

Water Bottle: ಮಾನವ ಮತ್ತು ಹಲವು ಜೀವ ರಾಶಿಗಳಿಗೆ ಭೂಮಿಯ ಮೇಲೆ ಬದುಕುಳಿಯಲು ನೀರು ಎಷ್ಟು ಅತ್ಯಗತ್ಯ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ. ಗಾಳಿ ನಂತರ ಜೀವಿಸಲು ಅತಿ ಮುಖ್ಯವಾದ ಅಂಶ ಎಂದರೆ ಅದು ನೀರು. ಸಾಮಾನ್ಯವಾಗಿ, ಶುದ್ಧ ನೀರಿಗೆ ಯಾವುದೇ ನಿರ್ದಿಷ್ಟ ಮುಕ್ತಾಯ ದಿನಾಂಕ ಅಂದರೆ ಎಕ್ಸ್ಪೈರಿ ಡೇಟ್ ಇರುವುದಿಲ್ಲ. ಅಸಲಿಗೆ, ಇದನ್ನು ಎಷ್ಟು ವರ್ಷಗಳ ಕಾಲ ಸಂಗ್ರಹಿಸಿಟ್ಟರೂ, ಹಾಳಾಗದೆ ಹಾಗೆಯೇ ಉಳಿಯುತ್ತದೆ. ಹೀಗಿರುವಾಗ, ಕುಡಿಯುವ ನೀರಿನ ಬಾಟಲಿ ಮೇಲೆ ಹಾಕುವ ದಿನಾಂಕದ ಲೇಬಲ್ ಏನು? ಯಾವ ವಿಷಯವನ್ನು ಜನರಿಗೆ ಹೇಳುತ್ತಿದೆ? ಎಂಬ ಕೌತುಕದ ಪ್ರಶ್ನೆಗೆ ನಾವಿಲ್ಲಿ ಉತ್ತರ ಹುಡುಕೋಣ.
H2O (ನೀರು) ಅತ್ಯಂತ ಸ್ಥಿರ ಹಾಗೂ ಸಂಯುಕ್ತ. ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳಂತಹ ಸೂಕ್ಷ್ಮಜೀವಿಗಳ ಬೆಳವಣಿಗೆಗೆ ಅಗತ್ಯವಾದ ಸಾವಯವ ಪದಾರ್ಥಗಳು ಶುದ್ಧ ನೀರಿನಲ್ಲಿ ಇರುವುದಿಲ್ಲ. ಹೀಗಾಗಿ, ಇದರಲ್ಲಿ ಯಾವುದೇ ಕೊಳೆಯುವ ಪ್ರಕ್ರಿಯೆ ನಡೆಯುವುದಿಲ್ಲ. ಆದರೆ, ಅದೇ ನೀರನ್ನು ನಾವು ಪಾತ್ರೆಯಲ್ಲಿ ಅಥವಾ ಬಾಟಲಿಯಲ್ಲಿ ಸಂಗ್ರಹಿಸಿಟ್ಟಾಗ, ಗಾಳಿಯಲ್ಲಿರುವ ಬ್ಯಾಕ್ಟೀರಿಯಾಗಳು, ವೈರಸ್‌ಗಳು ಅಥವಾ ಧೂಳಿನ ಕಣಗಳು ಅದರೊಳಗೆ ಸೇರುವ ಸಾಧ್ಯತೆ ಹೆಚ್ಚು. ಕಾಲಕ್ರಮೇಣ, ಇವು ನೀರನ್ನು ಕಲುಷಿತಗೊಳಿಸಿ, ಕುಡಿಯಲು ಯೋಗ್ಯವಲ್ಲದಂತೆ ಮಾಡಿಡುತ್ತದೆ.
