

ನವದೆಹಲಿ: ಸಾರ್ವಜನಿಕ ವಲಯದ ಬ್ಯಾಂಕುಗಳ ಖಾಸಗೀಕರಣ ವಿರೋಧಿಸಿ ಎಸ್ಬಿಐ ನೇತೃತ್ವದ ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯುನಿಯನ್ಸ್ ಕರೆ ನೀಡಿರುವ ಬ್ಯಾಂಕ್ ಮುಷ್ಕರಕ್ಕೆ ರಾಷ್ಟ್ರವ್ಯಾಪಿ ಉತ್ತಮ ಬೆಂಬಲ ವ್ಯಕ್ತವಾಗಿದೆ. ಮುಷ್ಕರದ ಎರಡನೇ ದಿನವಾದ ಇಂದು ಕೂಡ ಅನೇಕ ಬ್ಯಾಂಕುಗಳು ವಹಿವಾಟು ನಡೆಸಲಿಲ್ಲ.
ಮುಷ್ಕರಕ್ಕೆ ಕರೆ ನೀಡಿರುವ ಬ್ಯಾಂಕ್ ಸಂಘಟನೆಗಳು, ಕೇಂದ್ರ ಸರ್ಕಾರ ನಮ್ಮ ಬೇಡಿಕೆಗಳಿಗೆ ಸ್ಪಂದಿಸದಿದ್ದರೇ ದೆಹಲಿಯಲ್ಲಿ ರೈತರು ನಿರಂತರವಾಗಿ ನಡೆಸುತ್ತಿರುವ ಪ್ರತಿಭಟನೆಯಂತೇ ನಾವು ಕೂಡ ಪ್ರತಿಭಟನೆಗೆ ಕೂರಬೇಕಾಗುತ್ತದೆ ಎಂದು ಎಚ್ಚರಿಸಿವೆ.
ಸೋಮವಾರದ ಮುಷ್ಕರದಲ್ಲಿ ಸುಮಾರು 10 ಲಕ್ಷ ಸಿಬ್ಬಂದಿ ಭಾಗಿಯಾಗಿದ್ದರು. ಈ ವೇಳೆ ಸಾರ್ವಜನಿಕವಲಯದ ಬ್ಯಾಂಕುಗಳನ್ನು ಉಳಿಸಿ, ಸಾಮಾಜಿಕ ಬ್ಯಾಂಕಿಗ್ ವ್ಯವಸ್ಥೆ ಉಳಿಸಿ, ನಾಗರಿಕರ ಉಳಿತಾಯ ಠೇವಣಿ ರಕ್ಷಿಸಿ ಎಂದು ಸ್ಲೋಗನ್ಗಳನ್ನು ಮುಷ್ಕರನಿರತರು ಪ್ರದರ್ಶಿಸಿದ್ದಾರೆ. ಪ್ರಮುಖ ಬ್ಯಾಂಕುಗಳ ಈ ಎರಡು ದಿನದ ಮುಷ್ಕರದಿಂದ ಗ್ರಾಹಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
ಸರ್ಕಾರಕ್ಕೆ ಆದಾಯದ ಹರಿವು ಹೆಚ್ಚಿಸಲು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ಸಲದ ಬಜೆಟ್ನಲ್ಲಿ ಖಾಸಗೀಕರಣವನ್ನು ಬಲವಾಗಿ ಪ್ರತಿಪಾದಿಸಿದ್ದಾರೆ. ಈ ದಿಸೆಯಲ್ಲಿ ಮತ್ತಷ್ಟು ಬ್ಯಾಂಕುಗಳನ್ನು ಹಾಗೂ ಒಂದು ಸರ್ಕಾರಿ ಸ್ವಾಮ್ಯದ ವಿಮಾ ಕಂಪನಿಯನ್ನು ಖಾಸಗೀಕರಣಗೊಳಿಸುವ ಮಾತನ್ನಾಡಿದ್ದಾರೆ. ಇದನ್ನು ಖಂಡಿಸಿ ಬ್ಯಾಂಕುಗಳು ದೇಶ ವ್ಯಾಪಿ ಬ್ಯಾಂಕ್ ಮುಷ್ಕರಕ್ಕೆ ಕರೆ ನೀಡಿವೆ. (ಏಜೇನ್ಸಿಸ್)