

ನವದೆಹಲಿ: ಗುಜರಾತ್ನ ಮುಂದ್ರಾ ಡಾಕ್ಯಾರ್ಡ್ನಲ್ಲಿ ಸೂಪರ್ವೈಸರ್ ಆಗಿದ್ದ ಐಎಸ್ಐ ಏಜೆಂಟ್ ಒಬ್ಬ ನ್ಯಾಷನಲ್ ಇನ್ವೆಸ್ಟಿಗೇಶನ್ ಏಜೆನ್ಸಿ(ಎನ್ಐಎ) ಬಲೆಗೆ ಬಿದ್ದಿದ್ದಾನೆ. ಆತ ಪಾಕಿಸ್ತಾನದ ಐಎಸ್ಐ ಪರವಾಗಿ ಭಾರತದಲ್ಲಿ ಕೆಲಸ ಮಾಡುತ್ತಿರುವ ಬಗ್ಗೆ ಸಾಕ್ಷ್ಯಾಧಾರಗಳು ದೊರಕಿದ ಕಾರಣ ಆತನನ್ನು ಎನ್ಐಎ ಬಂಧಿಸಿದೆ.
ಬಂಧಿತ ಐಎಸ್ಐ ಏಜೆಂಟ್ನನ್ನು ರಜಾಕ್ ಭಾಯ್ ಕುಂಭಾರ್ ಎಂದು ಗುರುತಿಸಲಾಗಿದೆ. ಈತ ಗುಜರಾತ್ನ ಪಶ್ಚಿಮ ಕಛ್ ನಿವಾಸಿ. ಭಾನುವಾರ ಈತನನ್ನು ಬಂಧಿಸಲಾಗಿದೆ. ಎನ್ಐಎ ಉತ್ತರ ಪ್ರದೇಶದ ಡಿಫೆನ್ಸ್/ಐಎಸ್ಐ ಕೇಸ್ ನ ತನಿಖೆ ನಡೆಸುತ್ತಿರುವಾಗ ಈತನ ಕುರಿತ ಮಾಹಿತಿ ಲಭ್ಯವಾಗಿತ್ತು. ಅಲ್ಲದೆ, ಸಾಕ್ಷ್ಯಾಧಾರಗಳೂ ಲಭಿಸಿದ್ದವು ಎಂದು ಮೂಲಗಳು ತಿಳಿಸಿವೆ.
ಉತ್ತರ ಪ್ರದೇಶದ ಕೇಸ್ಗೆ ಸಂಬಂಧಿಸಿ ಜನವರಿ 19ರಂದು ಲಖನೌ ನ ಗೋಮತಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅದು ಚಾಂದೋಲಿ ಜಿಲ್ಲೆಯ ಮೊಘಲ್ ಸರಾಯ್ ನ ಮೊಹಮ್ಮದ್ ರಶೀದ್ ಬಂಧನಕ್ಕೆ ಸಂಬಂಧಿಸಿದ್ದಾಗಿದೆ. ಇದಾಗಿ, ಎನ್ಐಎ ಏಪ್ರಿಲ್ 6ರಂದು ಕೇಸನ್ನು ಮತ್ತೆ ರಿಜಿಸ್ಟರ್ ಮಾಡಿಕೊಂಡಿದ್ದು, ಐಪಿಸಿ ಮತ್ತು ಯುಎಪಿಎ ಕಾಯ್ದೆಯ ಹಲವು ಅಂಶಗಳನ್ನು ಸೇರಿಸಿತ್ತು.
ವಿಚಾರಣೆ ಸಂದರ್ಭದಲ್ಲಿ ರಶೀದ್ ಪಾಕಿಸ್ತಾನದ ರಕ್ಷಣಾ ಇಲಾಖೆ ಅಥವಾ ಐಎಸ್ಐ ಹ್ಯಾಂಡ್ಲರ್ಸ್ ಜತೆಗೆ ಸಂಪರ್ಕದಲ್ಲಿರುವುದು ಬಹಿರಂಗವಾಗಿದೆ. ಅಲ್ಲದೆ ರಶೀದ್ ಎರಡು ಬಾರಿ ಪಾಕಿಸ್ತಾನಕ್ಕೆ ಹೋಗಿ ಬಂದಿದ್ದ. ಆತ ಭಾರತದ ಸೂಕ್ಷ್ಮ ಚಿತ್ರಗಳನ್ನು ಪಾಕಿಸ್ತಾನಕ್ಕೆ ರವಾನಿಸಿದ್ದ. ರಕ್ಷಣಾ ಪಡೆಗಳ ನಡೆಯ ಕುರಿತ ಮಾಹಿತಿಯನ್ನೂ ಅಲ್ಲಿಗೆ ಕಳುಹಿಸಿದ್ದ ಎಂದು ಎನ್ಐಎ ಮೂಲಗಳು ತಿಳಿಸಿವೆ.
ಇದೇ ವಿಚಾರಣೆ ವೇಳೆ, ಕುಂಭಾರ್ ಕುರಿತ ವಿವರವನ್ನೂ ರಶೀದ್ ಬಾಯ್ಬಿಟ್ಟಿದ್ದ. ಕುಂಭಾರ್ ಐಎಸ್ಐ ಏಜೆಂಟ್ ಆಗಿದ್ದು ರಿಜ್ವಾನ್ ಎಂಬಾತನ ಖಾತೆಗೆ 5,000 ರೂಪಾಯಿ ಪೇಟಿಎಂ ಮೂಲಕ ರವಾನಿಸಿದ್ದ ಎಂಬುದನ್ನೂ ಹೇಳಿದ್ದ. ಮಾಹಿತಿ ನೀಡಿದ್ದಕ್ಕಾಗಿ ಐಎಸ್ಐ ಹ್ಯಾಂಡ್ಲರ್ಸ್ ನಿರ್ದೇಶನದಂತೆ ಕುಂಭಾರ್ ಈ ಹಣವನ್ನು ರಶೀದ್ಗೆ ಪಾವತಿಸಿದ್ದ. ಈ ಸಂಬಂಧ ಎನ್ಐಎ ಅಧಿಕಾರಿಗಳು ಕಳೆದ ಗುರುವಾರವೇ ಕುಂಭಾರ್ ಮನೆಯನ್ನು ತಮ್ಮ ವಶಕ್ಕೆ ತೆಗೆದುಕೊಂಡು ಸೂಕ್ಷ್ಮ ದಾಖಲಾತಿಗಳನ್ನು ವಶಪಡಿಸಿಕೊಂಡಿದ್ದರು. (ಏಜೆನ್ಸೀಸ್)