ಬೆಂಕಿಯ ಜ್ವಾಲೆ ತಾಳಲಾರದೆ 4ನೇ ಮಹಡಿಯಿಂದ ಹಾರಿ ಭಾರತೀಯ ಮಹಿಳೆ ಸಾವು, ಪತಿ ಸ್ಥಿತಿ ಗಂಭೀರ! Gen Z protests

Gen Z protests
Published on

Gen Z protests : ಸರ್ಕಾರಿ ವಿರೋಧಿ ಪ್ರತಿಭಟನೆಗೆ ನೆರೆ ರಾಷ್ಟ್ರ ನೇಪಾಳ ದಿಕ್ಕೆಟ್ಟು ಹೋಗಿದೆ. ಪ್ರತಿಭಟನಾಕಾರರು ಬೆಂಕಿ ಹಚ್ಚಿದ ಹೋಟೆಲ್‌ನ ನಾಲ್ಕನೇ ಮಹಡಿಯಿಂದ ಹಾರಿದ ಭಾರತೀಯ ಮಹಿಳಾ ಯಾತ್ರಿಕರೊಬ್ಬರು ದುರಂತ ಸಾವಿಗೀಡಾಗಿದ್ದಾರೆ. ಅವರ ಪತಿ ಗಂಭೀರ ಗಾಯಗೊಂಡಿದ್ದು, ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ.

ಮೃತ ಮಹಿಳೆಯನ್ನು ರಾಜೇಶ್​ ಗೋಲಾ (55) ಎಂದು ಗುರುತಿಸಲಾಗಿದೆ. ಅವರೊಂದಿಗೆ ಕಟ್ಟಡದಿಂದ ಹಾರಿದ ಅವರ ಪತಿ ರಾಮ್‌ವೀರ್ ಸಿಂಗ್​ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ಸೆಪ್ಟೆಂಬರ್ 7 ರಂದು ರಾಜೇಶ್ ಗೋಲಾ ಮತ್ತು ರಾಮ್‌ವೀರ್ ಸಿಂಗ್ ಅವರು ನೇಪಾಳ ರಾಜಧಾನಿ ಕಾಠ್ಮಂಡುವಿನ ಪ್ರಸಿದ್ಧ ಪಶುಪತಿನಾಥ ದೇವಾಲಯಕ್ಕೆ ಭೇಟಿ ನೀಡಿದ್ದರು. ಆರಂಭದಲ್ಲಿ ಶಾಂತಿಯುತವಾಗಿದ್ದ 'ಜೆನ್​​-ಝಡ್​' ಪ್ರತಿಭಟನಾಕಾರರ ಪ್ರತಿಭಟನೆ ಸೆಪ್ಟೆಂಬರ್ 9 ರಂದು ಹಿಂಸಾತ್ಮಕ ರೂಪಕ್ಕೆ ತಿರುಗಿತು. ಈ ವೇಳೆ ರಾಜೇಶ್​ ದಂಪತಿ ಪಂಚತಾರಾ ಹೋಟೆಲ್‌ನಲ್ಲಿ ತಂಗಿದ್ದರು.

ಪ್ರತಿಭಟನಾಕಾರರು ಹೋಟೆಲ್‌ಗೆ ಬೆಂಕಿ ಹಚ್ಚಿದಾಗ ದಂಪತಿ ನಾಲ್ಕನೇ ಮಹಡಿಯಲ್ಲಿ ಸಿಕ್ಕಿಹಾಕಿಕೊಂಡಿದ್ದರು. ಬೇರೆ ದಾರಿಯಿಲ್ಲದೆ, ಅವರು ತಪ್ಪಿಸಿಕೊಳ್ಳಲು ಕಿಟಕಿಯಿಂದ ಹೊರಗೆ ಹಾರಿದರು. ಇದೇ ವೇಳೆ ಬೆಂಕಿಯಿಂದ ಪಾರಾದವರಿಗೆ ಸಹಾಯ ಮಾಡಲು ರಕ್ಷಣಾ ಕಾರ್ಯಕರ್ತರು ಹೋಟೆಲ್ ಕೆಳಗೆ ಹಾಸಿಗೆಗಳನ್ನು ಹರಡಿದ್ದರು ಆದರೆ, ರಾಜೇಶ್ ಗೋಲಾ ಹಾಸಿಗೆಯಿಂದ ಹೊರಗೆ ಬಿದ್ದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ರಾಜೇಶ್​ ಸಾವಿನ ಬಳಿಕ ನೇಪಾಳಿ ಅಧಿಕಾರಿಗಳು ಅವರ ಮಗ ವಿಶಾಲ್‌ಗೆ ದೂರವಾಣಿ ಮೂಲಕ ಮಾಹಿತಿ ನೀಡಿದರು. ರಾಜೇಶ್ ಗೋಲಾ ಅವರ ಮೃತದೇಹವನ್ನು ನಿನ್ನೆ (ಸೆ.12) ಉತ್ತರ ಪ್ರದೇಶದ ಗಾಜಿಯಾಬಾದ್‌ನ ಮಾಸ್ಟರ್ ಕಾಲನಿಯಲ್ಲಿರುವ ಅವರ ಮನೆಗೆ ಕೊಂಡೊಯ್ಯಲಾಗಿದೆ ಎಂದು ವರದಿಯಾಗಿದೆ.

