ಕಂಟೇನ್ಮೆಂಟ್ ವಲಯದ ವಿದ್ಯಾರ್ಥಿಗಳಿಗೆ ಪರೀಕ್ಷೆ: ಸಿಬಿಎಸ್ಸಿಗೆ ಬಗೆಹರಿಯದ ಗೊಂದಲ

CBSE JPG
Published on

ನವದೆಹಲಿ: 10 ಮತ್ತು 12ನೇ ತರಗತಿಗಳಿಗೆ ರಾಷ್ಟ್ರವ್ಯಾಪಿ ಪರೀಕ್ಷೆಗಳನ್ನು ನಡೆಸಲು ಸಿದ್ಧವಾಗುತ್ತಿರುವ ಕೇಂದೀಯ ಮಾಧ್ಯಮಿಕ ಶಿಕ್ಷಣ ಮಂಡಳಿ (ಸಿಬಿಎಸ್​ಇ), ಕಂಟೇನ್ಮೆಂಟ್ ಪ್ರದೇಶಗಳಲ್ಲಿನ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗದಿದ್ದರೆ ಏನು ಮಾಡಬೇಕೆಂಬ ಗೊಂದಲದಲ್ಲಿದೆ.

13 ಸಾವಿರ ಶಾಲೆಗಳಲ್ಲಿ ಜುಲೈನಲ್ಲಿ ಪರೀಕ್ಷೆಗಳು ನಡೆಯಲಿವೆ ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಘೋಷಿಸಿದೆ.

ವಿದೇಶಗಳಲ್ಲಿರುವ ಸಿಬಿಎಸ್​​ಇ ಶಾಲೆಗಳ ಮಕ್ಕಳಿಗೆ ಪರೀಕ್ಷೆಗಳಿರುವುದಿಲ್ಲ. ಅಂಥ ವಿದ್ಯಾರ್ಥಿಗಳಿಗೆ ಸಮಾನವೆಂದು ಈ ವಿದ್ಯಾರ್ಥಿಗಳನ್ನು ಪರಿಗಣಿಸುವುದೂ ಒಂದು ಆಯ್ಕೆಯಾಗಿದೆ. ಆದರೂ ಇದು ಸರಳ ಸಮಸ್ಯೆಗಳಲ್ಲ, ಈ ಕುರಿತು ಸಂಪೂರ್ಣವಾಗಿ ಚರ್ಚಿಸಬೇಕಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಒಂದು ವೇಳೆ ಸಿಬಿಎಸ್‌ಇ ಕಂಟೇನ್ಮೆಂಟ್ ವಲಯದ ವಿದ್ಯಾರ್ಥಿಗಳನ್ನು ಪರೀಕ್ಷಾ ಕೇಂದ್ರಗಳಿಗೆ ಕರೆಯಲು ನಿರ್ಧರಿಸಿದರೆ ಇದಕ್ಕೆ ಕೇಂದ್ರ ಗೃಹ ಸಚಿವಾಲಯದ ಅನುಮತಿಯೂ ಬೇಕಾಗಬಹುದು.

ದೆಹಲಿಯಂತಹ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯ ಶಾಲೆಗಳು ಮತ್ತು ಕೇಂದ್ರೀಯ ವಿದ್ಯಾಲಯಗಳು ಮತ್ತು ಜವಾಹರ್ ನವೋದಯ ವಿದ್ಯಾಲಯಗಳಂತಹ ಅನೇಕ ಶಾಲೆಗಳನ್ನು ಕ್ವಾರಂಟೈನ್ ಕೇಂದ್ರಗಳನ್ನಾಗಿ ಬಳಸಲಾಗುತ್ತಿದೆ ಎಂಬ ಅಂಶವನ್ನು ಕೆಲವು ಅಧಿಕಾರಿಗಳು ಒತ್ತಿ ಹೇಳಿದ್ದಾರೆ. ಪರೀಕ್ಷೆಗಳನ್ನು ನಡೆಸಲು, ಈ ಸಂಸ್ಥೆಗಳನ್ನು ಅವುಗಳ ನಿರ್ವಹಣಾ ಸಂಸ್ಥೆಗಳಿಗೆ ಹಿಂತಿರುಗಿಸಬೇಕಾಗುತ್ತದೆ. ಮಂಡಳಿ ಮತ್ತು ಸಚಿವಾಲಯವು ಈ ವಿಷಯಗಳನ್ನು ಗಮನಿಸಿದೆ. ಆದಾಗ್ಯೂ, ಅಂತಹ ಅಂಶಗಳ ಬಗ್ಗೆ ಅವಸರದಲ್ಲಿ ನಿರ್ಧಾರ ಕೈಕೊಳ್ಳಲು ಸಾಧ್ಯವಿಲ್ಲ. ಎಲ್ಲಾ ಅಂಶಗಳನ್ನು ಪರಿಗಣಿಸಲಾಗುತ್ತಿದೆ ಎಂದು ಅಧಿಕಾರಿ ಉಲ್ಲೇಖಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net