Friday Release: ಪ್ರತಿವಾರ ಹಾಲಿವುಡ್ ಮತ್ತು ಭಾರತೀಯ ಚಿತ್ರೋದ್ಯಮದಿಂದ ಹಲವು ಭಾಷೆಯ ಹಲವಾರು ಜಾನರ್ಗಳ ಸಿನಿಮಾಗಳು ಪ್ರೇಕ್ಷಕರ ಎದುರು ಹಾಜರಾಗುತ್ತವೆ. ಈ ಪೈಕಿ ಸ್ಟಾರ್ ನಟರ ಚಿತ್ರಗಳು ದೊಡ್ಡ ಕಟ್ಔಟ್ ಮತ್ತು ಭರ್ಜರಿ ಪ್ರಚಾರ ಕಾರ್ಯಗಳು, ಅಭಿಮಾನಿಗಳ ಸಂಭ್ರಮಗಳಿಂದ ರಿಲೀಸ್ ಆದರೆ, ಹೊಸಬರ ತಂಡಗಳಿಂದ ಮೂಡಿಬರುವ ಸಿನಿಮಾಗಳು ಊಹೆಗೂ ಮೀರಿದ ಗಳಿಕೆ ಮತ್ತು ಸಿನಿಪ್ರಿಯರ ಮೆಚ್ಚುಗೆಗಳಿಗೆ ಸಾಕ್ಷಿಯಾಗುತ್ತವೆ. ಅಸಲಿಗೆ, ಚಿತ್ರಮಂದಿರದಲ್ಲಿ ಸೋಲು-ಗೆಲುವು ನೋಡುವ ಯಾವುದೇ ಚಿತ್ರವಾದರೂ ಅದರ ರಿಲೀಸ್ ಮಾತ್ರ ಶುಕ್ರವಾರವೇ ಏಕೆ ಎಂಬುದೇ ಇಂದಿನ ನಮ್ಮ ಕುತೂಹಲಕಾರಿ ಪಾಯಿಂಟ್. ಅಷ್ಟಕ್ಕೂ ಈ ಪದ್ಧತಿ ಹಿಂದಿದೆ ನಿಮಗೆ ಗೊತ್ತಿರದ ಸಖತ್ ಇಂಟ್ರೆಸ್ಟಿಂಗ್ ಸಂಗತಿ.
ನಮಗೆಲ್ಲ ಗೊತ್ತಿರುವಂತೆ ಭಾರತದ ಸಿನಿಮಾಗಳು ಯಾವಾಗ ಬಿಡುಗಡೆಯಾಗುತ್ತವೆ ಎಂದು ತಿಳಿಯಲು ಚಿತ್ರಪ್ರೇಮಿಗಳು ಮೊದಲು ನೋಡುವುದೇ ಮುಂದಿನ ಶುಕ್ರವಾರ ಯಾವಾಗ ಎಂದು. ಕಾರಣ, ಹಲವು ಭಾಷೆಯ ಬಹುತೇಕ ಚಿತ್ರಗಳು ಸಾಲು ಸಾಲಾಗಿ ಬಿಡುಗಡೆಗೊಳ್ಳಲು ಪಟ್ಟಿಯಲ್ಲಿ ಸಿದ್ಧವಾಗಿರುತ್ತವೆ. ಅದು ಸ್ಟಾರ್ ಹೀರೋ ಚಿತ್ರವಿರಲಿ ಅಥವಾ ಹೊಸಬರ ಸಿನಿಮಾವೇ ಇರಲಿ, ಪ್ರತಿಯೊಬ್ಬರೂ ಚಿತ್ರಮಂದಿರಗಳಿಗೆ ಹೋಗಲು ಶುಕ್ರವಾರವನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಕೆಲವರು ಇದನ್ನು ಫಸ್ಟ್ ಡೇ ಫಸ್ಟ್ ಶೋ ಎಂದೇ ಹೆಚ್ಚಾಗಿ ಕರೆಯುವುದು ಸಾಮಾನ್ಯ.
