

ನವದೆಹಲಿ: ದೇಶದ ಮೊಟ್ಟಮೊದಲ ರ‍್ಯಾಪಿಡ್ ಎಕ್ಸ್ ರೈಲು ಸಂಚಾರ ಅ. 20ರಂದು ಆರಂಭವಾಗಲಿದೆ. ವಂದೇ ಭಾರತ್ ರೈಲಿನ ವೇಗಕ್ಕೆ ಸರಿಸಮನಾಗಿ ಸಂಚರಿಸುವ ಮತ್ತೊಂದು ಸೆಮಿ ಸ್ಪೀಡ್ ರೈಲು ಇದಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಲಿದ್ದಾರೆ.
ದೆಹಲಿ- ಗಾಜಿಯಾಬಾದ್- ಮೀರತ್ ರೀಜನಲ್ ರ‍್ಯಾಪಿಡ್ ಟ್ರಾನ್ಸಿಟ್ ಸಿಸ್ಟಮ್ (ಆರ್ಆರ್ಟಿಎಸ್- ಪ್ರಾದೇಶಿಕ ತ್ವರಿತ ಸಂಚಾರ ವ್ಯವಸ್ಥೆ) ಯೋಜನೆಯಡಿ ರ‍್ಯಾಪಿಡ್ ಎಕ್ಸ್ ರೈಲಿನ ಮೊದಲ ಪ್ರಯಾಣವು ಅಕ್ಟೋಬರ್ 20 ರಂದು ಸಾಹಿಬಾಬಾದ್ನಿಂದ ದುಹೈ ಡಿಪೋವರೆಗೆ ನಡೆಯಲಿದೆ. ಆರ್ಆರ್ಟಿಎಸ್ ಕಾರಿಡಾರ್ನ ಒಟ್ಟು ಉದ್ದವು ರಾಜಧಾನಿ ದೆಹಲಿಯಿಂದ ಉತ್ತರಪ್ರದೇಶದ ರಾಜ್ಯದ ಮೀರತ್ವರೆಗೆ 82 ಕಿ.ಮೀ. ಆಗಿದೆ. ಈ ಸಂಪೂರ್ಣ ರೈಲು ಮಾರ್ಗವನ್ನು 2025ರ ಹೊತ್ತಿಗೆ ಪೂರ್ಣಗೊಳಿಸಲು ಗುರಿ ಹಾಕಿಕೊಳ್ಳಲಾಗಿದೆ. ಈ ಕಾರಿಡಾರ್ ಪೈಕಿ 17 ಕಿಮೀ ಉದ್ದದ ಆದ್ಯತೆಯ ವಿಭಾಗವಾದ ಸಾಹಿಬಾಬಾದ್ನಿಂದ ದುಹೈ ಡಿಪೋವರೆಗೆ ರೈಲು ಸಂಚಾರ ಈಗ ಆರಂಭವಾಗಲಿದೆ. ಗಾಜಿಯಾ ಬಾದ್, ಗುಲ್ಧರ್ ಮತ್ತು ದುಹೈ ನಿಲ್ದಾಣಗಳ ಮೂಲಕ ಈಗ ರೈಲು ಸಾಗುತ್ತದೆ. ಉದ್ಘಾಟನೆಯ ಮರುದಿನವಾದ ಅ. 21 ರಿಂದ ಸಾರ್ವಜನಿಕರ ಸಂಚಾರಕ್ಕೆ ಮುಕ್ತಗೊಳಿಸಲಾಗುತ್ತಿದೆ.
ಈ ರೈಲು ಪ್ರತಿ ಗಂಟೆಗೆ ಸರಾಸರಿ 100 ಕಿ.ಮೀ. ವೇಗದಲ್ಲಿ ಸಂಚರಿಸಲಿದೆ. ರ‍್ಯಾಪಿಡ್ ಎಕ್ಸ್ ರೈಲಿನ ಯೋಜನೆಯನ್ನು ರಾಷ್ಟ್ರೀಯ ರಾಜಧಾನಿ ಪ್ರಾದೇಶಿಕ ಸಾರಿಗೆ ಸಂಸ್ಥೆ (ಎನ್ಸಿಆರ್ಟಿಸಿ) ಜಾರಿಗೊಳಿಸುತ್ತಿದೆ.
ದರ: ಸ್ಟ್ಯಾಂಡರ್ಡ್ ಕೋಚ್ಗಳಿಗೆ ಕನಿಷ್ಠ ದರ 20 ರೂ. ಮತ್ತು ಗರಿಷ್ಠ 50 ರೂ. ಪ್ರೀಮಿಯಂ ಕೋಚ್ಗಳಿಗೆ ಕನಿಷ್ಠ ದರ 40 ರೂ. ಮತ್ತು ಗರಿಷ್ಠ 100 ರೂ. ಈ ರೈಲುಗಳು ಬೆಳಗ್ಗೆ 6 ರಿಂದ ರಾತ್ರಿ 11 ರವರೆಗೆ ಕಾರ್ಯನಿರ್ವಹಿಸಲಿವೆ. ಪ್ರತಿ 15 ನಿಮಿಷಗಳಿಗೆ ಒಂದು ರೈಲು ಸಂಚರಿಸಲಿದೆ.