

PM Sushila Karki: ನೇಪಾಳದಲ್ಲಿ ಭ್ರಷ್ಟಾಚಾರ ಮತ್ತು ಸೋಷಿಯಲ್ ಮೀಡಿಯಾ ಬ್ಯಾನ್ನಿಂದ ಶುರುವಾದ ಪ್ರತಿಭಟನೆ, ಹಿಂಸಾಚಾರ ಅಲ್ಲಿನ ಚುನಾಯಿತ ಸರ್ಕಾರವನ್ನೇ ಬಲಿತೆಗೆದುಕೊಂಡಿದೆ. ಸಂಸತ್ತು ವಿಸರ್ಜನೆಯಾಗಿದ್ದು, ಸೆ.12ರ ತಡರಾತ್ರಿ ಹಂಗಾಮಿ ಸರ್ಕಾರದ ಪ್ರಧಾನಿಯಾಗಿ ನಿವೃತ್ತ ನೇಪಾಳ ಸುಪ್ರೀಂಕೋರ್ಟ್ನ ನ್ಯಾಯಮೂರ್ತಿ ಸುಶೀಲಾ ಕರ್ಕಿ ಪ್ರಮಾಣವಚನ ಸ್ವೀಕರಿಸ್ದಾರೆ. ದೇಶದ ಮೊದಲ ಮಹಿಳಾ ಪ್ರಧಾನಮಂತ್ರಿಯಾಗಿ ಇತಿಹಾಸ ನಿರ್ಮಿಸಿದ್ದಾರೆ.
ನೇಪಾಳ ಅಧ್ಯಕ್ಷ ರಾಮಚಂದ್ರ ಪೌಡೆಲ್ ಅವರ ಕಚೇರಿ ಶೀತಲ್ ನಿವಾಸ್ನಲ್ಲಿ ಸುಶೀಲಾ ಕರ್ಕಿ ಪ್ರಮಾಣ ವಚನ ಸ್ವೀಕರಿಸಿದರು. ರಾತ್ರಿ 11 ಗಂಟೆಯಿಂದ ಜಾರಿಗೆ ಬರುವಂತೆ ಸದನವನ್ನು ವಿಸರ್ಜಿಸಲಾಯಿತು. ಮಾಜಿ ಪ್ರಧಾನಿ ಬಾಬುರಾಮ್ ಭಟ್ಟಾರಾಯ್ ಮತ್ತು ಭಾರತ, ಚೀನಾ ಮತ್ತು ಅಮೆರಿಕ ಸೇರಿದಂತೆ ಹಲವಾರು ರಾಜತಾಂತ್ರಿಕರು ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಜನರಲ್ ಝಡ್ ಪ್ರತಿಭಟನೆಯ ಐದನೇ ದಿನವಾದ ಸೆಪ್ಟೆಂಬರ್ 12 ನೇಪಾಳದ ರಾಜಕೀಯ ಇತಿಹಾಸದಲ್ಲಿ ಒಂದು ನಿರ್ಣಾಯಕ ಕ್ಷಣವೆಂದು ಸ್ಮರಿಸಲ್ಪಡುತ್ತದೆ ಎನ್ನಬಹುದು. ಆ ದಿನ ಯುವಕರು ಒಗ್ಗಟ್ಟಿನಿಂದ ಮತ್ತು ದೃಢನಿಶ್ಚಯದಿಂದ ಸರ್ಕಾರವನ್ನು ಉರುಳಿಸಿ, ಸಂಸತ್ತನ್ನು ವಿಸರ್ಜಿಸಿದರು. ಭ್ರಷ್ಟಾಚಾರ ವಿರೋಧಿ ಹೋರಾಟಕ್ಕೆ ಹೆಸರುವಾಸಿಯಾದ ಮಹಿಳೆಯೊಬ್ಬರನ್ನು ಅತ್ಯುನ್ನತ ಕಾರ್ಯಕಾರಿ ಹುದ್ದೆಗೆ ಏರಸಿದರು ಎನ್ನಬಹುದು.
