"ನನ್ನ ಬಿಟ್ಟು ಹೋಗ್ಬೇಡಿ ಅಮ್ಮ"; ಯೆಮೆನ್​ ಅಧಿಕಾರಿಗಳಿಗೆ ನಿಮಿಷಾ ಪ್ರಿಯಾ ಪುತ್ರಿ ಮನವಿ, ಹೆತ್ತವಳಿಗಾಗಿ ಕಣ್ಣೀರು | Nimisha Priya

ವಿಜಯವಾಣಿ (99)
Published on

Nimisha Priya: ಪ್ರಸ್ತುತ, ಯೆಮೆನ್ ದೇಶದ ಪ್ರಜೆಯ ಕೊಲೆ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಕೇರಳದ ನರ್ಸ್ ನಿಮಿಷಾ ಪ್ರಿಯಾಗೆ ಸದ್ಯ ತಾತ್ಕಾಲಿಕ ಮಟ್ಟಿಗೆ ಬಿಗ್ ರಿಲೀಫ್​ ನೀಡಲಾಗಿದೆ. ಇದೇ ಜುಲೈ 16ರಂದು ಪ್ರಿಯಾಳನ್ನು ಗಲ್ಲಿಗೇರಿಸಲು ಯೆಮೆನ್​ ಕೋರ್ಟ್​ ದಿನಾಂಕವನ್ನು ನಿಗದಿಪಡಿಸಿತ್ತು. ಆದರೆ, ಭಾರತದ ಸುಪ್ರೀಂಕೋರ್ಟ್​ ನಿಮಿಷಾಳ ಪ್ರಕರಣದಲ್ಲಿ ಮಧ್ಯಪ್ರವೇಶಿಸಿದ ಹಿನ್ನಲೆ ಕೊನೆಯ ಕ್ಷಣಗಳಲ್ಲಿ ಆಕೆಯ ಗಲ್ಲು ಶಿಕ್ಷೆಯನ್ನು ಕೋರ್ಟ್​ ಮುಂದೂಡಿತು. ಇದು ಪ್ರಿಯಾ ಮತ್ತು ಆಕೆಯ ಹೆತ್ತವರ ನಿಟ್ಟುಸಿರಿಗೆ ಕಾರಣವಾಗಿದ್ದೇ ಆದರೂ ಕಣ್ಣೀರಿಗೆ ಮಾತ್ರ ಕೊನೆಯಿಲ್ಲ ಎನ್ನುವಂತಾಗಿದೆ.

ಸದ್ಯ ಯೆಮೆನ್ ಜೈಲಿನಲ್ಲಿರುವ ನಿಮಿಷಾ ಪ್ರಿಯಾಳ ಪುತ್ರಿ ಮಿಶೆಲ್ (13), ತನ್ನ ತಾಯಿಯ ಬಿಡುಗಡೆಗಾಗಿ ಯೆಮೆನ್​ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾಳೆ. ಖುದ್ದಾಗಿ ಯೆಮೆನ್‌ಗೆ ಆಗಮಿಸಿರುವ ಮಿಶೆಲ್​, ಅಲ್ಲಿನ ಅಧಿಕಾರಿಗಳನ್ನು ಭೇಟಿಯಾಗಿ ವಿನಂತಿಸಿಕೊಂಡಿದ್ದಾಳೆ. ತನ್ನ ತಂದೆ ಟಾಮಿ ಥಾಮಸ್ ಮತ್ತು ಗ್ಲೋಬಲ್ ಪೀಸ್ ಇನಿಶಿಯೇಟಿವ್ ಸಂಸ್ಥಾಪಕರಾದ ಡಾ. ಕೆ.ಎ. ಪಾಲ್ ಅವರೊಂದಿಗೆ, ಯೆಮೆನ್​ನಲ್ಲಿ ಗಲ್ಲುಶಿಕ್ಷೆಗೆ ಗುರಿಯಾಗಿರುವ ತನ್ನ ತಾಯಿಯ ಪರವಾಗಿ ಮಿಶೆಲ್​ ಮಾತನಾಡಿದ್ದಾಳೆ.

