

ನವದೆಹಲಿ: ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳಲ್ಲಿ ಕೋವಿಡ್ -19 ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆ ಆಡಳಿತಾತ್ಮಕ ಸುಧಾರಣೆಗಳು ಮತ್ತು ಸಾರ್ವಜನಿಕ ಕುಂದುಕೊರತೆ ಇಲಾಖೆಯಲ್ಲಿನ (ಡಿಎಆರ್‌ಪಿಜಿ) ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಕೇಂದ್ರ ಸರ್ಕಾರ ಹೊಸ ಸುರಕ್ಷತಾ ಮಾರ್ಗಸೂಚಿಗಳನ್ನು ಹೊರಡಿಸಿದೆ.
ಈ ಸುತ್ತೋಲೆಯಲ್ಲಿ, ರೋಗಲಕ್ಷಣವಿಲ್ಲದ ಸಿಬ್ಬಂದಿ ಮಾತ್ರ ಕಚೇರಿಗೆ ಬರುವಂತೆ ಹಾಗೂ ಲಘು ಶೀತ, ಜ್ವರ ಕೆಮ್ಮು ಇರುವವರೆಲ್ಲರೂ ಮನೆಯಲ್ಲೇ ಇರಬೇಕು ಎಂದು ತಿಳಿಸಲಾಗಿದೆ. ಕಂಟೇನ್ಮೆಂಟ್ ವಲಯಗಳಲ್ಲಿರುವ ಸಿಬ್ಬಂದಿ ಕಡ್ಡಾಯವಾಗಿ ಮನೆಯಿಂದಲೇ ಕೆಲಸ ಮಾಡಬೇಕು. ಒಂದು ದಿನಕ್ಕೆ ಡಿಎಆರ್ಪಿಯ ಕನಿಷ್ಠ 20 ಅಧಿಕಾರಿಗಳು ಮತ್ತು ಸಿಬ್ಬಂದಿ ಸದಸ್ಯರು ಮಾತ್ರ ಕಚೇರಿಗೆ ಹಾಜರಾಗಬೇಕು. ಅದಕ್ಕೆ ಅನುಗುಣವಾಗಿ ಡ್ಯೂಟಿ ಚಾರ್ಟ್ ಮಾಡಲು ಆಡಳಿತ ಇಲಾಖೆಗೆ ಜೂನ್ 5ರ ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಸುತ್ತೋಲೆಯಲ್ಲಿ ಡಿಎಆರ್‌ಪಿಜಿ ಉದ್ಯೋಗಿಗಳಿಗೆ ಸೂಚಿಸಲಾದ ಇತರ ಮಾನದಂಡಗಳೆಂದರೆ:
• ಫೇಸ್ ಮಾಸ್ಕ್ ಮತ್ತು ಫೇಸ್ ಶೀಲ್ಡ್ ಗಳನ್ನು ಕಚೇರಿಯ ಅವಧಿಯಲ್ಲಿ ಕಡ್ಡಾಯವಾಗಿ ಧರಿಸಬೇಕು.
* ಬಳಸಿದ ಮಾಸ್ಕ್ ಮತ್ತು ಕೈಗವಸುಗಳನ್ನು ಜೈವಿಕ ವೈದ್ಯಕೀಯ ತ್ಯಾಜ್ಯ ತೊಟ್ಟಿಯಲ್ಲಿ ಮಾತ್ರ ಹಾಕಬೇಕು.
• ಮುಖಾಮುಖಿ ಸಭೆಗಳು / ಚರ್ಚೆಗಳು / ಸಂವಾದಗಳನ್ನು ಸಾಧ್ಯವಾದಷ್ಟು ತಪ್ಪಿಸಬೇಕು. ಈ ಉದ್ದೇಶಗಳಿಗಾಗಿ ಸಿಬ್ಬಂದಿ ಇಂಟರ್ಕಾಮ್, ಫೋನ್ ಬಳಸಬೇಕು ಅಥವಾ ವಿಡಿಯೋ -ಕಾನ್ಫರೆನ್ಸ್ ಮಾಡಬೇಕು.
* ಸೋಂಕು ಹರಡುವಿಕೆಯನ್ನು ತಡೆಗಟ್ಟಲು ಪ್ರತಿ ಅರ್ಧಗಂಟೆಗೊಮ್ಮೆ ಕೈ ತೊಳೆಯುವುದು ಅತ್ಯಗತ್ಯ. ಕಾರಿಡಾರ್‌ನ ಪ್ರಮುಖ ಸ್ಥಳಗಳಲ್ಲಿ ಕಡ್ಡಾಯವಾಗಿ ಹ್ಯಾಂಡ್ ಸ್ಯಾನಿಟೈಸರ್‌ಗಳನ್ನು ಅಳವಡಿಸಬೇಕು.
* ಆಗಾಗ ಮುಟ್ಟಬಹುದಾದ ಸ್ವಿಚ್, ಬಾಗಿಲು ಗುಬ್ಬಿಗಳು, ಎಲಿವೇಟರ್ ಗುಂಡಿಗಳು, ಕೈ ಹಳಿಗಳಂಥ ಸಾಧನಗಳನ್ನು ಪ್ರತಿ ಗಂಟೆಗೊಮ್ಮೆ ಸ್ವಚ್ಛಗೊಳಿಸಬೇಕು.
* ಕೀಬೋರ್ಡ್‌ಗಳು, ಮೌಸ್, ಫೋನ್, ಎಸಿ ರಿಮೋಟ್‌ಗಳು ಮುಂತಾದ ವೈಯಕ್ತಿಕ ಸಾಧನಗಳನ್ನು ಆಗಾಗ್ಗೆ ಎಥೆನಾಲ್ ಆಧಾರಿತ ಸೋಂಕುನಿವಾರಕವನ್ನು ಬಳಸಿ ಸ್ವಚ್ಛಗೊಳಿಸಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು.
ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿ ಈ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ತಿಳಿಸಲಾಗಿದೆ.
ಸಂಸತ್ತಿನ ಇಬ್ಬರು ಸಿಬ್ಬಂದಿಗೆ ಹಾಗೂ ಕೇಂದ್ರ ವಿದೇಶಾಂಗ ಸಚಿವಾಲಯದ (ಎಂಇಎ) ಪ್ರಧಾನ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಇಬ್ಬರು ಸಿಬ್ಬಂದಿಗೂ ಕಳೆದ ತಿಂಗಳು ಕೋವಿಡ್ -19 ಸೋಂಕು ತಗುಲಿರುವುದು ದೃಢಪಟ್ಟಿತ್ತು.
ನವದೆಹಲಿಯ ಇತರ ಭಾಗಗಳಲ್ಲಿ ತಮ್ಮ ಕಚೇರಿಗಳನ್ನು ಹೊಂದಿರುವ ವಿವಿಧ ಕೇಂದ್ರ ಸಚಿವಾಲಯಗಳು ಮತ್ತು ಇಲಾಖೆಗಳಲ್ಲಿಯೂ ಕೋವಿಡ್ -19 ಪ್ರಕರಣಗಳು ವರದಿಯಾಗಿವೆ.
ದೇಶದಲ್ಲಿ ಪ್ರಸ್ತುತ 2,66,598 ಕೋವಿಡ್ -19 ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ಮಂಗಳವಾರದ ವರೆಗೆ ಅಂದಾಜು 7466 ಜನ ಸಾವಿಗೀಡಾಗಿದ್ದಾರೆ.