ಯಾರೀ ಸುಶೀಲಾ ಕರ್ಕಿ?
ನೇಪಾಳದ ಬಿರಾಟ್ನಗರದಲ್ಲಿ ಜೂನ್ 7, 1952 ರಂದು ಜನಿಸಿದ 73 ವರ್ಷದ ಸುಶೀಲಾ ಕರ್ಕಿ ರಾಜಕಾರಣ ಕುಟುಂಬದ ಹಿನ್ನಲೆಯವರಲ್ಲ. ನೇಪಾಳದ ಮೊದಲ ಮಹಿಳಾ ಮುಖ್ಯ ನ್ಯಾಯಮೂರ್ತಿಯಾಗಿ ಜುಲೈ 2016 ರಿಂದ ಜೂನ್ 2017 ರವರೆಗೆ ಸೇವೆ ಸಲ್ಲಿಸಿದ್ದಕ್ಕಾಗಿ ಹೆಚ್ಚು ಹೆಸರುವಾಸಿಯಾಗಿದ್ದಾರೆ. ಭ್ರಷ್ಟಾಚಾರದ ಬಗ್ಗೆ ಶೂನ್ಯ ಸಹಿಷ್ಣುತೆಯ ನೀತಿಯಿಂದ ಅವರು ಪೀಠದಲ್ಲಿ ಸೇವೆ ಸಲ್ಲಿಸಿದ್ದರು. ಈ ನಿಲುವು ಅವರಿಗೆ ಮೆಚ್ಚುಗೆ ಮತ್ತು ವಿರೋಧ ಎರಡನ್ನೂ ಕೊಟ್ಟಿತ್ತು.
ನೇಪಾಳದ ಭ್ರಷ್ಟಾಚಾರ ಮತ್ತು ದುರಾಡಳಿತದ ವಿರುದ್ಧ ಸಾಮೂಹಿಕ ಪ್ರತಿಭಟನೆಗಳಿಂದ ನಲುಗಿಹೋಗಿರುವ ಸಮಯದಲ್ಲಿ, ಪ್ರಾಮಾಣಿಕ ನ್ಯಾಯಮೂರ್ತಿ ಖ್ಯಾತಿಯು ಅವರನ್ನು ರಾಜಕೀಯಕ್ಕೆ ತಂದಿದೆ. ಪ್ರತಿಭಟನಾಕಾರರಲ್ಲಿ ಹೆಚ್ಚಿನವರು ಅವರನ್ನು ಮಧ್ಯಂತರ ಪ್ರಧಾನಿಯಾಗಿ ನೇಮಿಸಬೇಕೆಂದು ಒತ್ತಾಯಿಸಿದ್ದರು.
ಆರಂಭಿಕ ಜೀವನ ಮತ್ತು ಶಿಕ್ಷಣ
1952 ರಲ್ಲಿ ಕೃಷಿ ಕುಟುಂಬದಲ್ಲಿ ಏಳು ಮಕ್ಕಳಲ್ಲಿ ಹಿರಿಯವಳಾಗಿ ಜನಿಸಿದ ಸುಶೀಲಾ ಕರ್ಕಿ ಪೂರ್ವ ನೇಪಾಳದಲ್ಲಿ ಬೆಳೆದರು. ಅವರ ಕುಟುಂಬವು 1959 ರಲ್ಲಿ ನೇಪಾಳದ ಮೊದಲ ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಪ್ರಧಾನಿ ಬಿಶ್ವೇಶ್ವರ ಪ್ರಸಾದ್ ಕೊಯಿರಾಲ ಅವರೊಂದಿಗೆ ನಿಕಟ ಸಂಬಂಧವನ್ನು ಹೊಂದಿತ್ತು.