ಶುಕ್ರವಾರದಂದು ಆಯಾ ಚಿತ್ರಮಂದಿರಗಳಲ್ಲಿ ಹಬ್ಬದಂತಹ ವಾತಾವರಣ ಸೃಷ್ಟಿಸುವ ಅಭಿಮಾನಿಗಳು ಮತ್ತು ಚಿತ್ರತಂಡವು, ನಟನ ಕಟೌಟ್ಗೆ ಹೂವಿನ ಹಾರ ಹಾಕಿಸಿ, ಹಾಲಿನ ಅಭಿಷೇಕ ಮಾಡಿಸಿ, ಪಟಾಕಿ ಸಿಡಿಸಿ ಚಿತ್ರದ ಮೊದಲ ಶೋಗೆ ಶುಭಾರಂಭ ಮಾಡುತ್ತಾರೆ. ಕೆಲವೇ ಕೆಲವು ಸಂದರ್ಭಗಳನ್ನು ಹೊರತುಪಡಿಸಿದರೆ, ದಶಕಗಳಿಂದಲೂ ಸಿನಿಮಾಗಳನ್ನು ಶುಕ್ರವಾರದಂದೇ ಬಿಡುಗಡೆ ಮಾಡುವ ಪದ್ಧತಿ ನಡೆದುಕೊಂಡು ಬಂದಿದೆ. ಅಸಲಿಗೆ ಇದರ ಹಿಂದಿರುವುದು ಹಾಲಿವುಡ್ನಿಂದ ಆಮದು ಮಾಡಿಕೊಳ್ಳಲಾದ ಒಂದು ವ್ಯವಸ್ಥಿತ ವ್ಯಾಪಾರ ಯೋಜನೆ ಎಂಬುದು ಬಹುತೇಕರಿಗೆ ಗೊತ್ತೇ ಇಲ್ಲ.
ಅಸಲಿಗೆ ಸಿನಿಮಾಗಳನ್ನು ಶುಕ್ರವಾರದಂದೇ ರಿಲೀಸ್ ಮಾಡುವ ಪದ್ಧತಿಯು ನಮ್ಮ ದೇಶದಲ್ಲಿ ಹುಟ್ಟಿದ್ದಲ್ಲ. ಬದಲಿಗೆ ಹಾಲಿವುಡ್ನಲ್ಲಿ ಆರಂಭವಾಗಿದ್ದು. 1940ರ ದಶಕಕ್ಕೂ ಮೊದಲು, ಚಿತ್ರಗಳನ್ನು ವಾರದ ಯಾವುದೇ ದಿನವಾದರೂ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳಿಸಲು ಆಯಾ ಚಿತ್ರತಂಡಗಳು ಮುಂದಾಗುತ್ತಿತ್ತು. ಆದರೆ, ವಾರದ 7 ದಿನಗಳಿಗೆ ಹೋಲಿಸಿದರೆ ಶನಿವಾರ ಮತ್ತು ಭಾನುವಾರದ ಕಲೆಕ್ಷನ್ ಇನ್ನುಳಿದ ದಿನಗಳಲ್ಲಿ ಸಿಗುತ್ತಿರಲಿಲ್ಲ. ಇದನ್ನು ಗಮನಿಸಿದ ಚಿತ್ರತಂಡವೊಂದು, 1939ರಲ್ಲಿ 'ಗಾನ್ ವಿತ್ ದಿ ವಿಂಡ್' (Gone with the Wind) ಎಂಬ ಸಿನಿಮಾವನ್ನು ಟ್ರಯಲ್ ಅಂಡ್ ಎರರ್ ಎಂಬಂತೆ ಶುಕ್ರವಾರದಂದು ರಿಲೀಸ್ ಮಾಡುವ ಮೂಲಕ ಹೊಸ ಪ್ರಯತ್ನಕ್ಕೆ ಮುಂದಾಯಿತು.
ಚಿತ್ರತಂಡ ಅದೃಷ್ಟ ಪರೀಕ್ಷೆಗೆ ಇಳಿದಿದ್ದಲ್ಲದೇ, ಕಲೆಕ್ಷನ್ ಲೆಕ್ಕಾಚಾರದಲ್ಲಿ ಮಾಡಿದ ಪ್ರಯತ್ನವು ಬಾಕ್ಸ್ ಆಫೀಸ್ನಲ್ಲಿ ಅನಿರೀಕ್ಷಿತ ಲಾಭವನ್ನೇ ತಂದುಕೊಟ್ಟಿತು. ಈ ಗಳಿಕೆಯನ್ನು ನೋಡಿ ಹುಬ್ಬೇರಿಸಿದ ಹಾಲಿವುಡ್, ಅಂದಿನಿಂದ ತಮ್ಮ ಚಿತ್ರೋದ್ಯಮದ ಮುಂದಿನ ಎಲ್ಲ ಸಿನಿಮಾಗಳನ್ನು ಇದೇ ದಿನದಂದು ಖಾಯಂ ಆಗಿ ರಿಲೀಸ್ ಮಾಡಲು ಶುರು ಮಾಡಿತು. ಅದೇ ಹಾಲಿವುಡ್ನ ಸಾಕಷ್ಟು ಚಿತ್ರಗಳ ಸೂಪರ್ಹಿಟ್ ಜತೆಗೆ ಅತಿ ಹೆಚ್ಚು ಕಲೆಕ್ಷನ್ಗೂ ಸಾಕ್ಷಿಯಾಯಿತು ಎಂಬುದು ಇಲ್ಲಿ ಗಮನಾರ್ಹ.
