ನವದೆಹಲಿ: ಇನ್ನೇನು ಚಳಿಗಾಲ ಶುರುವಾಯಿತು ಎನ್ನುವಷ್ಟರಲ್ಲೇ ರಾಷ್ಟ್ರ ರಾಜಧಾನಿಯಲ್ಲಿ ವಿಪರೀತ ಹೆಚ್ಚಾಗುತ್ತಿರುವ ವಾಯು ಮಾಲಿನ್ಯ ಮತ್ತು ದಟ್ಟ ಹೊಗೆಯನ್ನು ತಡೆಯಲು ದೆಹಲಿ ಸರ್ಕಾರ ಹೊಸ ಕಟ್ಟುನಿಟ್ಟಿನ ನಿಯಮಗಳನ್ನು ಇಂದಿನಿಂದಲೇ ಜಾರಿಗೊಳಿಸಿದೆ. ಸರ್ಕಾರಿ ಆದೇಶದಂತೆ ನವೆಂಬರ್ 1ರಿಂದ 2027ರ ಜನವರಿ 31ರ ವರೆಗೆ ಈ ಟಫ್ ರೂಲ್ಸ್ ಜಾರಿಯಲ್ಲಿರಲಿವೆ.
ನಿಯಮ ಉಲ್ಲಂಘಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಆಟೋಮ್ಯಾಟಿಕ್ ನಂಬರ್ ಪ್ಲೇಟ್ ರೆಕಗ್ನಿಷನ್ (ANPR) ಕ್ಯಾಮರಾಗಳು, ವಿಶೇಷ ತನಿಖಾ ಪಡೆ ಹಾಗೂ ಕೃತಕ ಬುದ್ಧಿಮತ್ತೆ (ಎಐ) ಆಧಾರಿತ 'ಸಂಯೋಜಿತ ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್' (ICCC) ಮೂಲಕ ಸಂಚಾರಿ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದು, ನೇರವಾಗಿ ಇ-ಚಲನ್ ಕೊಡಲಾಗುವುದು ಎಂದು ಸಿಎಂ ರೇಖಾ ಗುಪ್ತಾ ತಿಳಿಸಿದ್ದಾರೆ.
1. ಹಳೆಯ ವಾಹನಗಳ ಪ್ರವೇಶಕ್ಕೆ ಸಂಪೂರ್ಣ ನಿಷೇಧ
ದೆಹಲಿಯ ಹೊರಗಿನಿಂದ ಆಗಮಿಸುವ ಬಿಎಸ್-6 (BS-VI) ಹೊರಸೂಸುವಿಕೆ ಮಾನದಂಡವನ್ನು ಹೊಂದಿಲ್ಲದ ವಾಹನಗಳ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಇದರಿಂದ ನೋಯ್ಡಾ, ಗುರುಗ್ರಾಮ್, ಫರೀದಾಬಾದ್ ಮತ್ತು ಘಾಜಿಯಾಬಾದ್‌ಗಳಿಂದ ದೆಹಲಿಗೆ ಪ್ರವೇಶಿಸುವ ಸುಮಾರು 10 ಲಕ್ಷಕ್ಕೂ ಅಧಿಕ ಹಳೆಯ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳ ಮೇಲೆ ಪರಿಣಾಮ ಬೀರಲಿದೆ.
ವಿದ್ಯುತ್ ಚಾಲಿತ (ಇವಿ), ಸಿಎನ್‌ಜಿ (ಸಿಎನ್‌ಜಿ) ವಾಹನಗಳು ಹಾಗೂ ಆಂಬುಲೆನ್ಸ್, ಅಗ್ನಿಶಾಮಕ ದಳದಂತಹ ತುರ್ತು ಸೇವೆಗಳಿಗೆ ವಿನಾಯಿತಿ ನೀಡಲಾಗಿದೆ ಎಂಬುದು ಗಮನಾರ್ಹ.
ನವೆಂಬರ್ 1ರಿಂದ ಜನವರಿ 31ರ ವರೆಗೆ ಧೂಳು ಉತ್ಪತ್ತಿ ಮಾಡುವ ಎಲ್ಲ ರೀತಿಯ ಒರಾಂಗಣ ಕಟ್ಟಡ ನಿರ್ಮಾಣ ಮತ್ತು ಬೀಳಿಸುವ ಕೆಲಸಗಳನ್ನು ನಿಷೇಧಿಸಲಾಗಿದೆ. ಆದಾಗ್ಯೂ, ಸರ್ಕಾರದ ಪ್ರಮುಖ ಸಾರ್ವಜನಿಕ ಮೂಲಸೌಕರ್ಯ ಯೋಜನೆಗಳಿಗೆ ಮತ್ತು ಒಳಾಂಗಣದ ಪೇಂಟಿಂಗ್, ಪ್ಲಂಬಿಂಗ್ ಮತ್ತು ಎಲೆಕ್ಟ್ರಿಕಲ್ ಕೆಲಸಗಳಿಗೆ ಷರತ್ತುಬದ್ಧ ಅನುಮತಿ ನೀಡಲಾಗಿದೆ.
