

ಹಾರೋಹಳ್ಳಿ: ರಾತ್ರಿ ಊಟ ಮಾಡಿ ಅಮ್ಮ ಮತ್ತು ಮಗ ಮಲಗಿದ್ದರು. ಮನೆಯಲ್ಲೇ ಇದ್ದ ಅಪ್ಪ ತಡರಾತ್ರಿಯೇ ಪರಾರಿಯಾಗಿದ್ದ. ಅಷ್ಟರಲ್ಲಿ ಮಲಗಿದ್ದಲ್ಲೇ ಅಮ್ಮ ಹೆಣವಾಗಿದ್ದಳು. ಇದ್ಯಾವುದರ ಪರಿವೇ ಇಲ್ಲದ ಮಗ, ಎಂದಿನಂತೆ ಬೆಳಗ್ಗೆ ಎದ್ದು ಮನೆಯಿಂದ ಹೊರ ಬಂದಿದ್ದ.
ಅಷ್ಟೊತ್ತಿಗಾಗಲೇ ಮನೆಯ ಹಸುಗಳು ಕೂಗುತ್ತಿದ್ದವು. ಹಸುಗಳನ್ನು ಹೊರಗೆ ಕಟ್ಟಿಹಾಕಿ ನೀರು ಕುಡಿಸುತ್ತಿದ್ದ ಅಮ್ಮ ಎಲ್ಲಿ ಹೋದಳು ಎಂದು ಹುಡುಕುತ್ತ ಮನೆ ಒಳಗೆ ಬಂದ ಮಗ, 'ಅಮ್ಮ ಯಾಕಿನ್ನು ಮಲಗಿರುವೆ? ಟೈಂ ಆಗಿದೆ...' ಎನ್ನುತ್ತ ಹತ್ತಿರ ಬರುತ್ತಿದ್ದಂತೆ ಜೋರಾಗಿ ಚೀರಾಡಿದ. ಏನಾಯ್ತು ಎಂದು ಅಕ್ಕಪಕ್ಕದವರು ಬರುತ್ತಿದ್ದಂತೆ ಗೊತ್ತಾಯ್ತು ಆ ತಾಯಿ ಕೊಲೆಯಾಗಿದ್ದಾಳೆ ಎಂದು!
ಹೌದು, ಇಂತಹ ಘಟನೆ ರಾಮನಗರ ಜಿಲ್ಲೆ ಕನಕಪುರ ತಾಲೂಕು ಹಾರೋಹಳ್ಳಿ ಹೋಬಳಿಯ ಭದ್ರೇಗೌಡನದೊಡ್ಡಿ ಗ್ರಾಮದಲ್ಲಿ ಗುರುವಾರ ಬೆಳಗ್ಗೆ ಸಂಭವಿಸಿದೆ. ಮಮತಾ (32) ಕೊಲೆಯಾದ ದುರ್ದೈವಿ. ದೊಡ್ಡಕಲ್ಲುಬಾಳು ಅಂಗನವಾಡಿ ಕಾರ್ಯಕರ್ತೆಯಾಗಿದ್ದರು.
18 ವರ್ಷಗಳ ಹಿಂದೆ ಮಮತಾಗೆ ಚಂದಾವರೆಗೌಡ ಎಂಬಾತನ ಜತೆ ಮದುವೆ ಆಗಿತ್ತು. ಇವರಿಬ್ಬರೂ ಭದ್ರೇಗೌಡನದೊಡ್ಡಿ ನಿವಾಸಿಗಳು. ಅಲ್ಲದೆ ಸಂಬಂಧಿಗಳೂ ಕೂಡ. ಈ ದಂಪತಿಗೆ ಮಗ ಮತ್ತು ಮಗಳು ಇದ್ದಾರೆ. ಮದ್ಯವ್ಯಸನಿಯಾಗಿದ್ದ ಚಂದಾವರೆಗೌಡ ಯಾವುದೇ ಕೆಲಸ ಮಾಡುತ್ತಿರಲಿಲ್ಲ. ಮಮತಾ ದೊಡ್ಡಕಲ್ಲುಬಾಳು ಗ್ರಾಮದಲ್ಲಿ ಅಂಗನವಾಡಿ ಕಾರ್ಯಕರ್ತೆಯಾಗಿದ್ದಳು.
ಕುಡಿದ ಅಮಲಿನಲ್ಲಿ ಹೆಂಡತಿ ಜತೆ ಜಗಳವಾಡುತ್ತಿದ್ದ. ಒಂದು ತಿಂಗಳ ಹಿಂದೆ ಜಗಳವಾಗಿ ಚಿತ್ರಹಿಂಸೆ ನೀಡಿದ್ದರಿಂದ ನೊಂದ ಮಮತಾ ಅದೇ ಗ್ರಾಮದ ತವರು ಮನೆಗೆ ಹೋಗಿದ್ದಳು. ಊರಿನ ಹಿರಿಯರು ಪಂಚಾಯ್ತಿ ಮಾಡಿದ ಬಳಿಕ ಗಂಡನ ಮನೆಗೆ ವಾಪಸ್ ಆಗಿದ್ದಳು.
ಇದೇ ವಿಚಾರವಾಗಿ ಕುಪಿತಗೊಂಡಿದ್ದ ಚಂದಾವರೆಗೌಡ(40) ಬುಧವಾರ ರಾತ್ರಿ ನಿದ್ರೆಗೆ ಜಾರಿದ್ದ ಪತ್ನಿ ತಲೆಗೆ ಹಾರೆಯಿಂದ ಹೊಡೆದು ಹತ್ಯೆ ಮಾಡಿ ಪರಾರಿಯಾಗಿದ್ದಾನೆ. ಗುರುವಾರ ಬೆಳಗ್ಗೆ ಹಸುಗಳು ಕೂಗುತ್ತಿರುವುದನ್ನು ಕೇಳಿಸಿಕೊಂಡ ಮಗ, ಅಮ್ಮನನ್ನು ಎಬ್ಬಿಸಲು ಮುಂದಾದಾಗ ಮೃತಪಟ್ಟಿರುವುದನ್ನು ಕಂಡು ಕೂಗಿಕೊಳ್ಳುತ್ತಿದ್ದಂತೆ ಅಕ್ಕಪಕ್ಕದ ಮನೆಯವರು ನೋಡಿ ಕನಕಪುರ ಗ್ರಾಮಾಂತರ ಠಾಣೆಗೆ ಸುದ್ದಿ ಮುಟ್ಟಿಸಿದರು.
ಕನಕಪುರ ಸಿಪಿಐ ಪ್ರಕಾಶ್, ಗ್ರಾಮಾಂತರ ಠಾಣೆ ಎಸ್ಐ ಅನಂತರಾಮ್, ಎಎಸ್ಐ ರುದ್ರಪ್ಪ ಮತ್ತು ಸಿಬ್ಬಂದಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿ ಪತ್ತೆಗಾಗಿ ಶೋಧ ಮುಂದುವರಿಸಿದ್ದಾರೆ.