ಶ್ರೀಮತಿ ಕರ್ಕಿ 1972 ರಲ್ಲಿ ಮಹೇಂದ್ರ ಮೊರಾಂಗ್ ಕ್ಯಾಂಪಸ್ನಲ್ಲಿ ಕಲಾ ವಿಭಾಗದಲ್ಲಿ ಪದವಿಯನ್ನು ಪೂರ್ಣಗೊಳಿಸಿದರು. ನಂತರ 1975 ರಲ್ಲಿ ಭಾರತದ ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ (BHU) ರಾಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಮೂರು ವರ್ಷಗಳ ನಂತರ, 1978 ರಲ್ಲಿ ಕಠ್ಮಂಡುವಿನ ತ್ರಿಭುವನ್ ವಿಶ್ವವಿದ್ಯಾಲಯದಿಂದ ಕಾನೂನು ಪದವಿಯನ್ನು ಪಡೆದಿದ್ದಾರೆ.
1985 ರಲ್ಲಿ ಧರಣ್ನ ಮಹೇಂದ್ರ ಮಲ್ಟಿಪಲ್ ಕ್ಯಾಂಪಸ್ನಲ್ಲಿ ಸಹಾಯಕ ಶಿಕ್ಷಕಿಯಾಗಿ ಸಂಕ್ಷಿಪ್ತವಾಗಿ ಕೆಲಸ ಮಾಡಿದರು. ಆದರೆ 1979 ರಿಂದ ಬಿರಾಟ್ನಗರದಲ್ಲಿ ವಕೀಲ ವೃತ್ತಿಯನ್ನುಆರಂಭಿಸಿದ್ದಾರೆ.
ನ್ಯಾಯಾಂಗ ವೃತ್ತಿಜೀವನ ಮತ್ತು ವಿವಾದ
2009 ರಲ್ಲಿ ನೇಪಾಳದ ಸುಪ್ರೀಂ ಕೋರ್ಟ್ನಲ್ಲಿ ತಾತ್ಕಾಲಿಕ ನ್ಯಾಯಾಧೀಶರಾಗಿ ನೇಮಕಗೊಂಡಾಗ ನ್ಯಾಯಾಂಗ ಕ್ಷೇತ್ರದಲ್ಲಿನ ಉತ್ತುಂಗ ಪ್ರಾರಂಭವಾಯಿತು. ಒಂದು ವರ್ಷದ ನಂತರ ಅವರನ್ನು ಶಾಶ್ವತ ನ್ಯಾಯಾಧೀಶರನ್ನಾಗಿ ದೃಢೀಕರಿಸಲಾಯಿತು. ಜುಲೈ 2016 ರ ಹೊತ್ತಿಗೆ ಅವರು ಮುಖ್ಯ ನ್ಯಾಯಾಧೀಶರ ಉನ್ನತ ಹುದ್ದೆಗೆ ಏರಿದ್ದರು.
ಏಪ್ರಿಲ್ 2017 ರಲ್ಲಿ, ಆಗಿನ ಆಡಳಿತಾರೂಢ ನೇಪಾಳಿ ಕಾಂಗ್ರೆಸ್ ಮತ್ತು ಸಿಪಿಎನ್ (ಮಾವೋವಾದಿ ಕೇಂದ್ರ)ದ ಶಾಸಕರು ಭ್ರಷ್ಟಾಚಾರ ವಿರೋಧಿ ಕಾವಲು ಸಂಸ್ಥೆಯ ಪ್ರಭಾವಿ ಮುಖ್ಯಸ್ಥರನ್ನು ಅನರ್ಹಗೊಳಿಸಿದ ತೀರ್ಪಿನಲ್ಲಿ ಪಕ್ಷಪಾತವಿದೆ ಎಂದು ಆರೋಪಿಸಿ ನ್ಯಾ. ಕರ್ಕಿಯವರ ವಿರುದ್ಧ ದೋಷಾರೋಪಣೆ ಪ್ರಸ್ತಾವನೆಯನ್ನು ಸಲ್ಲಿಸಿದರು. ಈ ಪ್ರಸ್ತಾವನೆಯು ಅವರನ್ನು ತಕ್ಷಣಕ್ಕೆ ಪದವಿಯಿಂದ ಅಮಾನತುಗೊಳಿಸಿತು.
