

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರಿನ ಉಳ್ಳಾಲದ ಯುವ ಪ್ರತಿಭೆ 15 ವರ್ಷದ ಬಾಲಕಿ ಸಿಂಧೂರಾ ರಾಜಾ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲಪುರಸ್ಕಾರವನ್ನು ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ಗುರುವಾರ ರಾಷ್ಟ್ರಪತಿ ದ್ರೌಪದಿ ಮುಮು ಅವರಿಂದ ಸ್ವೀಕರಿಸಿದರು. ಈ ಸಂದರ್ಭ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಸಂವಾದ ನಡೆಸುವ ಅವಕಾಶ ಅವರಿಗೆ ಲಭಿಸಿತು. ಬೆಂಗಳೂರಿನ ನ್ಯೂ ಹೊರೈಜನ್ ಪಬ್ಲಿಕ್ ಸ್ಕೂಲ್ ಹಳೇ ವಿದ್ಯಾರ್ಥಿನಿಯಾಗಿರುವ ಸಿಂಧೂರಾ, ಪ್ರಸ್ತುತ ಇಂದಿರಾ ನಗರದ ನ್ಯಾಷನಲ್ ಪಬ್ಲಿಕ್ ಸ್ಕೂಲ್ನಲ್ಲಿ 11ನೇ ತರಗತಿಯಲ್ಲಿ ಕಲಿಯುತ್ತಿದ್ದಾರೆ.
ಮೂಲತಃ ಉಳ್ಳಾಲ ಗೋಳಿಯಡಿ ಉಳಿಯ ದೇವಸ್ಥಾನ ರಸ್ತೆ ನಿವಾಸಿ ರಾಜಾ ಟಿ. ಮತ್ತು ಶಿಬಾನಿ ರಾಜಾ ಅವರ ಪುತ್ರಿ ಸಿಂಧೂರಾ, ವಿಜ್ಞಾನ ಮತ್ತು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ನಲ್ಲಿ ಅನೇಕ ಆವಿಷ್ಕಾರಗಳನ್ನು ಮಾಡಿದ್ದು, ರ್ಪಾನ್ಸನ್ ರೋಗಿಗಳಿಗೆ ಸಂಬಂಧಿಸಿದ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಉಪಕರಣ ಅಭಿವೃದ್ಧಿಪಡಿಸಿದ್ದಾರೆ. ವಿವಿಧ ದೇಶಗಳ ನೋಬೆಲ್ ಪ್ರಶಸ್ತಿ ವಿಜೇತರು ಹಾಗೂ ಬ್ರೇಕ್ಥ್ರೂ ಪ್ರಶಸ್ತಿ ಪುರಸ್ಕೃತರಿಂದ ತರಬೇತಿ ಪಡೆಯುತ್ತಿದ್ದಾರೆ. ಅವರ ಜತೆ ಪ್ರಾಜೆಕ್ಟ್ಗಳಲ್ಲಿ ಕೆಲಸ ಮಾಡುತ್ತಿದ್ದಾರೆ.
ಹಲವು ಗೌರವ, ಪ್ರಶಸ್ತಿ: ಸಿಂಧೂರಾ ಅವರ ವೈಜ್ಞಾನಿಕ ಸಾಧನೆಗಾಗಿ ಅಮೆರಿಕದಿಂದ ವರ್ಲ್ಡ್ ಸೈನ್ಸ್ ಸ್ಕಾಲರ್ ಪದವಿ ದೊರೆತಿದೆ. ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ಮತ್ತು ವೊಲ್ಪ್ರಾಮ್ ರಿಸರ್ಚ್ ಸೆಂಟರ್ ಜತೆಗೆ ಕ್ರಿಪ್ರೋಕಾಕಸ್ ನಿಯೋಫಾರ್ವನ್ಸ್ ಎಂಬ ಪ್ಯಾಥೊಜೆನಿಕ್ ಈಸ್ಟ್ ಮೇಲೆ ಪ್ರಯೋಗ ನಡೆಸುತ್ತಿದ್ದಾರೆ. ಈ ಸಂಶೋಧನೆ ಐಆರ್ಐಎಸ್(ಇನಿಶಿಯೇಟಿವ್ ಫಾರ್ ರಿಸರ್ಚ್ ಆಂಡ್ ಇನ್ನೋವೇಶನ್) ರಾಷ್ಟ್ರೀಯ ಮೇಳದಲ್ಲಿ ಗ್ರ್ಯಾಂಡ್ ಪ್ರಶಸ್ತಿ ಗೆದ್ದಿದ್ದು, 2025 ಮೇನಲ್ಲಿ ಅಮೆರಿಕದ ಕೊಲಂಬಸ್ನಲ್ಲಿ ನಡೆಯುವ ರಿಜೆನೆರಾನ್ ಅಂತಾರಾಷ್ಟ್ರೀಯ ವಿಜ್ಞಾನ ಮತ್ತು ಇಂಜಿನಿಯರಿಂಗ್ ಮೇಳ(ಒಲಿಂಪಿಕ್ಸ್ ಆಫ್ ಸೈನ್ಸ್) ದಲ್ಲಿ ಭಾರತವನ್ನು ಪ್ರತಿನಿಧಿಸುವ ಅವಕಾಶ ಪಡೆದಿದ್ದಾರೆ. ಕಳೆದ ಆಗಸ್ಟ್ ನಲ್ಲಿ ‘ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಇಗ್ನೈಟೆಡ್ ಮೈಂಡ್ ಪ್ರಶಸ್ತಿ 2024’, ಎಟಿಎಲ್ ಮ್ಯಾರಥಾನ್ನಲ್ಲಿ ಪ್ರಶಸ್ತಿ ಪಡೆದಿದ್ದಾರೆ.
