

ಬುದ್ಧವಾರ 'ಕಿಚ್ಚ' ಸುದೀಪ್ ಅವರ ಹುಟ್ಟುಹಬ್ಬ. ಕರೊನಾ ಹಾವಳಿ ಹೆಚ್ಚಿರುವುದರಿಂದ ಈ ಬಾರಿ ಸುದೀಪ್ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ. ಆದರೆ, ಅಭಿಮಾನಿಗಳು ಸುದೀಪ್ ಅವರ ಹುಟ್ಟುಹಬ್ಬವನ್ನು ಸೋಷಿಯಲ್ ಮೀಡಿಯಾ ಮೂಲಕ ಗ್ರಾಂಡ್ ಆಗಿ ಆಚರಿಸುತ್ತಿದ್ದಾರೆ.
ಅದಕ್ಕೆ ಕಾರಣವೂ ಇದೆ. ಪ್ರಮುಖವಾಗಿ, ಸುದೀಪ್ ಅವರು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಇದು 25ನೇ ವರ್ಷ. ಈ ಹಿನ್ನೆಲೆಯಲ್ಲಿ ಅವರ ಹುಟ್ಟುಹಬ್ಬವನ್ನು ಸೋಷಿಯಲ್ ಮೀಡಿಯಾದಲ್ಲೇ ದೊಡ್ಡ ರೀತಿಯಲ್ಲಿ ಆಚರಿಸುವುದಕ್ಕೆ ತೀರ್ಮಾನಿಸುತ್ತಿದ್ದು, ಇದರ ಮೊದಲ ಹಂತವಾಗಿ, ಸುದೀಪ್ ಅವರ ಹುಟ್ಟುಹಬ್ಬದ ಕಾಮನ್ ಡಿಸ್ಪ್ಲೇ ಪಿಕ್ಚರ್ ಬಿಡುಗಡೆ ಮಾಡಲಾಗಿದೆ.
ಈ ಸಿಡಿಪಿಯನ್ನು ಭಾನುವಾರ ಸಂಜೆ ಶಿವರಾಜಕುಮಾರ್ ಬಿಡುಗಡೆ ಮಾಡಿದ್ದು, ಸುದೀಪ್ ಅವರಿಗೆ ಶುಭ ಕೋರಿದ್ದಾರೆ. ಇನ್ನು ರಾಮ್ಚರಣ್ ತೇಜ ಸೇರಿದಂತೆ ಹಲವು ನಟ-ನಟಿಯರು, ತಂತ್ರಜ್ಱರು ಈ ಸಿಡಿಪಿಯನ್ನು ಶೇರ್ ಮಾಡಿ ಸುದೀಪ್ ಅವರಿಗೆ ಶುಭ ಹಾರೈಸಿದ್ದಾರೆ.
ತಮ್ಮ ಹುಟ್ಟುಹಬ್ಬಕ್ಕೆ ಸಿಡಿಪಿ ಮಾಡಿ ಬಿಡುಗಡೆ ಮಾಡುತ್ತಿರುವ ಬಗ್ಗೆ ಖುಷಿ ವ್ಯಕ್ತಪಡಿಸಿರುವ ಸುದೀಪ್, ಸಿಡಿಪಿ ಬಿಡುಗಡೆ ಮಾಡಿದ ಶಿವರಾಜಕುಮಾರ್ಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಹಾಗೆಯೇ ಅದನ್ನು ಶೇರ್ ಮಾಡಿರುವ ಕಲಾವಿದರು ಹಾಗೂ ತಂತ್ರಜ್ಱರಿಗೆ ಥ್ಯಾಂಕ್ಸ್ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, 'ಎಲ್ಲರಿಗೂ ಧನ್ಯವಾದಗಳು. ನೀವೆಲ್ಲಾ ನನ್ನ ಜತೆ ನಿಂತಿರುವುದು ನೋಡಿ, ಖುಷಿಯಾಗುತ್ತದೆ. ನೀವೆಲ್ಲಾ ಇಲ್ಲದಿದ್ದರೆ, ನನ್ನ ಜರ್ನಿ ನಿಜಕ್ಕೂ ಅಪೂರ್ಣ' ಎಂದು ಸುದೀಪ್ ಹೇಳಿಕೊಂಡಿದ್ದಾರೆ.