IND vs NZ T20: ಇಂದು ನಡೆದ ನ್ಯೂಜಿಲೆಂಡ್ ಮತ್ತು ಟೀಮ್ ಇಂಡಿಯಾ ನಡುವಿನ ನಾಲ್ಕನೇ ಟಿ20 ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಪಡೆ ಹೀನಾಯ ಸೋಲುಂಡಿದ್ದು, ಆಕ್ಲೆಂಡ್‌ನ ಈಡನ್ ಪಾರ್ಕ್‌ನಲ್ಲಿ ಕಿವೀಸ್ ಪಡೆಯ ಬ್ಯಾಟಿಂಗ್ ಅಬ್ಬರಕ್ಕೆ ಸಂಪೂರ್ಣವಾಗಿ ತತ್ತರಿಸಿತು. ಸೋಲಿನ ಬೇಸರದಲ್ಲೇ ಮಾತನಾಡಿದ ಕ್ಯಾಪ್ಟನ್ ಶ್ರೇಯಸ್ ಅಯ್ಯರ್, ತಂಡ ಎಡವಿದ್ದೆಲ್ಲಿ ಎಂಬುದನ್ನು ಕಾರಣ ಸಮೇತ ವಿವರಿಸಿದ್ದಾರೆ.
ನ್ಯೂಜಿಲೆಂಡ್ ವಿರುದ್ಧದ ನಾಲ್ಕನೇ ಟಿ20 ಪಂದ್ಯದಲ್ಲಿ ಹೀನಾಯ ಸೋಲಿನ ಬಗ್ಗೆ ಮೌನಮುರಿದ ಕ್ಯಾಪ್ಟನ್ ಶ್ರೇಯಸ್ ಅಯ್ಯರ್, ಬೌಲಿಂಗ್ನಲ್ಲಿ ನಾವು ನಿರೀಕ್ಷಿತ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಇಲ್ಲೇ, ಕಂಪ್ಲೀಟ್ ಎಡವಿದೆವು. ಮುಖ್ಯವಾಗಿ ಪವರ್‌ಪ್ಲೇ ಹಂತದ ಮೂರನೇ ಓವರ್‌ನಲ್ಲಿ. ಎದುರಾಳಿ ತಂಡವು ಅಲ್ಲಿಂದಲೇ ವೇಗವನ್ನು ಪಡೆದುಕೊಂಡಿತು. ನಮ್ಮ ಬೌಲರ್‌ಗಳಲ್ಲಿ ಕೆಲವರು ರನ್ ಹರಿವನ್ನು ಕಂಟ್ರೋಲ್ ಮಾಡಲು ಪ್ರಯತ್ನಿಸಿದರು ಎಂದರು.
ಕಿವೀಸ್ ಪರ ಗ್ಲೆನ್ ಫಿಲಿಪ್ಸ್ ಅವರು ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದರು. ಅವರು ಆಡಿದ ಕೆಲವು ಶಾಟ್‌ಗಳು ನಿಜಕ್ಕೂ ಅತ್ಯದ್ಭುತವಾಗಿತ್ತು. ಅವುಗಳನ್ನು ನೋಡುವುದೇ ಒಂದು ಆನಂದ. ಇದಕ್ಕೆ ಅವರಿಗೆ ವಿಶೇಷ ಅಭಿನಂದನೆಗಳು. ಈ ಸರಣಿಯುದ್ದಕ್ಕೂ ಅವರು ಸ್ಥಿರವಾದ ಪ್ರದರ್ಶನ ನೀಡಿದ್ದಾರೆ. ಫಿಲಿಪ್ಸ್ರಿಂದ ಕಲಿಯಲು ಬಹಳಷ್ಟಿದೆ ಎಂದು ಹೇಳಿದರು.
ಮುಂದಿನ ಹಾಗೂ ಕೊನೆಯ ಪಂದ್ಯಕ್ಕೆ ನಾವು ಹ್ಯಾಮಿಲ್ಟನ್‌ಗೆ ತೆರಳಲು ಇನ್ನೂ ಒಂದು ದಿನ ಮಾತ್ರ ಬಾಕಿ ಉಳಿದಿದೆ. ಬೌಲಿಂಗ್ನಲ್ಲಿ ಸಣ್ಣ ಬದಲಾವಣೆಗಳು ಅಗತ್ಯವಿದೆ. ಆಟಗಾರರು ವಾಪಾಸ್ ಫಾರ್ಮ್ಗೆ ಮರಳುವ ವಿಶ್ವಾಸವಿದೆ ಎಂದು ಶ್ರೇಯಸ್ ಅಯ್ಯರ್ ಹೇಳಿದ್ದಾರೆ.
ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ಭಾರತ, ಕಿವೀಸ್ ಪಡೆಗೆ ಬ್ಯಾಟ್ ಮಾಡುವಂತೆ ಆಹ್ವಾನಿಸಿತು. ಅಂತೆಯೇ, ಕಣಕ್ಕಿಳಿದ ನ್ಯೂಜಿಲೆಂಡ್ ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 259 ರನ್ ಗಳ ಬೃಹತ್ ಮೊತ್ತ ಕಲೆಹಾಕಿತು. ಗ್ಲೆನ್ ಫಿಲಿಪ್ಸ್ ಶತಕ (49 ಎಸೆತಗಳಲ್ಲಿ 107 ರನ್, 6 ಬೌಂಡರಿ, 10 ಸಿಕ್ಸರ್) ಸಿಡಿಸಿದರೆ, ಮೈಕಲ್ ಬ್ರೇಸ್‌ವೆಲ್ (25 ಎಸೆತಗಳಲ್ಲಿ 65) ವಿಧ್ವಂಸ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಇನ್ನು, ಈ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾಗೆ ಆರಂಭಿಕರಿಂದ ಉತ್ತಮ ಇನ್ನಿಂಗ್ಸ್ ಬರಲೇ ಇಲ್ಲ.
260 ರನ್ಗಳ ಬೃಹತ್ ಗುರಿ ಬೆನ್ನತ್ತಿದ ಟೀಮ್ ಇಂಡಿಯಾ 20 ಓವರ್ ಗಳಲ್ಲಿ 9 ವಿಕೆಟ್ಗೆ 172 ರನ್ ಕಲೆಹಾಕಲಷ್ಟೇ ಶಕ್ತವಾಯಿತು. ಕಿವೀಸ್ ಎಸೆದ ಶಾರ್ಟ್ ಪಿಚ್ ಮತ್ತು ಬೌನ್ಸರ್ಗಳನ್ನು ಡಿಕೋಡ್ ಮಾಡಲು ಸಾಧ್ಯವಾಗದೆ ಭಾರತದ ಬ್ಯಾಟ್ಸ್ಮನ್ಗಳು ಒಬ್ಬರ ಹಿಂದೆ ಒಬ್ಬರು ಪೆವಿಲಿಯನ್ ಹಾದಿ ಹಿಡಿದರು. ಸಂಜು ಸ್ಯಾಮ್ಸನ್ (4), ಇಶಾನ್ ಕಿಶನ್ (0) ನಿರಾಸೆ ಮೂಡಿಸಿದರೆ, ಅಭಿಷೇಕ್ ಶರ್ಮಾ (27), ಶ್ರೇಯಸ್ ಅಯ್ಯರ್ (22), ನಿತೀಶ್ ಕುಮಾರ್ ರೆಡ್ಡಿ (21), ನಮನ್ ಧೀರ್ (28) ಕೆಲಹೊತ್ತು ಹೋರಾಟ ನಡೆಸಿ ಔಟ್ ಆದರು.
ಇನ್ನು ತಿಲಕ್ ವರ್ಮಾ ಮಾತ್ರ 35 ರನ್ ಗಳಿಸಿದ್ದೇ ಆದರೂ ಗೆಲುವಿಗೆ ಯಾವುದೇ ರೀತಿಯ ಪ್ರಯೋಜನ ನೀಡಲಿಲ್ಲ. ಕಿವೀಸ್ ಬೌಲರ್‌ಗಳಲ್ಲಿ ಜೇಕಬ್ ಡಫಿ 4 ವಿಕೆಟ್‌ಗಳನ್ನು ಪಡೆದರೆ, ಮಿಚೆಲ್ ಸ್ಯಾಂಟ್ನರ್ ಮತ್ತು ಮ್ಯಾಥ್ಯೂವ್ ಫಿಶರ್ ತಲಾ 2 ವಿಕೆಟ್‌ಗಳನ್ನು ಪಡೆದು ಮಿಂಚಿದರು. ಎಲ್ಲ ವಿಭಾಗಗಳಲ್ಲೂ ವಿಫಲವಾಗಿದ್ದ ಟೀಮ್ ಇಂಡಿಯಾ, ಈ ಪಂದ್ಯದಲ್ಲಿ ಹೀನಾಯ ಸೋಲು ಅನುಭವಿಸಿತು. ಉಭಯ ತಂಡಗಳ ನಡುವಿನ ಐದನೇ ಹಾಗೂ ಅಂತಿಮ ಟಿ20 ಪಂದ್ಯ ಇದೇ ನವೆಂಬರ್ 1ರಂದು ನಡೆಯಲಿದೆ,(ಏಜೆನ್ಸೀಸ್).