ಸಾಧನೆಯ ಹಾದಿ: ಸಿಂಧೂರಾ ಅವರು ಮೋಟ್ವಾನಿ- ಜಡೇಜಾ ಫೌಂಡೇಶನ್ ಪ್ರಾಯೋಜಕತ್ವದಲ್ಲಿ ಮೆಕ್ಸಿಕೋಗೆ ಪ್ರವಾಸ ಮಾಡಿ ಫ್ಯಾಬ್24 ಸಮ್ಮೇಳನದಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಮಸಾಚುಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(ಎಂಐಟಿ)ಯ ಬಿಟ್ಸ್ ಆಂಡ್ ಅಟಾಮ್ಸ್ ಕೇಂದ್ರ ಮತ್ತು ಫ್ಯಾಬ್ ಫೌಂಡೇಶನ್ ಆಯೋಜಿತ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಮಿದುಳಿನ ವಯಸ್ಸನ್ನು ಊಹಿಸುವ ಬ್ರೖೆನ್ ಏಜ್ ಪ್ರಿಡಿಕ್ಷನ್ ಮಾದರಿ ಅಭಿವೃದ್ಧಿಪಡಿಸಿದ್ದಾರೆ. ಈ ಸಾಧನೆ ಫ್ಯೂಚರ್ ಪೋರ್ಟ್ ಅವಾರ್ಡ್ಸ್, ಪ್ರಾಗ್, ಚೆಕ್ ರಿಪಬ್ಲಿಕ್ನಲ್ಲಿ ಪ್ರಥಮ ಸ್ಥಾನ ಮತ್ತು ಹಣಕಾಸು ಸಹಾಯ ಪಡೆದಿದೆ. ನಾಸಾ ಜತೆ ಸೇರಿ ಒಜಿ15 023 ಹೆಸರಿನ ಅಸ್ಟೀರಾಯ್್ಡ ಕಂಡುಹಿಡಿದಿದ್ದಾರೆ. ಸಿಎಸ್ಐಆರ್- ಜಿಗ್ಯಾಸಾ ಕಾರ್ಯಕ್ರಮದ ಭಾಗವಾಗಿ ಅವರು ಸಿಎಸ್ಐಆರ್-ಫೋರ್ಥ್ ಪ್ಯಾರಡೈಮ್ ಇನ್ಸ್ಟಿಟ್ಯೂಟ್ನಲ್ಲಿ ರ್ಪಾನ್ಸನ್ ರೋಗದ ಸಮಗ್ರ ಅಧ್ಯಯನ ನಡೆಸುತ್ತಿದ್ದಾರೆ. ಅದ್ಭುತ ಸಾಧನೆಗಳ ಮೂಲಕ ವಿಜ್ಞಾನ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡುತ್ತಿದ್ದಾರೆ.
17 ಮಕ್ಕಳಿಗೆ ಪುರಸ್ಕಾರ: ರಾಷ್ಟ್ರಪತಿ ದ್ರೌಪದಿ ಮುಮು ಅವರು 17 ಮಕ್ಕಳಿಗೆ ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರವನ್ನು ಪ್ರದಾನ ಮಾಡಿದರು. ಸಾಹಸ, ಕಲೆ, ಸಂಸ್ಕೃತಿ ಮತ್ತು ಕ್ರೀಡೆ ಸೇರಿ ವಿವಿಧ ಕ್ಷೇತ್ರಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಮಕ್ಕಳನ್ನು ಗುರುತಿಸಿ ಈ ಪುರಸ್ಕಾರ ನೀಡಲಾಗುತ್ತದೆ. ಒಟ್ಟು ಏಳು ವಿಭಾಗಗಳಲ್ಲಿ ಈ ಪುರಸ್ಕಾರ ನೀಡಲಾಗುತ್ತದೆ.