ಬಳಿಕ ಈ ಪ್ರಯತ್ನವು ವಿಫಲವಾಯಿತು. ನ್ಯಾಯಾಂಗ ಸ್ವಾತಂತ್ರ್ಯವನ್ನು ಸಮರ್ಥಿಸಿಕೊಳ್ಳಲು ಸಾರ್ವಜನಿಕ ಪ್ರತಿಭಟನೆಗಳು ಭುಗಿಲೆದ್ದವು. ನೇಪಾಳದ ಸುಪ್ರೀಂ ಕೋರ್ಟ್ ಸ್ವತಃ ಮಧ್ಯಪ್ರವೇಶಿಸಿ ಮುಂದಿನ ವಿಚಾರಣೆಗಳನ್ನು ಸ್ಥಗಿತಗೊಳಿಸಿತು. ವಾರಗಳಲ್ಲಿ ದೋಷಾರೋಪಣೆ ಪ್ರಸ್ತಾಪವನ್ನು ಹಿಂತೆಗೆದುಕೊಳ್ಳಲಾಯಿತು. ಶ್ರೀಮತಿ ಕರ್ಕಿ ಒಂದು ತಿಂಗಳ ನಂತರ ಜೂನ್ 2017 ರಲ್ಲಿ ನಿವೃತ್ತರಾಗುವ ಮೊದಲು ತಮ್ಮ ಹುದ್ದೆಗೆ ಮರಳಿದರು.
ಮುಖ್ಯ ನ್ಯಾಯಾಧೀಶರಾಗಿದ್ದ ಅವಧಿಯಲ್ಲಿ, ಮಾಹಿತಿ ಮತ್ತು ಸಂವಹನ ಸಚಿವ ಜಯ ಪ್ರಕಾಶ್ ಪ್ರಸಾದ್ ಗುಪ್ತಾ ಅವರನ್ನು ಭ್ರಷ್ಟಾಚಾರ ಪ್ರಕರಣದಲ್ಲಿ ಶಿಕ್ಷೆಗೆ ಒಳಪಡಿಸುವುದು ಸೇರಿದಂತೆ ಹಲವಾರು ಮಹತ್ವದ ಪ್ರಕರಣಗಳಲ್ಲಿ ಅವರು ಮಹತ್ವದ ಪಾತ್ರ ವಹಿಸಿದ್ದರು.
ಪತಿ ದುರ್ಗಾ ಪ್ರಸಾದ್ ಸುಬೇದಿ ಹೋರಾಟಗಾರ
ವಾರಣಾಸಿಯ ಬಿಎಚ್ಯುನಲ್ಲಿ ವಿದ್ಯಾರ್ಥಿಯಾಗಿದ್ದಾಗ, ದುರ್ಗಾ ಪ್ರಸಾದ್ ಸುಬೇದಿ ಅವರನ್ನು ಭೇಟಿಯಾಗಿದ್ದುರು. ನಂತರ ಅವರನ್ನು ವಿವಾಹವಾದರು. ಸುಬೇದಿ ನೇಪಾಳಿ ಕಾಂಗ್ರೆಸ್ನ ಯುವ ನಾಯಕರಾಗಿದ್ದರು. ಜೂನ್ 10, 1973 ರಂದು ದೇಶೀಯ ನೇಪಾಳ ಏರ್ಲೈನ್ಸ್ ವಿಮಾನದ ಅಪಹರಣದ ನಾಟಕೀಯ ಪ್ರಸಂಗದಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು.
