ಹೊಸ ಜಿಲ್ಲೆ ರಚನೆಗೆ ಅಧಿಕೃತ‌ ಮುದ್ರೆಯೊತ್ತಿದ ಬಿಎಸ್​ವೈ ಸಂಪುಟ

vijayanagara-district
Published on

ಬೆಂಗಳೂರು: ಹಲವರ ವಿರೋಧದ ನಡುವೆಯೂ ಬಳ್ಳಾರಿ ಜಿಲ್ಲೆಯನ್ನು ವಿಭಜಿಸಿ ವಿಜಯ‌ನಗರವನ್ನು ನೂತನ ಜಿಲ್ಲೆಯನ್ನಾಗಿ ಮಾಡುವ ಘೋಷಣೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸಂಪುಟ ಅಧಿಕೃತ‌ ಮುದ್ರೆಯೊತ್ತಿದೆ.

ವಿಜಯನಗರ ನೂತನ ಜಿಲ್ಲೆ ಎಂದು ಘೋಷಿಸಲು ಕಳೆದ ಸಂಪುಟ ಸಭೆಯಲ್ಲಿ ತಾತ್ವಿಕ‌ ಒಪ್ಪಿಗೆ ನೀಡಲಾಗಿತ್ತು. ಇದೀಗ ಶುಕ್ರವಾರ ಬೆಳಗ್ಗೆ ನಡೆದ ಸಂಪುಟ ಸಭೆಯಲ್ಲಿ ಅಧಿಕೃತ‌ ಒಪ್ಪಿಗೆ ಸಿಕ್ಕಿದೆ.

ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ, ವಿಜಯನಗರ ನೂತನ ಜಿಲ್ಲೆ ವ್ಯಾಪ್ತಿಗೆ 6 ತಾಲೂಕುಗಳನ್ನು ಸೇರಿಸಿದ್ದೇವೆ. ತಕರಾರು ಪಡೆದು ಅಂತಿಮ ಅಧಿಸೂಚನೆ ಹೊರಡಿಸಲಾಗುತ್ತದೆ. ಹೊಸ ಜಿಲ್ಲೆಗೆ ಹೊಸಪೇಟೆ, ಹರಪನಹಳ್ಳಿ, ಹೂವಿನ ಹಡಗಲಿ, ಹಗರಿಬೊಮ್ಮನಹಳ್ಳಿ, ಕೊಟ್ಟೂರು, ಕೂಡ್ಲಿಗಿ ತಾಲೂಕುಗಳನ್ನು ಸೇರ್ಪಡೆ ಮಾಡಲಾಗಿದೆ ಎಂದರು.

ಬಳ್ಳಾರಿ, ಕುರುಗೋಡು, ಕಂಪ್ಲಿ, ಸಿರಗುಪ್ಪ, ಸಂಡೂರು ತಾಲೂಕುಗಳು ಬಳ್ಳಾರಿ ಜಿಲ್ಲೆಯಲ್ಲಿ ಉಳಿಯಲಿವೆ. ವಿಜಯನಗರ ಜಿಲ್ಲೆಗೆ ಹೊಸಪೇಟೆ ಕೇಂದ್ರ ಸ್ಥಾನವಾಗಿರಲಿದೆ. ವಿಜಯನಗರ ಜಿಲ್ಲೆಗೆ ಕಂಪ್ಲಿ ಹಾಗೂ ಕೂಡ್ಲಿಗಿ ಸೇರ್ಪಡೆ ಗೊಂದಲಗಳಿಗೆ ರಾಜ್ಯ ಸಚಿವ ಸಂಪುಟ ತೆರೆ ಎಳೆದಿದ್ದು, ಕೂಡ್ಲಿಗಿ ತಾಲೂಕನ್ನು ವಿಜಯನಗರಕ್ಕೆ ಸೇರ್ಪಡೆ ಮಾಡಿ ಕಂಪ್ಲಿ ತಾಲೂಕನ್ನು ಬಳ್ಳಾರಿಗೆ ಸೇರ್ಪಡೆ ಮಾಡಲಾಗಿದೆ.

ಇದರೊಂದಿಗೆ ಕರ್ನಾಟಕ 31 ಜಿಲ್ಲೆಗಳನ್ನು ಹೊಂದಿದ ರಾಜ್ಯವಾಗಲಿದೆ. ಈ ನಡುವೆ, ಹೊಸ ಜಿಲ್ಲೆ ಸೃಷ್ಟಿಗೆ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net