ದೆಹಲಿಯ ಸರ್ಕಾರಿ ಮತ್ತು ಖಾಸಗಿ ಕಚೇರಿಗಳಲ್ಲಿ ಶೇ.50ರಷ್ಟು ಸಿಬ್ಬಂದಿ ಮಾತ್ರ ಕಚೇರಿಗೆ ಹಾಜರಾಗಲು ಸೂಚಿಸಲಾಗಿದ್ದು, ಉಳಿದ 50ರಷ್ಟು ನೌಕರರಿಗೆ ಮನೆಯಿಂದಲೇ ಕೆಲಸ ಮಾಡುವಂತೆ ಆದೇಶಿಸಲಾಗಿದೆ. ತುರ್ತು ಸೇವೆ ಒದಗಿಸುವ ಸಂಸ್ಥೆಗಳಿಗೆ ಇದರಿಂದ ವಿನಾಯಿತಿ ನೀಡಲಾಗಿದೆ.
ಸಂಚಾರ ದಟ್ಟಣೆಯನ್ನು ಆದಷ್ಟು ತಗ್ಗಿಸಲು ವಿವಿಧ ಕಚೇರಿಗಳ ವೇಳಾಪಟ್ಟಿಯನ್ನು ಬದಲಾಯಿಸಲಾಗಿದೆ. ದೆಹಲಿ ಮಹಾನಗರ ಪಾಲಿಕೆ (ಎಂಸಿಡಿ) ಕಚೇರಿಗಳು ಬೆಳಗ್ಗೆ 8.30ರಿಂದ ಸಾಯಂಕಾಲ 5.00 ಗಂಟೆಯವರೆಗೆ ಮತ್ತು ದೆಹಲಿ ಸರ್ಕಾರಿ ಕಚೇರಿಗಳು ಬೆಳಗ್ಗೆ 10.00ರಿಂದ ಸಾಯಂಕಾಲ 6.30 ರವರೆಗೆ ಕಾರ್ಯನಿರ್ವಹಿಸಲಿವೆ. ಖಾಸಗಿ ವಾಹನಗಳ ಬಳಕೆಯನ್ನು ಕಡಿತಗೊಳಿಸಲು ಸಾರ್ವಜನಿಕ ಪಾರ್ಕಿಂಗ್ ಶುಲ್ಕವನ್ನು ದುಪ್ಪಟ್ಟು ಮಾಡಲಾಗಿದೆ. ದೆಹಲಿ ಮೆಟ್ರೋ ಪಾರ್ಕಿಂಗ್ ಬಿಟ್ಟು ಉಳಿದೆಲ್ಲ ಕಡೆ ಇದು ಅನ್ವಯ ಎನ್ನಲಾಗಿದೆ.
ದೆಹಲಿಯ ಪೆಟ್ರೋಲ್ ಪಂಪ್‌ಗಳಲ್ಲಿ 'ನೋ ಪಿಯುಸಿ, ನೋ ಫ್ಯೂಯಲ್' ನೀತಿಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿದೆ. ದೆಹಲಿಯ 500 ಪೆಟ್ರೋಲ್ ಬಂಕ್ಗಳಲ್ಲಿ ANPR ಕ್ಯಾಮರಾಗಳನ್ನು ಅಳವಡಿಸಲಾಗಿದ್ದು, ವಾಹನದ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (PUC) ಅಸಿಂಧುವಾಗಿದ್ದರೆ ಪೆಟ್ರೋಲ್, ಡೀಸೆಲ್ ಅಥವಾ ಸಿಎನ್‌ಜಿ ನೀಡುವುದಿಲ್ಲ. ಇದು ಕಟ್ಟುನಿಟ್ಟಿನಿಂದ ಪಾಲನೆ ಆಗುವ ಹಿನ್ನೆಲೆ ಮಿಸ್ ಮಾಡಿದರೆ, ಇಂಧನ ಸಿಗುವುದಿಲ್ಲ.
ಅಕ್ಕ-ಪಕ್ಕದ ನಗರ, ರಾಜ್ಯಗಳಿಂದ ದೆಹಲಿಗೆ ಪ್ರಯಾಣಿಸುವ ಸಾರ್ವಜನಿಕರು ತಮ್ಮ ವಾಹನದ ಹೊರಸೂಸುವಿಕೆ ಮಾನದಂಡಗಳು ಮತ್ತು ಪಿಯುಸಿ ಪ್ರಮಾಣಪತ್ರವನ್ನು ಪರಿಶೀಲಿಸಿಕೊಂಡು ಪ್ರಯಾಣಿಸುವಂತೆ ಹಾಗೂ ದೆಹಲಿ ಸಂಚಾರ ಪೊಲೀಸರ ಅಧಿಕೃತ ಮಾಹಿತಿಯನ್ನು ಗಮನಿಸುವಂತೆ ದೆಹಲಿ ಸರ್ಕಾರ ವಿಶೇಷವಾಗಿ ಮನವಿ ಮಾಡಿದೆ,(ಏಜೆನ್ಸೀಸ್).