ನೇಪಾಳದಲ್ಲಿ ಆಕ್ರೋಶ ಭುಗಿಲೆದ್ದಿದ್ದೇಕೆ?

ಪ್ರಸ್ತುತ, ನೇಪಾಳದಲ್ಲಿ ಭುಗಿಲೆದ್ದ ಪ್ರತಿಭಟನೆ ದೊಡ್ಡ ಹಿಂಸಾಚಾರಕ್ಕೆ ತಿರುಗಿ, 30ಕ್ಕೂ ಹೆಚ್ಚು ಮಂದಿಯ ಪ್ರಾಣವನ್ನು ಕಸಿದುಕೊಂಡಿರುವುದು ಗೊತ್ತೇ ಇದೆ. ಪ್ರತಿಭಟನಾಕಾರರು ನೇಪಾಳ ಪ್ರಧಾನಿ ಮತ್ತು ರಾಷ್ಟ್ರಪತಿ ಮನೆಗೆ ಬೆಂಕಿ ಹಚ್ಚಿದ್ದಲ್ಲದೇ, ಮಾಜಿ ಪ್ರಧಾನಿಗಳ ಪತ್ನಿಯ ಸಾವಿಗೆ ಕಾರಣರಾದರು. ಇದರೊಟ್ಟಿಗೆ ಹಣಕಾಸು ಸಚಿವರನ್ನು ನಡುರಸ್ತೆಯಲ್ಲೇ ಅಟ್ಟಾಡಿಸಿ ಥಳಿಸಿದ ದೃಶ್ಯಗಳು ಇಡೀ ಜಗತ್ತನ್ನು ಒಂದು ನಿಮಿಷ ಭಾರೀ ಅಚ್ಚರಿಗೆ ದೂಡಿತು ಎಂಬುದರಲ್ಲಿ ಅನುಮಾನವೇ ಬೇಡ. ಕೇವಲ ಸೋಷಿಯಲ್ ಮೀಡಿಯಾ ಬ್ಯಾನ್ ಮಾಡಿದ್ದಕ್ಕೆ ಕುಪಿತಗೊಳ್ಳದ ಯುವಜನತೆ, ರಾಜಕಾರಣಿ ಮಕ್ಕಳು ನಡೆಸುತ್ತಿರುವ ಲಕ್ಸುರಿ ಜೀವನಶೈಲಿ ಕಂಡು ಕೆರಳಿದ್ದಾರೆ ಎಂಬುದು ಸ್ಪಷ್ಟ.

