

ಕಾನೂನು ಸುವ್ಯವಸ್ಥೆ ನೆಲೆಗೊಳ್ಳಲು ಹಲವು ನಿಟ್ಟಿನಲ್ಲಿ ಪ್ರಯತ್ನ ನಡೆಯುತ್ತಿವೆ ಎಂಬುದೇನೋ ನಿಜ. ಆದರೆ, ತಪ್ಪಿತಸ್ಥರು ಶಿಕ್ಷೆಯಿಂದ ತಪ್ಪಿಸಿಕೊಂಡರೆ ಏನು ಗತಿ? ತಪು್ಪ ಮಾಡಿದವರು ಶಿಕ್ಷೆ ಅನುಭವಿಸಲೇ ಬೇಕು ಎಂಬುದು ಕಾನೂನಿನ ಆಶಯವೂ ಹೌದು. ಆದರೆ, ಈ ನಿಟ್ಟಿನಲ್ಲಿ ಕಳವಳಕಾರಿಯಾದ ಬೆಳವಣಿಗೆ ಬೆಳಕಿಗೆ ಬಂದಿದ್ದು, ಸುಧಾರಣೆ ನಿಟ್ಟಿನಲ್ಲಿ ಸೂಕ್ತ ಕ್ರಮಗಳು ಅಗತ್ಯ. ಪೊಲೀಸರ ತನಿಖಾ ಲೋಪದಿಂದಾಗಿ ಕೋರ್ಟ್ ವಿಚಾರಣೆಯಲ್ಲಿ ಖುಲಾಸೆಯಾಗುತ್ತಿರುವ ಕ್ರಿಮಿನಲ್ ಅಪರಾಧ ಪ್ರಕರಣಗಳ ಸಂಖ್ಯೆ ಜಾಸ್ತಿಯಾಗುತ್ತಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸ್ ಇಲಾಖೆ, ಇನ್ನುಮುಂದೆ ನ್ಯಾಯಾಲಯಗಳಲ್ಲಿ ಖುಲಾಸೆಯಾಗುವ ಪ್ರಕರಣಗಳ ತನಿಖೆಯಲ್ಲಿ ಕರ್ತವ್ಯಲೋಪ ಕಂಡುಬಂದರೆ ಸಂಬಂಧಿತ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯನ್ನೇ ಹೊಣೆಯನ್ನಾಗಿಸಿ ಅವರ ವಿರುದ್ಧ ಕಾನೂನಿನ ಅನ್ವಯ ಶಿಸ್ತುಕ್ರಮ ಜರುಗಿಸಲು ಆದೇಶಿಸಿದೆ.
ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾದ ಅಪರಾಧ ಮೊಕದ್ದಮೆಗಳಲ್ಲಿ ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ಅಂತಿಮ ವರದಿಗಳನ್ನು ಸಲ್ಲಿಸಿದ ನಂತರ ಕೋರ್ಟ್ ವಿಚಾರಣೆಯಲ್ಲಿ ಪ್ರಕರಣಗಳು ಖುಲಾಸೆಯಾಗುತ್ತಿರುವುದು ಗಮನಾರ್ಹ. ಕೋರ್ಟ್ ಹೊರಡಿಸುತ್ತಿರುವ ಅನೇಕ ತೀರ್ಪಗಳಲ್ಲಿ ವಿವಿಧ ವೃಂದದ ಅಧಿಕಾರಿ ಮತ್ತು ಸಿಬ್ಬಂದಿ ಸಮರ್ಪಕವಾಗಿ ತನಿಖೆ ಮಾಡದಿರುವುದರ ಬಗ್ಗೆ ಅಥವಾ ತನಿಖೆಯಲ್ಲಿನ ಲೋಪದೋಷಗಳ ಬಗ್ಗೆ ಉಲ್ಲೇಖಿಸಲಾಗಿರುತ್ತದೆ. ಹಾಗಾಗಿ, ತಡವಾಗಿಯಾದರೂ ಪೊಲೀಸ್ ಇಲಾಖೆ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವುದು ಸಮಾಧಾನಕರ. ಕೋರ್ಟ್ನಲ್ಲಿ ಖುಲಾಸೆಯಾದ ಪ್ರಕರಣಗಳ ಪರಿಶೀಲನೆ ನಡೆಸಿ ತಪ್ಪಿತಸ್ಥ ತನಿಖಾಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಿ ‘ಖುಲಾಸೆ ಪ್ರಕರಣಗಳ ಪರಾಮರ್ಶೆ ಸಮಿತಿ’ ಕೊಡುವ ವರದಿಯನ್ನು ಆಧರಿಸಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಶಿಸ್ತು ಪ್ರಾಧಿಕಾರಗಳಿಗೆ ಇಲಾಖೆ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಈ ನಿಟ್ಟಿನಲ್ಲಿ ರಾಜ್ಯದ ಪ್ರತಿ ವಲಯ ಮತ್ತು ನಗರ ಕಮೀಷನರೇಟ್ಗಳಲ್ಲಿ ಹಾಗೂ ಜಿಲ್ಲಾ ಘಟಕಗಳಲ್ಲಿ ಸರ್ಕಾರಿ ಅಭಿಯೋಜಕರುಗಳನ್ನು ಒಳಗೊಂಡ ಸಮಿತಿಗಳನ್ನು ರಚನೆ ಮಾಡಲಾಗಿದೆ.
