Udit Raj | ನೇಪಾಳದ ಘಟನೆ ಭಾರತದಲ್ಲಿ ಸಂಭವಿಸಲು ಸಾಧ್ಯವಿಲ್ಲವೇ..?; ಮತ್ತೆ ವಿವಾದಾತ್ಮಕ ಹೇಳಿಕೆ ನೀಡಿದ ಕಾಂಗ್ರೆಸ್​ ನಾಯಕ ಉದಿತ್ ರಾಜ್!

Udit Raj
Published on

Udit Raj: ನೇಪಾಳದಲ್ಲಿನ ಇತ್ತೀಚಿನ ಪ್ರಕ್ಷುಬ್ಧತೆಯನ್ನು ಭಾರತಕ್ಕೆ ಹೋಲಿಸಿರುವ ಕಾಂಗ್ರೆಸ್ ನಾಯಕ ಉದಿತ್ ರಾಜ್, ಹೊಸ ವಿವಾದಕ್ಕೆ ನಾಂದಿ ಹಾಡಿದ್ದು, ಬಿಜೆಪಿಯಿಂದ ಟೀಕೆ ಎದುರಿಸುತ್ತಿದ್ದಾರೆ.

ತಮ್ಮ ಎಕ್ಸ್​​ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ರಾಜ್, ಜನರು ಭಾರತದ ಪರಿಸ್ಥಿತಿಯನ್ನು ನೇಪಾಳ, ಶ್ರೀಲಂಕಾ ಮತ್ತು ಬಾಂಗ್ಲಾದೇಶದಲ್ಲಿನ ಇತ್ತೀಚಿನ ಕ್ರಾಂತಿಗಳೊಂದಿಗೆ ಹೋಲಿಸುತ್ತಿದ್ದಾರೆ ಎಂದರು. ಹಣದುಬ್ಬರ, ನಿರುದ್ಯೋಗ ಸಮಸ್ಯೆ ಮತ್ತು ಭ್ರಷ್ಟಾಚಾರ ತಾಂಡವಾಡುತ್ತಿದೆ ಎಂದರು.

ನೇಪಾಳ, ಶ್ರೀಲಂಕಾ ಮತ್ತು ಬಾಂಗ್ಲಾದೇಶದಲ್ಲಿ ಸಾರ್ವಜನಿಕರು ಅಧಿಕಾರವನ್ನು ಹೇಗೆ ಬೇರು ಸಹಿತ ಕಿತ್ತುಹಾಕಿದ್ದಾರೆ ಎಂಬುದರ ಬಗ್ಗೆ ಜನರು ಚರ್ಚಿಸುತ್ತಿದ್ದಾರೆ. ಭಾರತದಲ್ಲಿ ಅಂತಹದ್ದು ಸಂಭವಿಸಲು ಸಾಧ್ಯವಿಲ್ಲವೇ? ಅನೇಕರು ಅದು ಸಂಭವಿಸುವ ಸಾಧ್ಯತೆಯ ಬಗ್ಗೆ ಮಾತನಾಡುತ್ತಿದ್ದು, ವಾಸ್ತವವಾಗಿ, ಸಂದರ್ಭಗಳು ಒಂದೇ ರೀತಿಯಲ್ಲಿವೆ ಎಂದರು. ಆದರೆ ನಮ್ಮ ಸಂವಿಧಾನವು ಹಾಗೆ ಮಾಡದಂತೆ ನಮ್ಮನ್ನು ತಡೆಯುತ್ತದೆ. ನಮ್ಮ ಪ್ರಜಾಪ್ರಭುತ್ವದ ಬೇರುಗಳು ತುಂಬಾ ಆಳವಾಗಿವೆ, ಅವುಗಳನ್ನು ಕಾಂಗ್ರೆಸ್ ನೆಟ್ಟಿದೆ ಎಂದು ಹೇಳಿದರು. ಬಿಜೆಪಿ ಸಂವಿಧಾನವನ್ನು ಬದಲಾಯಿಸಲು ಬಯಸಿತ್ತು, ಆದರೆ, ಸಾಂವಿಧಾನಿಕ ಸಂಸ್ಥೆಗಳು ಪ್ರಬಲವಾಗಿರುವುದರಿಂದ ಅವರ ತಂತ್ರಗಳು ವಿಫಲವಾಗುತ್ತಿವೆ, ಇಲ್ಲದಿದ್ದರೆ ನೇಪಾಳದಂತಹ ಪರಿಸ್ಥಿತಿ ಇಲ್ಲಿಯೂ ಸಂಭವಿಸುತ್ತಿತ್ತು. ನೇಪಾಳದಲ್ಲಿ ಸಾಮಾಜಿಕ ಜಾಲತಾಣಗಳ ಮೇಲಿನ ನಿಷೇಧ ಮತ್ತು ಭ್ರಷ್ಟಾಚಾರದ ಮೇಲಿನ ಕೋಪವು ರಾಷ್ಟ್ರವ್ಯಾಪಿ ಅವ್ಯವಸ್ಥೆಗೆ ಕಾರಣವಾದ ಹಿಂಸಾತ್ಮಕ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಅವರ ಈ ಹೇಳಿಕೆಗಳು ಹೊರಬಂದಿವೆ.

ಬಿಜೆಪಿ ಟೀಕೆ..

ಉದಿತ್ ರಾಜ್ ಅವರ ಹೇಳಿಕೆಗಳನ್ನು ಖಂಡಿಸಿರುವ ಬಿಜೆಪಿ ವಕ್ತಾರ ಸಿ.ಆರ್. ಕೇಶವನ್, ಇದು ಅಪಾಯಕಾರಿ ಎಂದು ಕರೆದಿದ್ದಾರೆ. ಕಾಂಗ್ರೆಸ್ ಅಶಾಂತಿಯನ್ನು ಪ್ರಚೋದಿಸುತ್ತಿದೆ ಎಂದು ಆರೋಪಿಸಿರುವ ಅವರು, ಈ ಹೇಳಿಕೆಗಳು 1975 ರಲ್ಲಿನ ತುರ್ತು ಪರಿಸ್ಥಿತಿ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತವೆ ಎಂದು ಹೇಳಿದರು. ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನಕ್ಕೆ ಹಿಂದಿನ ಮತ್ತು ಇಂದಿನ ಕಾಂಗ್ರೆಸ್ ನಾಯಕತ್ವವು ಯಾವಾಗಲೂ ದೊಡ್ಡ ಬೆದರಿಕೆಯಾಗಿದೆ. 1975 ರಲ್ಲಿ ಕಾಂಗ್ರೆಸ್ ಪಕ್ಷವು ನಮ್ಮ ಸಂವಿಧಾನವನ್ನು ಕೊಲೆ ಮಾಡಿ ನಮ್ಮ ಪ್ರಜಾಪ್ರಭುತ್ವವನ್ನು ಕಗ್ಗೊಲೆ ಮಾಡಿತು ಎಂದರು.(ಏಜೆನ್ಸೀಸ್​​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net