ನೇಪಾಳದ ಸ್ಟೇಟ್ ಬ್ಯಾಂಕ್ಗೆ ಸೇರಿದ ಸುಮಾರು 4 ಮಿಲಿಯನ್ ನೇಪಾಳಿ ರೂಪಾಯಿಗಳನ್ನು (ಆಗ ಸುಮಾರು $400,000) ಹೊತ್ತೊಯ್ಯುತ್ತಿದ್ದ ವಿಮಾನವನ್ನು ಬಿಹಾರದ ಪೂರ್ಣಿಯಾ ಜಿಲ್ಲೆಯ ಫೋರ್ಬ್ಸ್ಗಂಜ್ನಲ್ಲಿ ಬಲವಂತವಾಗಿ ಇಳಿಸಲಾಯಿತು. ದಿ ನ್ಯೂಯಾರ್ಕ್ ಟೈಮ್ಸ್ ವರದಿಗಳ ಪ್ರಕಾರ, ಅಪಹರಣಕಾರರು ಪೈಲಟ್ಗೆ ಪಿಸ್ತೂಲ್ ತೋರಿಸಿ ಭಾರತಕ್ಕೆ ವಿಮಾನವನ್ನು ತಿರುಗಿಸುವಂತೆ ಒತ್ತಾಯಿಸಿದರು. ಯಾವುದೇ ಪ್ರಯಾಣಿಕರಿಗೆ ಹಾನಿಯಾಗಿಲ್ಲ, ಮತ್ತು ಮೂರು ಪೆಟ್ಟಿಗೆಗಳ ಹಣವನ್ನು ಇಳಿಸಿದ ನಂತರ, ವಿಮಾನವು ತನ್ನ ಪ್ರಯಾಣವನ್ನು ಮುಂದುವರಿಸಲು ಅನುಮತಿಸಲಾಯಿತು.
ಈ ಹಣವನ್ನು ಭಾರತದ ಕಡೆಯಿಂದ ಕಾಯುತ್ತಿದ್ದ, ನಂತರ ನಾಲ್ಕು ಬಾರಿ ನೇಪಾಳದ ಪ್ರಧಾನಿಯಾಗಿದ್ದ ಗಿರಿಜಾ ಪ್ರಸಾದ್ ಕೊಯಿರಾಲ ಅವರಿಗೆ ಹಸ್ತಾಂತರಿಸಲಾಯಿತು. ಈ ಹಣವನ್ನು ನೇಪಾಳಿ ಕಾಂಗ್ರೆಸ್ ರಾಜಪ್ರಭುತ್ವದ ವಿರುದ್ಧ ನಡೆಸಿದ ಸಶಸ್ತ್ರ ಹೋರಾಟಕ್ಕಾಗಿ ಶಸ್ತ್ರಾಸ್ತ್ರಗಳನ್ನು ಖರೀದಿಸಲು ಬಳಸಲಾಗಿದೆ ಎಂದು ವರದಿಯಾಗಿದೆ.
ಸುಶೀಲಾ ಕರ್ಕಿ ಅವರ ಮುಂದಿನ ಸವಾಲು
ಮಧ್ಯಂತರ ಸರ್ಕಾರದ ಮುಖ್ಯಸ್ಥೆಯಾಗಿ ಸುಶೀಲಾ ಕರ್ಕಿ ಅವರು ತಮ್ಮ ಕೆಲಸವನ್ನು ಪರಿಣಾಮಕಾರಿಯಾಗಿ ನಿರ್ವಹಿಸುವ ಕಠಿಣ ಕೆಲಸವನ್ನು ಎದುರಿಸಬೇಕಾಗುತ್ತದೆ. ಅವರ ಆಡಳಿತವು ಮಾಡಬೇಕಾದ ಮೊದಲ ಕೆಲಸವೆಂದರೆ ದೇಶವನ್ನು ಸ್ಥಿರಗೊಳಿಸುವುದಾಗಿದೆ. ಭದ್ರತಾ ಸಮಸ್ಯೆಗಳನ್ನು ಪರಿಹರಿಸುವುದು ಮತ್ತು ಸಂವಿಧಾನದ ಪ್ರಕಾರ ಆರು ತಿಂಗಳೊಳಗೆ ಹೊಸ ಚುನಾವಣೆಗಳನ್ನು ಆಯೋಜಿಸುವುದಾಗಿದೆ. (ಏಜೆನ್ಸೀಸ್)