ಹಲವಾರು ವರ್ಷಗಳಿಂದ ಯೆಮೆನ್‌ನಲ್ಲಿ ಜೈಲಿನಲ್ಲೇ ಉಳಿದಿರುವ ತನ್ನ ತಾಯಿಯನ್ನು ನೋಡದ ಮಿಶೆಲ್​, 10 ವರ್ಷಗಳಿಂದ ನಾನು ನಿನ್ನ ಮುಖ ಸಹ ನೋಡಿಲ್ಲ. ನಿನ್ನನ್ನು ತುಂಬ ಪ್ರೀತಿಸುತ್ತೀನಿ ಅಮ್ಮ. ದಯವಿಟ್ಟು ನನ್ನ ತಾಯಿಯನ್ನು ಮನೆಗೆ ಕರೆತರಲು ಸಹಾಯ ಮಾಡಿ. ಅಮ್ಮನನ್ನು ನೋಡಲು ತುಂಬಾ ಆಸೆಯಾಗಿದೆ. ನನ್ನನ್ನು ಬಿಟ್ಟು ಹೋಗಬೇಡ ಎಂದು ಮಲಯಾಳಂ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಭಾವನಾತ್ಮಕ ಪತ್ರ ರವಾನಿಸಿದ್ದಾಳೆ.

ಇನ್ನು ನಿಮಿಷಾ ಪತಿ ಟಾಮಿ ಥಾಮಸ್ ಕೂಡ ಮನವಿ ಮಾಡಿದ್ದು, "ದಯವಿಟ್ಟು ನನ್ನ ಹೆಂಡತಿ ನಿಮಿಷಾಳನ್ನು ಉಳಿಸಿಕೊಡಿ ಮತ್ತು ನಾವೆಲ್ಲರೂ ನಮ್ಮ ಊರಿಗೆ ವಾಪಾಸ್​ ಆಗಲು ಸಹಕರಿಸಿ. ಇಂದಲ್ಲ, ನಾಳೆ ಪತ್ನಿಗೆ ಬಿಡುಗಡೆ ಸಿಗುತ್ತದೆ ಎಂದು ಭಾವಿಸಿದ್ದೇವೆ. ದಯವಿಟ್ಟು ಈ ವಿಚಾರಲ್ಲಿ ನಿಮ್ಮಿಂದ ದೊಡ್ಡ ಸಹಾಯದ ಅಗತ್ಯವಿದೆ. ಕರುಣೆ ತೋರಿಸಿ" ಎಂದು ಕಣ್ಣೀರಿಟ್ಟಿದ್ದಾರೆ.

ಯಾರು ಈ ನಿಮಿಷಾ ಪ್ರಿಯಾ?

ಕೇರಳದ ಪಾಲಕ್ಕಾಡ್ ಜಿಲ್ಲೆಯ ನಿಮಿಷಾ ಪ್ರಿಯಾ, ತನ್ನ ನರ್ಸಿಂಗ್ ತರಬೇತಿ ಪೂರ್ಣಗೊಳಿಸಿದ ಬಳಿಕ 2011ರಲ್ಲಿ ಯೆಮೆನ್‌ಗೆ ತೆರಳಿದರು. ವರದಿಗಳ ಪ್ರಕಾರ, ತನ್ನ ಬಡ ಕುಟುಂಬವನ್ನು ಬೆಂಬಲಿಸಲು ದೇಶ ತೊರೆದು ಹೋದ ಪ್ರಿಯಾ, ಅಲ್ಲಿ ತನ್ನದೇ ಆದ ಒಂದು ಕ್ಲಿನಿಕ್ ತೆರೆಯುವ ನಿರ್ಧಾರಕ್ಕೆ ಮುಂದಾಗಿದ್ದು ಹಾಗೂ ಅದಕ್ಕೆ ಓರ್ವನ ಸಹಾಯಕ್ಕೆ ಕೈಚಾಚಿದ್ದೇ ಇಂದು ಆಕೆಯ ಗಲ್ಲು ಶಿಕ್ಷೆಗೆ ಕಾರಣವಾಗಿದೆ.

ನಿಮಿಷಾ ಪ್ರಿಯಾ ಕೊಲೆ ಮಾಡಿದ್ದಾದರೂ ಏಕೆ?

2017ರಲ್ಲಿ ತನ್ನ ವ್ಯವಹಾರದ ಪಾಲುದಾರನಾಗಿದ್ದ ವಿವಾಹಿತ ತಲಾಲ್ ಅಬ್ದೋ ಮಹ್ದಿಯನ್ನು ಕೊಲೆಗೈದ ಆರೋಪದಡಿ ಕೇರಳ ಮೂಲದ ನರ್ಸ್​ ನಿಮಿಷಾಳನ್ನು ಬಂಧಿಸಲಾಯಿತು. ಮೂರು ವರ್ಷಗಳ ಬಳಿಕ, 2020ರಲ್ಲಿ ಯೆಮೆನ್ ನ್ಯಾಯಾಲಯವು ಈ ಪ್ರಕರಣದಲ್ಲಿ ಆಕೆಗೆ ಮರಣದಂಡನೆ ವಿಧಿಸಿತು. ಈ ಆದೇಶವನ್ನು ಪ್ರಶ್ನಿಸಿ, ಅಂದು ಪ್ರಿಯಾ ತಾಯಿ ಸುಪ್ರೀಂಕೋರ್ಟ್​ ಮೊರೆ ಹೋಗಿದ್ದರು. ಆದರೆ, 2023ರಲ್ಲಿ ಪ್ರೇಮಾ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿತು.

