

ಬೆಂಗಳೂರು: ಕರೊನಾ ರೂಪಾಂತರಿ ಒಮಿಕ್ರಾನ್ ವೈರಾಣು ಭೀತಿಯಿದ್ದರೂ ದೈನಂದಿನ ಚಟುವಟಿಕೆ ಹಾಗೂ ನಿಯಂತ್ರಣ ಕ್ರಮಗಳ ನಡುವೆ ಸರ್ಕಾರ ಸಮತೋಲನದ ಹೆಜ್ಜೆಯಿಟ್ಟಿದೆ. ಹೊಸ ಪ್ರಭೇದವು ವೇಗವಾಗಿ ಹರಡುತ್ತದೆ, ರೋಗ ಲಕ್ಷಣಗಳು ಸೌಮ್ಯವಾಗಿವೆ, ಯಾವುದೇ ಸಾವು ಸಂಭವಿಸಿಲ್ಲ ಎಂಬ ಅನೌಪಚಾರಿಕ ಮಾಹಿತಿ ಲಭ್ಯತೆಯಿಂದ ಸದ್ಯಕ್ಕೆ ನೆಮ್ಮದಿ ನಿಟ್ಟುಸಿರುಬಿಟ್ಟಿದೆ. ಒಮಿಕ್ರಾನ್ ವರ್ತನೆ ಹಾಗೂ ತೀವ್ರತೆ ದೃಢಪಡುವ ತನಕ ಸಹಜ ಜನ-ಜೀವನಕ್ಕೆ ತೊಂದರೆಯಾಗದಂತಹ ಹೊಸ ಮಾರ್ಗಸೂಚಿ ಪ್ರಕಟಿಸಿದೆ.
ಶಾಲೆ-ಕಾಲೇಜುಗಳಲ್ಲಿ ನೇರ ತರಗತಿ ಯಥಾರೀತಿ ಮುಂದುವರಿಯಲಿದೆ. ಉದ್ಯಮ, ವ್ಯಾಪಾರ-ವಹಿವಾಟು, ಜನರ ಓಡಾಟ, ಬಾರ್, ಪಬ್, ರೆಸ್ಟೋರೆಂಟ್, ಹೋಟೆಲ್, ಈಜುಗೊಳ, ಜಿಮ್ ಮತ್ತಿತರ ದೈನಂದಿನ ಚಟುವಟಿಕೆ ಮುಕ್ತವಾಗಿವೆ. ದೇಶದಲ್ಲೇ ಮೊದಲಿಗೆ ರಾಜ್ಯದಲ್ಲಿ ಎರಡು ಒಮಿಕ್ರಾನ್ ಪ್ರಕರಣ ದೃಢಪಟ್ಟ ಹಿನ್ನೆಲೆಯಲ್ಲಿ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಚಿವರು, ತಜ್ಞರು ಮತ್ತು ಅಧಿಕಾರಿಗಳ ಜತೆ ಶುಕ್ರವಾರ ಸುದೀರ್ಘವಾಗಿ ರ್ಚಚಿಸಿದರು.
ದಂಡ ತಪ್ಪಿದ್ದಲ್ಲ: ವೈಜ್ಞಾನಿಕ ವಿಶ್ಲೇಷಣೆ, ಖಚಿತ ವರದಿ ತನಕ ಕಾಯದೆ ಅಗತ್ಯವಿರುವ ಮುನ್ನೆಚ್ಚರಿಕೆ ಕ್ರಮಗಳಿಗೆ ಒತ್ತು ನೀಡಿ, ಒಮಿಕ್ರಾನ್ ಕಟ್ಟಿಹಾಕುವ ನಿಟ್ಟಿನಲ್ಲೂ ಸರ್ಕಾರ ಹಳೆಯ ಸೂತ್ರ ಜಾರಿಗೊಳಿಸಿದೆ. ಕಾರ್ಯಕ್ರಮಗಳಲ್ಲಿ ಜನದಟ್ಟಣೆಗೆ ನಿರ್ಬಂಧ, ಮುನ್ನೆಚ್ಚರಿಕೆ ನಿಯಮಗಳ ಪಾಲನೆಗಾಗಿ ದಂಡದ ಮಾರ್ಗ ಕಂಡುಕೊಂಡಿದೆ.
ಹಾಸಿಗೆ, ಔಷಧ ಸನ್ನದ್ಧ: ಪರಿಸ್ಥಿತಿ ನಿರ್ವಹಣೆಗಾಗಿ ಆಸ್ಪತ್ರೆ ಹಾಸಿಗೆಗಳು, ಆಕ್ಸಿಜನ್ ಹಾಸಿಗೆಗಳು, ಔಷಧ ಇನ್ನಿತರ ಪರಿಕರಗಳು, ಆಕ್ಸಿಜನ್ ಉತ್ಪಾದನಾ ಸ್ಥಾವರಗಳು, ಸಂಗ್ರಹಣೆ ಮತ್ತು ಸಾಗಣೆ ಜಾಲ ಚುರುಕು, ವೈದ್ಯರು ಮತ್ತು ಸಿಬ್ಬಂದಿಯನ್ನು ಸನ್ನದ್ಧ ಸ್ಥಿತಿಯಲ್ಲಿರಿಸುವುದು ಸೇರಿದಂತೆ ಹಲವು ಕ್ರಮಗಳಿಗೆ ಸರ್ಕಾರ ಮುಂದಾಗಿದೆ.
