

Ravindra Jadeja: ಮ್ಯಾಂಚೆಸ್ಟರ್ನಲ್ಲಿ ನಡೆದ ನಾಲ್ಕನೇ ಟೆಸ್ಟ್ನ ಕೊನೆಯ ದಿನದಂದು ಟೀಮ್ ಇಂಡಿಯಾ ಪರ ಅದ್ಭುತ ಪ್ರದರ್ಶನ ನೀಡಿದ ಸ್ಟಾರ್ ಆಲ್ರೌಂಡರ್ ರವೀಂದ್ರ ಜಡೇಜಾ, ಇಂಗ್ಲೆಂಡ್ ನೆಲದಲ್ಲಿ ಭರ್ಜರಿ ಶತಕದಾಟ ತೋರುವ ಮೂಲಕ ಆಂಗ್ಲರ ಬೆವರಿಳಿಸಿದರು. ಲಾರ್ಡ್ಸ್ನಲ್ಲಿ ನಡೆದ ಮೂರನೇ ಟೆಸ್ಟ್ನಲ್ಲಿ ಕೊನೆಯವರೆಗೂ ಹೋರಾಡಿದ ಜಡೇಜಾ, ನಾಲ್ಕನೇ ಟೆಸ್ಟ್ನಲ್ಲೂ ಅಚಲ ಪ್ರದರ್ಶನ ನೀಡಿದ್ದು, ಇದೀಗ ಹಲವರ ಪ್ರಶಂಸೆಗೆ ಕಾರಣವಾಗಿದೆ.
ಜಡೇಜಾಗೆ ಸಾಥ್ ನೀಡಿದ ಮತ್ತೊಬ್ಬ ಆಲ್ರೌಂಡರ್ ವಾಷಿಂಗ್ಟನ್ ಸುಂದರ್ ಕೂಡ ಶತಕ ಗಳಿಸುವ ಮೂಲಕ ಪಂದ್ಯವನ್ನು ಡ್ರಾ ಕಡೆಗೆ ಕೊಂಡೊಯ್ಯವಲ್ಲಿ ಪ್ರಮುಖ ಪಾತ್ರ ವಹಿಸಿದರು. ಬಿರುಸಿನ ಪ್ರದರ್ಶನ ನೀಡಿ, ಎಲ್ಲರ ಹುಬ್ಬೇರಿಸಿದ ರವೀಂದ್ರ ಜಡೇಜಾ ಇದೀಗ ಟೆಸ್ಟ್ ಕ್ರಿಕೆಟ್ನಲ್ಲಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಆಂಗ್ಲರ ನೆಲದಲ್ಲಿ 30ಕ್ಕೂ ಹೆಚ್ಚು ವಿಕೆಟ್ಗಳನ್ನು ಪಡೆದಿರುವ ಜತೆ ಜತೆಗೆ ಸಾವಿರ ರನ್ಗಳನ್ನು ಪೂರ್ಣಗೊಳಿಸಿದ ಎರಡನೇ ಆಲ್ರೌಂಡರ್ ಎಂಬ ಅಪರೂಪದ ಸಾಧನೆಗೆ ಜಡ್ಡು ಸಾಕ್ಷಿಯಾಗಿದ್ದಾರೆ.
ಜಡೇಜಾ ಅವರ ವೀರೋಚಿತ ಹೋರಾಟದಲ್ಲಿ ಲೀಡ್ಸ್ ಟೆಸ್ಟ್ನಲ್ಲಿ 36 ರನ್ಗಳನ್ನು ಗಳಿಸಿದರು ಮತ್ತು ಒಂದು ವಿಕೆಟ್ ಪಡೆದರು. ಎಡ್ಜ್ಬಾಸ್ಟನ್ ಟೆಸ್ಟ್ನ ಮೊದಲ ಇನ್ನಿಂಗ್ಸ್ನಲ್ಲಿ 89 ರನ್ಗಳನ್ನು ಗಳಿಸಿದ ಜಡ್ಡು, ಎರಡನೇ ಇನ್ನಿಂಗ್ಸ್ನಲ್ಲಿ 69 ರನ್ ಸಿಡಿಸುವ ಮೂಲಕ ಅಜೇಯರಾಗಿ ಉಳಿದರು. ಅದೇ ರೀತಿ, ನಾಲ್ಕನೇ ಟೆಸ್ಟ್ನಲ್ಲಿ ಒಂದು ವಿಕೆಟ್ ಕಬಳಿಸಿ, ಶತಕ (107 ರನ್) ದಾಖಲಿಸಿದರು.
34 ವಿಕೆಟ್ಗಳನ್ನು ಪಡೆದು ಇದುವರೆಗೆ ಇಂಗ್ಲೆಂಡ್ನಲ್ಲಿ 1,000 ರನ್ಗಳನ್ನು ಪೂರ್ಣಗೊಳಿಸಿದ ಆಟಗಾರನಾಗಿ ಜಡೇಜಾ ಹೊರಹೊಮ್ಮಿದ್ದಾರೆ. ಇನ್ನು ವೆಸ್ಟ್ ಇಂಡೀಸ್ ದಿಗ್ಗಜ ಗಾರ್ಫೀಲ್ಡ್ ಸೋಬರ್ಸ್ ನಂತರ ಇಂಗ್ಲೆಂಡ್ನಲ್ಲಿ 30ಕ್ಕೂ ಹೆಚ್ಚು ವಿಕೆಟ್ಗಳನ್ನು ಮತ್ತು ಸಾವಿರ ರನ್ಗಳನ್ನು ಗಳಿಸಿದ ಎರಡನೇ ಆಲ್ರೌಂಡರ್ ಎಂಬ ಹೆಗ್ಗಳಿಕೆಗೆ ಜಡೇಜಾ ಪಾತ್ರರಾಗಿದ್ದಾರೆ.
ಒಟ್ಟಾರೆಯಾಗಿ, ವಿದೇಶಿ ನೆಲದಲ್ಲಿ ಈ ಅಪರೂಪ ಸಾಧನೆ ಮಾಡಿದ ಮೂರನೇ ಆಲ್ರೌಂಡರ್ ಜಡೇಜಾ. ಈ ಮೊದಲು, ಗಾರ್ಫೀಲ್ಡ್ ಸೋಬರ್ಸ್ ಮತ್ತು ಇಂಗ್ಲೆಂಡ್ನ ವಿಲ್ಫ್ರೆಡ್ ರೋಡ್ಸ್ ಈ ಸಾಧನೆ ಮಾಡಿದ್ದರು. ಅವರ ನಂತರ ಜಡ್ಡು ಈ ಪಟ್ಟಿಯಲ್ಲಿ ಸ್ಥಾನ ಪಡೆಯುತ್ತಾರೆ,(ಏಜೆನ್ಸೀಸ್).