ಕೊಲೆ ಹಂತಕ್ಕೆ ಹೋಗಿದ್ದೇಕೆ?

ಸಹಾಯ ಮಾಡುವ ನೆಪದಲ್ಲಿ ಪ್ರಿಯಾಳನ್ನು ದುರಪಯೋಗ ಪಡಿಸಿಕೊಳ್ಳಲು ಮುಂದಾದ ಮಹ್ದಿ, ತನ್ನೊಂದಿಗೆ ದೈಹಿಕ ಸಂಪರ್ಕ ಬೆಳೆಸುವಂತೆ ಆಕೆಗೆ ಒತ್ತಾಯಿಸಿದ್ದ. ವಿಪರೀತ ಹಿಂಸೆಯ ಬೆನ್ನಲ್ಲೇ ಆಕೆ ಮಹ್ದಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ಬಂಧಿತನಾಗಿದ್ದ ಮಹ್ದಿ, 2016ರಲ್ಲಿ ಜೈಲಿನಿಂದ ಹೊರಬಂದ. 2017ರಲ್ಲಿ ಆಕೆಗೆ ಇನ್ನಷ್ಟು ಹಿಂಸೆ ಕೊಡಲು ಮುಂದಾದ ಎಂದು ವರದಿಗಳು ತಿಳಿಸಿವೆ. ಮಹ್ದಿ, ಪ್ರಿಯಾ ಬಳಿಯಿದ್ದ ಪಾಸ್‌ಪೋರ್ಟ್ ಅನ್ನು ಕಸಿದುಕೊಂಡಿದ್ದ. ಇದರಿಂದ ಕಂಗಾಲಾಗಿದ್ದ ಪ್ರಿಯಾ, ಆತನಿಂದ ಪಾಸ್​ಪೋರ್ಟ್​ ಪಡೆದು ಭಾರತಕ್ಕೆ ಹೋಗುವ ತವಕದಲ್ಲಿದ್ದಳು. ಇವನಿಂದ ಹೇಗಾದರೂ ಮುಕ್ತಿ ಪಡೆಯಬೇಕು ಎಂದು ಸಂಚು ರೂಪಿಸಿದ ಪ್ರಿಯಾ, ಮಹ್ದಿಗೆ ನಿದ್ರಾಜನಕ ನೀಡಿದ್ದಳು. ಆದರೆ, ಓವರ್​ಡೋಸ್​ನಿಂದ ಆತ ಸತ್ತುಬಿದ್ದಿದ್ದ.

ಕೊಲೆಗೈದ ಬಳಿಕ ಹೇಗೋ ದೇಹವನ್ನು ತನ್ನ ಸ್ನೇಹಿತೆಯೊಂದಿಗೆ ವಿಲೇವಾರಿ ಮಾಡಿದ್ದ ಪ್ರಿಯಾ, ಕಡೆಗೂ ಕೊಲೆ ಆರೋಪದಡಿ ಸಿಕ್ಕಿಬಿದ್ದಳು. ಈ ವೇಳೆ ಆಕೆಯ ಕೈವಾಡ ಇರುವುದು ದೃಢವಾಯಿತು. ಹತ್ಯೆ ಕೇಸ್​ನಡಿ ಯೆಮೆನ್ ಪೊಲೀಸರು ಆಕೆಯನ್ನು ಬಂಧಿಸಿದರು. ಈ ಪ್ರಕರಣದಲ್ಲಿ ಕೋರ್ಟ್​ ಪ್ರಿಯಾಳ ಸ್ನೇಹಿತೆಗೆ ಜೀವಾವಧಿ ಶಿಕ್ಷೆ ವಿಧಿಸಿದರೆ, ಪ್ರಿಯಾಗೆ ಗಲ್ಲು ಶಿಕ್ಷೆಯನ್ನು ವಿಧಿಸಿತು. ಜುಲೈ 16ರಂದು ಮರಣದಂಡನೆಗೆ ದಿನಾಂಕ ನಿಗದಿಪಡಿಸಲಾಗಿತ್ತು. ಆದರೀಗ ಅದು ಮುಂದೂಡಿಕೆಯಾಗಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net