ಓಲಿಗೆ ಸ್ವಪಕ್ಷೀಯರ ತರಾಟೆ: ಭಾರತ ವಿರೋಧಿ ಹೇಳಿಕೆ ನೀಡಿದ್ದ ನೇಪಾಳ ಪ್ರಧಾನಿ

nepal pm
Published on

ಕಾಠ್ಮಂಡು: ನೇಪಾಳದ ಕೆಲವು ರಾಜಕಾರಣಿಗಳೊಂದಿಗೆ ಸೇರಿಕೊಂಡು ತಮ್ಮ ಸರ್ಕಾರ ಉರುಳಿಸಲು ಭಾರತ ಪ್ರಯತ್ನಿಸುತ್ತಿದೆ ಎಂಬ ಆರೋಪ ಸಾಬೀತು ಪಡಿಸಿ, ಇಲ್ಲವೇ ಕುರ್ಚಿ ಬಿಟ್ಟು ಕೆಳಗಿಳಿಯಿರಿ ಎಂದು ನೇಪಾಳ ಪ್ರಧಾನಿ ಕೆ.ಪಿ. ಶರ್ಮಾ ಓಲಿಗೆ ಸ್ವಪಕ್ಷ ನಾಯಕರೇ ಸವಾಲು ಹಾಕಿದ್ದಾರೆ.

ಆರೋಪ ಏನು?: ಇತ್ತೀಚೆಗೆ ನಡೆದಿದ್ದ ಸಮಾರಂಭವೊಂದರಲ್ಲಿ ಮಾತನಾಡಿದ ಓಲಿ, ನೇಪಾಳದ ಕೆಲವು ನಾಯಕರೊಂದಿಗೆ ಕೈಜೋಡಿಸಿ ತಮ್ಮ ಸರ್ಕಾರ ಉರುಳಿಸಲು ಭಾರತ ಪ್ರಯತ್ನಿಸುತ್ತಿದೆ ಎಂದು ಆಪಾದಿಸಿದ್ದರು. ಭಾರತದ ಕೆಲವು ಮಾಧ್ಯಮದಲ್ಲಿನ ಕೆಲವು ಬರಹಗಳು ಮತ್ತು ಕಾಠ್ಮಂಡುನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಚಟುವಟಿಕೆಗಳು ಇದಕ್ಕೆ ಸಾಕ್ಷಿಯಾಗಿವೆ ಎಂದಿದ್ದರು.

ನೇಪಾಳ ಕಮ್ಯುನಿಸ್ಟ್ ಪಕ್ಷದ (ಸಿಪಿಎನ್) ರಹಸ್ಯ ಸಭೆಯೊಂದರಲ್ಲಿ ಮಾಜಿ ಪ್ರಧಾನಿಗಳಾದ ಪುಷ್ಪ ಕಮಾಲ್ ದಹಾಲ್ ಪ್ರಚಂಡ, ಮಾಧವ ಕುಮಾರ್ ನೇಪಾಳ್ ಮತ್ತು ಜಲನಾಥ ಖನಾಲ್ ಹಾಗೂ ಮಾಜಿ ಉಪ ಪ್ರಧಾನಿ ಬಮದೇವ್ ಗೌತಮ್ ಮಾತನಾಡಿ, ಪ್ರತಿಯೊಂದು ಕ್ಷೇತ್ರದಲ್ಲಿ ವಿಫಲರಾಗಿರುವ ಓಲಿ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.

ಭಾರತ ವಿರೋಧಿ ಆರೋಪ ಸರಿಯಲ್ಲ: ಓಲಿ ಮಾಡಿರುವ ಭಾರತ ವಿರೋಧಿ ಆರೋಪ ಸರಿಯಲ್ಲ ಎಂದು ಪ್ರಚಂಡ ಅಭಿಪ್ರಾಯಪಟ್ಟರು. ಬೇಜವಾಬ್ದಾರಿ ಹೇಳಿಕೆಗೆ ಪುರಾವೆ ಒದಗಿಸಬೇಕು ಎಂದು ಆಗ್ರಹಿಸಿದರು. ಮಿತ್ರ-ದೇಶ ವಿರೋಧಿ ಹೇಳಿಕೆ ನೀಡಿದ್ದಕ್ಕಾಗಿ ಖನಾಲ್, ಮಾಧವ ಹಾಗೂ ಗೌತಮ್ ಕೂಡ ತಮ್ಮದೇ ಪಕ್ಷದ ಪ್ರಧಾನಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

ನರವಾಣೆ ಹೇಳಿಕೆಗೆ ಟೀಕೆ: ಈ ನಡುವೆ, ನೇಪಾಳದಲ್ಲಿ ನಡೆದಿರುವ ಭಾರತ-ವಿರೋಧಿ ಪ್ರತಿಭಟನೆಗಳಿಗೆ ಚೀನಾದ ಕುಮ್ಮಕ್ಕಿರಬಹುದು ಎಂದು ಭಾರತೀಯ ಭೂಸೇನಾ ಮುಖ್ಯಸ್ಥ ಎಂ.ಎಂ. ನರವಾಣೆ ಮಾಡಿರುವ ಆರೋಪಕ್ಕೆ ನೇಪಾಳದಲ್ಲಿರುವ ಚೀನಿ ರಾಯಭಾರಿ ಹೌ ಯಾಂಕಿ ಪ್ರತಿಭಟನೆ ಸೂಚಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net