

ಮಂಡ್ಯ: ಲೋಕ ಸಮರದಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದ ಮೇಲೆ ಎಲ್ಲರ ಚಿತ್ತ ಮೂಡಿದ್ದು, ಕಾಂಗ್ರೆಸ್ ಮತ್ತು ಮೈತ್ರಿ ಅಭ್ಯರ್ಥಿಗಳ ಮಧ್ಯೆ ಯಾರ ಮುಡಿಗೆ ಗೆಲುವಿನ ಕಿರೀಟ ಸೇರಲಿದೆ ಎಂಬ ಕುತೂಹಲ ಮತದಾರರಲ್ಲಿ ತೀವ್ರವಾಗಿ ಕಾಡುತ್ತಿದೆ. ಸದ್ಯ ಇದೆಲ್ಲದರ ನಡುವೆ ಇಂದು ಮಂಡ್ಯದ ಹಳೆಬೂದನೂರು ಗ್ರಾಮಕ್ಕೆ ಭೇಟಿ ಕೊಟ್ಟ ನಿಖಿಲ್ ಕುಮಾರಸ್ವಾಮಿ, ಮೈತ್ರಿ ಅಭ್ಯರ್ಥಿಯಾದ ಎಚ್.ಡಿ. ಕುಮಾರಸ್ವಾಮಿ ಪರ ಜನರಲ್ಲಿ ಮತಯಾಚನೆ ಮಾಡಿದರು.
ಜನತಾದಳ ಪಕ್ಷಕ್ಕೆ ರಾಜಕೀಯವಾಗಿ ಶಕ್ತಿ ಕೊಟ್ಟಿರೋದು ಮಂಡ್ಯ ಜಿಲ್ಲೆ. 2013-18ರ ಮಧ್ಯೆ ಬರಗಾಲ ಪ್ರಾರಂಭವಾಯ್ತು. ಇದೀಗ ಕಾಂಗ್ರೆಸ್ ಅಧಿಕಾರದಲ್ಲಿ ಮತ್ತೆ ಬರಗಾಲ ಬಂದಿದೆ. ಕೈ ಯಾವಾಗ ಆಡಳಿತಕ್ಕೆ ಬರುತ್ತೋ ಆಗೆಲ್ಲಾ ಬರಗಾಲ ಬರುತ್ತದೆ. 2013-18ರ ಸಂಧರ್ಭ ಮಂಡ್ಯ ಜಿಲ್ಲೆಯಲ್ಲಿ ಅತಿ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. ಆ ಕುಟುಂಬಕ್ಕೆ ಸಾಂತ್ವಾನ ಹೇಳಿ, ಸಹಾಯ ಮಾಡಿದ್ದ ಕುಮಾರಣ್ಣ ಒಂದು ಮಾತು ಕೊಟ್ರು. ತನ್ನ ಸರ್ಕಾರ ಬಂದ್ರೆ ಸಂಪೂರ್ಣ ಸಾಲಮನ್ನಾ ಮಾಡ್ತೇವೆ ಎಂದ್ರು. ಅಧಿಕಾರಕ್ಕೆ ಬಂದ ತಕ್ಷಣವೇ 25 ಸಾವಿರ ಕೋಟಿ ಸಾಲಮನ್ನಾ ಮಾಡಿದ್ರು ಎಂದರು.
ಸದ್ಯ ಕೆ.ಆರ್.ಎಸ್ ಡ್ಯಾಂನಲ್ಲಿ 82 ಅಡಿ ನೀರಿದೆ. ಈ ಹಿಂದೆ 70 ಅಡಿ ನೀರಿದ್ದಾಗಲೂ ಕುಮಾರಣ್ಣನ ಸರ್ಕಾರ ನೀರು ಕೊಟ್ಟಿದೆ. ಆದ್ರೆ ಕೈ ಸರ್ಕಾರ ರೈತರಿಗೆ ಒಂದು ಹನಿ ನೀರು ಕೊಟ್ಟಿಲ್ಲ. ಇವರ ಸರ್ಕಾರ ರೈತ ವಿರೋಧಿ ಸರ್ಕಾರವಾಗಿದೆ. ಪುಣ್ಯಾತ್ಮ ಕುಮಾರಣ್ಣ ಬಂದಮೇಲೆ ಮಳೆ ಬಂದಿದೆ ಎಂದು ಕಾಂಗ್ರೆಸ್ ವಿರುದ್ದ ನಿಖಿಲ್ ಕುಮಾರಸ್ವಾಮಿ ಕಿಡಿಕಾರಿದರು.
ಮಂಡ್ಯ ಲೋಕಸಭಾ ಕ್ಷೇತ್ರದ ಹಲವೆಡೆ ಪ್ರಚಾರ ಮಾಡಿದ್ದೇವೆ. ಜನರು ಉತ್ತಮ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಕುಮಾರಣ್ಣ ಸಾರಾಯಿ, ಲಾಟರಿ ನಿಷೇಧ ಮಾಡಿದ್ದನ್ನು ಜನರು ಇಂದಿಗೂ ಮರೆತಿಲ್ಲ. ಮಂಡ್ಯ ಜಿಲ್ಲೆಗೆ ಕುಮಾರಸ್ವಾಮಿ ಏನು ಮಾಡಿದ್ದಾರೆ ಎಂಬುದಕ್ಕೆ ದಾಖಲೆಗಳಿವೆ. ಹಲವು ಕಟ್ಟಡಗಳ ಅಭಿವೃದ್ಧಿಯನ್ನು ಕುಮಾರಣ್ಣ ಮಾಡಿದ್ದಾರೆ. ಜನರ ಮನಸ್ಸಿನಲ್ಲಿ ಕುಮಾರಣ್ಣನ ಅಭಿವೃದ್ಧಿ ಕೆಲಸಗಳು ಉಳಿದಿವೆ. ಹೇಳಿದ್ರೆ ಎರಡು ದಿನಗಳ ಕಾಲ ಮಾತಾಡಬಹುದು ಎಂದರು.