ಇನ್ನು, ನಮ್ಮ ದೇಶದ ವಿಷಯಕ್ಕೆ ಬಂದರೆ, ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ ಮತ್ತು ಸ್ವಾತಂತ್ರ್ಯದ ನಂತರವೂ, ನೌಕರರಿಗೆ ಶುಕ್ರವಾರದಂದು ಅರ್ಧ ದಿನದ ಕೆಲಸ ಮಾತ್ರ ಇರುತ್ತಿತ್ತು. ಶುಕ್ರವಾರ ಮಧ್ಯಾಹ್ನದ ನಂತರವೇ ಜನರು ವಾರಾಂತ್ಯದ ಮನಸ್ಥಿತಿಗೆ ಜಾರುತ್ತಿದ್ದರು. ಈ ಬಿಡುವಿನ ಸಮಯವನ್ನು ಲಾಭಕ್ಕಾಗಿ ಬಳಸಿಕೊಳ್ಳಬಹುದು ಎಂದು ಅರಿತ ಸಿನಿ ನಿರ್ಮಾಪಕರು, ನಿಧಾನವಾಗಿ ಸಿನಿಮಾಗಳ ರಿಲೀಸ್ ಅನ್ನು ಶುಕ್ರವಾರಕ್ಕೆ ಬದಲಾಯಿಸಲು ಪ್ರಾರಂಭಿಸಿದರು.
ಒಂದಷ್ಟು ಚಿತ್ರಗಳ ನಿರ್ಮಾಪಕರು ಮಾತ್ರ ಆರಂಭದಲ್ಲಿ ಹೀಗೆ ಮಾಡುತ್ತಿದ್ದರು. ಆದರೆ, ಪರಿಪೂರ್ಣವಾಗಿ ಶುಕ್ರವಾರದಂದೇ ಸಿನಿಮಾಗಳ ರಿಲೀಸ್ ಪದ್ಧತಿ ದೇಶಾದ್ಯಂತ ಗಟ್ಟಿಯಾಗಿ ಬೇರೂರಿದ್ದು 'ಮೊಘಲ್-ಎ-ಆಜಮ್' (Mughal-e-Azam) ಎಂಬ ಐತಿಹಾಸಿಕ ಚಿತ್ರದಿಂದ. ಈ ಚಿತ್ರವು 1960ರ ಆಗಸ್ಟ್ 5, ಶುಕ್ರವಾರದಂದು ಬಿಡುಗಡೆಯಾಯಿತು. ಬ್ಲಾಕ್ಬಸ್ಟರ್ ಹಿಟ್ ಆಗಿದ್ದರಿಂದ, ಬಾಲಿವುಡ್ನಲ್ಲಷ್ಟೇ ಅಲ್ಲದೆ, ಟಾಲಿವುಡ್ನಲ್ಲೂ ಶುಕ್ರವಾರದಂದು ಚಿತ್ರ ರಿಲೀಸ್ ಮಾಡುವ ಸಂಪ್ರದಾಯವು ರೂಢಿಯಾಯಿತು.
ಚಲನಚಿತ್ರ ವಿಶ್ಲೇಷಕರ ಪ್ರಕಾರ, ಸಿನಿಮಾ ಬಿಡುಗಡೆಗೆ ಶುಕ್ರವಾರವನ್ನೇ ಆಯ್ಕೆ ಮಾಡಿಕೊಳ್ಳಲು ಮೂರು ಪ್ರಮುಖ ಕಾರಣಗಳಿವೆ. ಚಿತ್ರವು ಚೆನ್ನಾಗಿದೆಯೇ ಅಥವಾ ಇಲ್ಲವೇ ಎಂಬುದು ತಿಳಿಯುವ ಮೊದಲೇ, ಬಂಡವಾಳ ಹಾಕಿದ ಹಣದ ಬಹುಭಾಗವನ್ನು ಮೊದಲ ಮೂರು ದಿನಗಳಲ್ಲಿಯೇ ಗಳಿಸುವುದು ಈ ಉದ್ಯಮದಲ್ಲಿ ಬಹಳ ಮುಖ್ಯವಾಗಿದೆ. ಶುಕ್ರವಾರದ ಮಾರ್ನಿಂಗ್ ಶೋ (ಬೆಳಗಿನ ಪ್ರದರ್ಶನ) ನಡೆಯುತ್ತಿರುವಾಗಲೇ ಚಿತ್ರದ ಬಗ್ಗೆ ಜನಾಭಿಪ್ರಾಯ ಹೊರಬರುತ್ತದೆ. ಸಿನಿಮಾಗೆ ಸಿಗುವ ಪಾಸಿಟಿವ್ ಅಥವಾ ನೆಗೆಟಿವ್ ಅಭಿಪ್ರಾಯ ಏನೇ ಇರಲಿ, ಶನಿವಾರ ಮತ್ತು ಭಾನುವಾರದಂದು ಚಿತ್ರಮಂದಿರಗಳ ಮುಂದೆ 'ಹೌಸ್ಫುಲ್' ಬೋರ್ಡ್ಗಳು ತೂಗಾಡುತ್ತವೆ.