ತನಿಖಾಲೋಪಕ್ಕೆ ಕಾರಣಗಳೇನು ಎಂಬುದರ ಬಗ್ಗೆಯೂ ಪರಾಮರ್ಶೆ ಮಾಡಬೇಕಿದೆ. ಸಮರ್ಪಕ ತನಿಖೆ ನಡೆಸಲು ಪೊಲೀಸ್ ಸಿಬ್ಬಂದಿಗೆ ಯಾವುದಾದರೂ ಒತ್ತಡ ಅಡ್ಡಿಯಾಗುತ್ತಿದೆಯೇ ಅಥವಾ ಮೂಲಸೌಕರ್ಯ, ತಂತ್ರಜ್ಞಾನದ ಕೊರತೆಯೇ ಇಲ್ಲವೆ ಹಿರಿಯ ಅಧಿಕಾರಿಗಳ ಅಸಹಕಾರವೇ ಅಥವಾ ಸಿಬ್ಬಂದಿಯ ನಿರ್ಲಕ್ಷ್ಯವೇ ಎಂಬುದರ ಬಗ್ಗೆ ಪರಿಶೀಲನೆ ನಡೆಸಬೇಕಿದೆ. ತಪ್ಪಿತಸ್ಥರನ್ನು ಪತ್ತೆ ಮಾಡಿ, ಅವರನ್ನು ಕಾನೂನಿನ ಕಟಕಟೆಗೆ ತಂದು ನಿಲ್ಲಿಸಬೇಕಾದ ಪೊಲೀಸ್ ಇಲಾಖೆಯೇ ತಪು್ಪ ಮಾಡಿದರೆ ಅದರಿಂದಾಗುವ ಹಾನಿಯನ್ನು ಅಂದಾಜಿಸಲು ಸಾಧ್ಯವಿಲ್ಲ. ಸಾಮಾಜಿಕ ಸ್ವಾಸ್ಥ್ಯಕ್ಕಾಗಿ ಕಾನೂನು ಸುವ್ಯವಸ್ಥೆ ನೆಲೆಗೊಳ್ಳಬೇಕು. ಇದಕ್ಕೆ ಅಡ್ಡಿಯಾಗುವ ಹಾಗೂ ಅಪರಾಧಿಕ ಚಟುವಟಿಕೆಯಲ್ಲಿ ಪಾಲ್ಗೊಂಡು ತಪ್ಪಿತಸ್ಥರಾದವರು ವ್ಯವಸ್ಥೆಯ ಲೋಪದಿಂದ, ಅಸಮರ್ಪಕ ತನಿಖೆಯ ಕಾರಣ ಶಿಕ್ಷೆಯಿಂದ ಬಚಾವಾಗಬಾರದು. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯ ಮೇಲೆ ದೊಡ್ಡ ಹೊಣೆಗಾರಿಕೆ ಇದ್ದು, ಮುಂಬರುವ ದಿನಗಳಲ್ಲಾದರೂ ಅಪಸವ್ಯಗಳನ್ನು ನಿವಾರಿಸಿ ತನಿಖಾ ವ್ಯವಸ್ಥೆಯನ್ನು ಬಲಪಡಿಸಲಿ.