ಜೆನ್​ಝಿ ಪ್ರತಿಭಟನೆಯ ತೀವ್ರತೆಗೆ ಪ್ರಧಾನಿ ಕೆ.ಪಿ. ಶರ್ಮ ಓಲಿ ತಮ್ಮ ಹುದ್ದೆಗೆ ರಾಜೀನಾಮೆ ಘೋಷಿಸುವ ಮೂಲಕ ಹಿಂದೆ ಸರಿದರು. ಇದು ಸರ್ಕಾರ ಪತನಕ್ಕೆ ಕಾರಣವಾಗಿದೆ. ಪ್ರತಿಭಟನಾಕಾರರ ಮೇಲೆ ಪೊಲೀಸರು ನಡೆಸಿದ ದಮನ ಕಾರ್ಯಾಚರಣೆಯಲ್ಲಿ ಕನಿಷ್ಠ 31 ಮಂದಿ ಸಾವನ್ನಪ್ಪಿದ್ದು, 1,000ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. ಯುವಜನತೆಯ ಆಕ್ರೋಶದ ಕಿಚ್ಚಿಗೆ ನೇಪಾಳದ ಸರ್ಕಾರಿ ಕಟ್ಟಡಗಳು, ಹಿರಿಯ ರಾಜಕಾರಣಿಗಳ ಖಾಸಗಿ ನಿವಾಸಗಳು ಮತ್ತು ಪ್ರವಾಸಿ ಕೇಂದ್ರಗಳಲ್ಲಿರುವ ಹೋಟೆಲ್‌ಗಳು ಸಹ ಬೆಂಕಿಗೆ ಆಹುತಿಯಾಗಿವೆ. ನೇಪಾಳದ ಸಂಸತ್ತು ಬೆಂಕಿಯಲ್ಲಿ ಸುಟ್ಟು ಕರಕಲಾಗಿದೆ. ಇಂದು, ದೇಶವು ಕಾರ್ಯನಿರ್ವಹಿಸುವ ಸರ್ಕಾರವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದು, ಕರ್ಫ್ಯೂ ವಿಧಿಸಲು ಮತ್ತು ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಲು ಸ್ವತಃ ಸೇನೆಯೇ ಮಧ್ಯಪ್ರವೇಶಿಸಿದೆ.

ಒಂದೆಡೆ ದೇಶದಲ್ಲಿ ಸಾಮಾನ್ಯ ನಿವಾಸಿಗಳು ನಿರುದ್ಯೋಗ, ಏರುತ್ತಿರುವ ಹಣದುಬ್ಬರ ಮತ್ತು ತೀವ್ರ ಬಡತನದಿಂದ ಬಳಲುತ್ತಿದ್ದರೆ, ಅತ್ತ ರಾಜಕಾರಣಿ ಮಕ್ಕಳು ಜಾಲತಾಣಗಳಲ್ಲಿ ತಾವು ಅನುಭವಿಸುತ್ತಿರುವ ಐಷಾರಾಮಿ ಜೀವನವನ್ನು ಎಲ್ಲರ ಎದುರು ಪ್ರದರ್ಶಿಸಿರುವುದು ಜೆನ್​ಝಿ ಕೆಂಗಣ್ಣಿಗೆ ಗುರಿಯಾಗಿದೆ. ರಾಜಕೀಯ ನಾಯಕರ ಮಕ್ಕಳು ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ದುಬಾರಿ ಮೌಲ್ಯದ ಕಾರುಗಳು, ಡಿಸೈನರ್ ಹ್ಯಾಂಡ್‌ಬ್ಯಾಗ್‌ಗಳು ಮತ್ತು ಐಷಾರಾಮಿ ಜೀವನವನ್ನು ನಡೆಸುತ್ತಿರುವುದು ಯುವಜನತೆಯ ಪ್ರತಿಭಟನೆಗೆ ಒಂದು ಬಲವಾದ ಕಾರಣವಾಗಿದೆ.

ಹಿಂಸಾಚಾರದ ಪ್ರತಿಭಟನೆ ಹತೋಟಿಗೆ ಬರದ ಹಿನ್ನೆಲೆ ಪ್ರಧಾನಿ ತಮ್ಮ ಪಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಇದಕ್ಕೂ ಮೊದಲು ಹಿರಿಯ ಮಂತ್ರಿಗಳು ರಾಜೀನಾಮೆ ಘೋಷಿಸಿ, ಸರ್ಕಾರದಿಂದ ಹೊರನಡೆದಿದ್ದರು. ಈ ಬೆಳವಣಿಗೆಯಿಂದ ಪ್ರಸ್ತುತ ನೇಪಾಳ ಪ್ರಧಾನಿ ಇಲ್ಲದ ದೇಶವಾಗಿ ಸಾಗುತ್ತಿರುವುದು ನಿಜಕ್ಕೂ ದುರಂತವೇ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net