ಹಿಂದಿನ ಕಾಲದಲ್ಲಿ, ಸಿನಿಮಾಗಳನ್ನು ಫಿಲ್ಮ್ ರೀಲ್ಗಳ ಮೂಲಕ ಪ್ರದರ್ಶಿಸುತ್ತಿದ್ದಾಗ, ಇತರ ದಿನಗಳಿಗೆ ಹೋಲಿಸಿದರೆ ಶುಕ್ರವಾರದಂದು ಪ್ರದರ್ಶನ ವೆಚ್ಚ ಸ್ವಲ್ಪ ಕಡಿಮೆ ಇರುತ್ತಿತ್ತು ಎನ್ನಲಾಗಿದೆ. ಅಲ್ಲದೆ, ನಿರ್ಮಾಪಕರು ನಂಬಿಕೆ-ಸಂಪ್ರದಾಯಗಳಿಗೆ ಹೆಚ್ಚಿನ ಮಹತ್ವ ಕೊಡುತ್ತಿದ್ದ ಹಿನ್ನೆಲೆ ಶುಕ್ರವಾರವು ಮಹಾಲಕ್ಷ್ಮಿಯ ನೆಚ್ಚಿನ ದಿನವೆಂದು ಆಳವಾಗಿ ನಂಬಲಾಗಿದ್ದು, ಈ ದಿನದಂದು ಸಿನಿಮಾ ರಿಲೀಸ್ ಆದರೆ ಹಣದ ಹೊಳೆಯೇ ಹರಿಯುತ್ತದೆ ಎಂಬ ನಂಬಿಕೆಯೂ ಇದಕ್ಕೆ ಒಂದು ಬಲವಾದ ಕಾರಣ.
ಇತ್ತೀಚಿನ ದಿನಗಳಲ್ಲಿ ಈ ಲೆಕ್ಕಾಚಾರಗಳಲ್ಲಿ ಕೆಲವು ಬದಲಾವಣೆಗಳಾಗಿವೆ. ಸಂಕ್ರಾಂತಿ ಮತ್ತು ದಸರಾದಂತಹ ದೊಡ್ಡ ಹಬ್ಬಗಳು ಅಥವಾ ಸ್ವಾತಂತ್ರ್ಯ ದಿನಾಚರಣೆಯಂತಹ ರಜಾ ದಿನಗಳು ಬುಧವಾರ ಅಥವಾ ಗುರುವಾರದಂದು ಬಂದರೆ, ನಿರ್ಮಾಪಕರು ಶುಕ್ರವಾರದವರೆಗೆ ಕಾಯುವುದಿಲ್ಲ. ನಾಲ್ಕು ಅಥವಾ ಐದು ದಿನಗಳ ಸತತ ವಾರಾಂತ್ಯದ ಲಾಭ ಪಡೆಯಲು ತಮ್ಮ ಚಿತ್ರಗಳನ್ನು ಗುರುವಾರವೇ ಬಿಡುಗಡೆ ಮಾಡಿಬಿಡುತ್ತಾರೆ. ಆದರೆ, ಯಾವುದೇ ಹಬ್ಬಗಳಿಲ್ಲದ ಸಾಮಾನ್ಯ ದಿನಗಳಲ್ಲಿ, ಬಾಕ್ಸ್ ಆಫೀಸ್ನಲ್ಲಿ ಶುಕ್ರವಾರದಂದು ಸಿನಿಮಾಗಳನ್ನು ತೆರೆಗೆ ತರುವ ನಿಯಮ ಇನ್ನೂ ಚಾಲ್ತಿಯಲ್ಲಿದೆ,(ಏಜೆನ್ಸೀಸ್).