ಶುದ್ಧ ನೀರು ಹಾಳಾಗುವುದಿಲ್ಲ ಎಂದಾದರೆ, ಪ್ಯಾಕ್ ಮಾಡಿದ ಕುಡಿಯುವ ನೀರಿನ ಬಾಟಲಿಗಳ ಮೇಲೆ ಏಕೆ ಮುಕ್ತಾಯ ದಿನಾಂಕವನ್ನು ಮುದ್ರಿಸಲಾಗುತ್ತದೆ ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು. ಅಸಲಿಗೆ, ನೀರಿನ ಬಾಟಲಿಗಳ ಮೇಲೆ ಈ ದಿನಾಂಕವನ್ನು ಮುದ್ರಿಸಲು ಕಾರಣ ನೀರಲ್ಲ. ಬದಲಿಗೆ, ನೀರನ್ನು ಸಂಗ್ರಹಿಸಿಟ್ಟಿರುವ ಪ್ಲಾಸ್ಟಿಕ್ ಬಾಟಲಿಯ ಗುಣಮಟ್ಟ ಎಂಬುದು ನಿಮಗೆ ನೆನಪಿರಲಿ. ನೀರಿನ ಬಾಟಲಿಗಳನ್ನು ಬಿಸಿ ವಾತಾವರಣದಲ್ಲಿ ಅಥವಾ ನೇರ ಸೂರ್ಯನ ಬೆಳಕಿನಲ್ಲಿ ಇರಿಸಿದಾಗ, ಪ್ಲಾಸ್ಟಿಕ್‌ನ ಗುಣಮಟ್ಟವು ಕುಸಿಯುತ್ತದೆ. ಅಲ್ಲದೆ, ಬಾಟಲಿಯ ಮುಚ್ಚಳ ಅಥವಾ ಸೀಲ್ ಸರಿಯಾಗಿ ಭದ್ರವಾಗಿಲ್ಲದಿದ್ದರೆ, ಹೊರಗಿನ ಧೂಳು ಮತ್ತು ಬ್ಯಾಕ್ಟೀರಿಯಾಗಳು ಒಳಗೆ ಪ್ರವೇಶಿಸಿ, ಅದನ್ನು ಕುಡಿಯಲು ಯೋಗ್ಯವಿಲ್ಲದಂತೆ ಮಾಡಬಹುದು.
ಭಾರತ ಸರ್ಕಾರದ ನಿಯಮಗಳ ಪ್ರಕಾರ, ಪ್ಯಾಕ್ ಮಾಡಿದ ಕುಡಿಯುವ ನೀರಿನ ಉತ್ಪನ್ನಗಳ ಮೇಲೆ ಪ್ಯಾಕಿಂಗ್ ದಿನಾಂಕ, ಮುಕ್ತಾಯ ದಿನಾಂಕ ಮತ್ತು ಸಂಗ್ರಹಣಾ ಸೂಚನೆಗಳನ್ನು ಸ್ಪಷ್ಟವಾಗಿ ಮುದ್ರಿಸಿರಬೇಕು. ನೀರಿನ ಬಾಟಲಿಯನ್ನು ಖರೀದಿಸುವ ಮೊದಲು, ಅದರ ಸೀಲ್ ಭದ್ರವಾಗಿದೆಯೇ ಎಂದು ಪರಿಶೀಲಿಸುವುದು ಹಾಗೂ ತಯಾರಿಕೆ ಮತ್ತು ಎಕ್ಸ್ಪೈರಿ ದಿನಾಂಕಗಳನ್ನು ಗಮನಿಸುವುದು ತುಂಬಾ ಮುಖ್ಯ. ಬಾಟಲಿಯ ಮುಚ್ಚಳವನ್ನು ತೆರೆದ ನಂತರ, ಗಾಳಿಯಲ್ಲಿರುವ ಕಣಗಳ ಮೂಲಕ ಅಥವಾ ನೇರವಾಗಿ ಬಾಯಿಯಿಂದ ನೀರನ್ನು ಕುಡಿಯುವಾಗ, ನಮ್ಮ ಬಾಯಿಯಲ್ಲಿರುವ ಸೂಕ್ಷ್ಮಜೀವಿಗಳು ನೀರಿನೊಳಗೆ ಸೇರಬಹುದು. ಆದ್ದರಿಂದ, ಬಾಟಲಿಯನ್ನು ತೆರೆದ ಕೂಡಲೇ ಆದಷ್ಟು ಬೇಗ ನೀರನ್ನು ಕುಡಿಯುವುದು ಉತ್ತಮ,(ಏಜೆನ್ಸೀಸ್).