂದಾನಿ ಅವರ ಪರವಾಗಿ ಸಂಸತ್ತಿನಲ್ಲಿ ಪ್ರಶ್ನೆಗಳನ್ನು ಕೇಳಲು ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಹಣ ಪಡೆದಿದ್ದರು ಎಂಬ ಆರೋಪ ಅವರ ವಿರುದ್ಧ ಕೇಳಿಬಂದಿದೆ. ಅಲ್ಲದೆ ಆಕೆ ಕೂಡ ದರ್ಶನ್ ಹೀರಾನಂದಾನಿ ತಮ್ಮ ಫ್ರೆಂಡ್ ಎಂದು ಹೇಳಿಕೊಂಡಿದ್ದು, ಅವರೊಂದಿಗೆ ಸಂಸದೀಯ ಲಾಗಿನ್​ ವಿವರ ಹಂಚಿಕೊಂಡಿದ್ದಾಗಿಯೂ ಒಪ್ಪಿಕೊಂಡಿದ್ದಾರೆ.

ಅದಾನಿ ವಿರುದ್ಧ ಪ್ರಶ್ನೆ ಕೇಳಲು ಟಿಎಂಸಿ ಸಂಸದೆಯ ಲಾಗಿನ್ ವಿವರ ಬಳಸಿಕೊಂಡಿರುವ ಬಗ್ಗೆ ಕಳೆದ ತಿಂಗಳಲ್ಲಿ ಲೋಕಸಭಾ ಸಮಿತಿಗೆ ಸಹಿ ಮಾಡಿ ನೀಡಲಾದ ಅಫಿಡವಿಟ್​ನಲ್ಲಿ ಉದ್ಯಮಿ ದರ್ಶನ್ ಹೀರಾನಂದಾನಿ ಕೂಡ ಉಲ್ಲೇಖಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net