ವೈರುಧ್ಯದ ವರದಿ ತನಿಖೆ: ದಕ್ಷಿಣ ಆಫ್ರಿಕಾದಿಂದ ಪ್ರಯಾಣಿಸಿದ ಒಮಿಕ್ರಾನ್ ವೈರಾಣು ಸೋಂಕಿತ ವ್ಯಕ್ತಿಯ ಪರೀಕ್ಷಾ ವರದಿಗಳಲ್ಲಿ ವೈರುಧ್ಯ ಕಂಡು ಬಂದಿರುವ ಕಾರಣ ಕೂಲಂಕಷ ತನಿಖೆ ನಡೆಸಲು ನಿರ್ಧರಿಸಲಾಗಿದೆ. ಪ್ರಯೋಗಾಲಯದಿಂದ ಲೋಪವಾಯಿತೇ? ಅಥವಾ ಬೇರೆ ಕಾರಣಗಳು ಇವೆಯೆ ಎಂಬ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವ ಜವಾಬ್ದಾರಿಯನ್ನು ಹೈಗ್ರೌಂಡ್ಸ್ ಪೊಲೀಸರಿಗೆ ಒಪ್ಪಿಸಲಾಗಿದೆ ಎಂದು ಆರ್.ಅಶೋಕ್ ಹೇಳಿದರು.
ಬೆಂಗಳೂರಿನ ಖಾಸಗಿ ಹೋಟೆಲೊಂದರಲ್ಲಿ ನಡೆದ ಸಮ್ಮೇಳನದಲ್ಲಿ ಈ ವ್ಯಕ್ತಿ ಭಾಗವಹಿಸಿದ್ದು, ಪ್ರಾರಂಭಿಕ ಪರೀಕ್ಷೆಯಲ್ಲಿ ಒಮಿಕ್ರಾನ್ ವೈರಾಣು ಸೋಂಕು ಶಂಕೆ ವ್ಯಕ್ತವಾಗಿತ್ತು. ನಂತರ ನೆಗೆಟಿವ್ ವರದಿ ಪಡೆದುಕೊಂಡು ದುಬೈಗೆ ತೆರಳಿದ್ದಾರೆ ಎಂದು ಹೇಳಲಾಗುತ್ತಿದೆ.
ಚುನಾವಣಾ ಪ್ರಚಾರ, ಹಾರಿಕೆ ಉತ್ತರ: ಸೋಂಕು ಹರಡುವಿಕೆ ತಡೆಯಲು ಶಾಲೆ-ಕಾಲೇಜುಗಳಲ್ಲಿ ಸಮಾರಂಭ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ನಿರ್ಬಂಧ ವಿಧಿಸಲಾಗಿದೆ. ಆದರೆ ವಿಧಾನ ಪರಿಷತ್ ಚುನಾವಣಾ ಪ್ರಚಾರ ಸಭೆಗಳಿಗೆ ನಿರ್ಬಂಧವಿಲ್ಲವೇಕೆ ? ಎಂಬ ಪತ್ರಕರ್ತರ ಪ್ರಶ್ನೆಗೆ ಆರ್.ಅಶೋಕ್ ನೇರವಾಗಿ ಉತ್ತರಿಸದೇ ನುಣುಚಿಕೊಂಡರು. ಶಾಲೆ-ಕಾಲೇಜುಗಳಲ್ಲಿ ಇತ್ತೀಚೆಗೆ ಹೆಚ್ಚು ಸೋಂಕು ಪ್ರಕರಣಗಳು ವರದಿಯಾದ ಹಿನ್ನೆಲೆಯಲ್ಲಿ ನಿರ್ಬಂಧ ವಿಧಿಸಲಾಗಿದೆ ಎಂದು ಹಾರಿಕೆ ಉತ್ತರ ನೀಡಿದರು.
ಐದು ಅಂಶಗಳ ಸೂತ್ರ ಪಾಲನೆ: ಕೇಂದ್ರ ಸರ್ಕಾರದ ನಿರ್ದೇಶನ ಹಾಗೂ ಮುಖ್ಯಮಂತ್ರಿ ಬೊಮ್ಮಾಯಿ ನೇತೃತ್ವದ ಸಭೆಯಲ್ಲಿ ತೆಗೆದುಕೊಂಡ ತೀರ್ವನದಂತೆ ಹೊಸ ಮಾರ್ಗಸೂಚಿಯನ್ನು ಶುಕ್ರವಾರ ಪ್ರಕಟಿಸಲಾಗಿದೆ. ಪರೀಕ್ಷೆ, ಪತ್ತೆ, ಚಿಕಿತ್ಸೆ, ಲಸಿಕೆ ಸೇರಿದಂತೆ ಐದು ಅಂಶಗಳ ಸೂತ್ರಗಳು, ಹಲವು ನಿರ್ಬಂಧಗಳನ್ನು ಡಿ.31ರವರೆಗೆ ವಿಸ್ತರಿಸಲಾಗಿದ್ದು, ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಬೇಕು ಎಂದು ನಿರ್ದೇಶಿಸಿದೆ.
ಸಂಪರ್ಕವಿಲ್ಲದವರ ಶೋಧ ಚುರುಕು: ಕರೊನಾ ಒಮಿಕ್ರಾನ್ ವೈರಾಣು ಸೋಂಕುಪೀಡಿತರಾದ ಶಂಕೆಯುಳ್ಳ 10 ಜನರ ಸಂಪರ್ಕವಿಲ್ಲದಾಗಿದೆ. ಶೋಧ ಕಾರ್ಯ ಚುರುಕು ಗೊಳಿಸಲು ಬೆಂಗಳೂರು ಪೊಲೀಸ್ ಆಯುಕ್ತರಿಗೆ ಸೂಚಿಸಿದ್ದು, 24 ತಾಸಿನೊಳಗೆ ಪತ್ತೆಯಾಗುವ ವಿಶ್ವಾಸವಿದೆ ಎಂದು ಸಚಿವ ಆರ್.ಅಶೋಕ್ ತಿಳಿಸಿದರು.