

ನವದೆಹಲಿ : ರಾಷ್ಟ್ರ ಪ್ರಶಸ್ತಿ ವಿಜೇತ ಹಿರಿಯ ನಟಿ ಸುರೇಖಾ ಸಿಕ್ರಿ ಅವರು ಇಂದು ಬೆಳಿಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ. 75 ವರ್ಷ ವಯಸ್ಸಾಗಿದ್ದ ಸಿಕ್ರಿ ಅವರು ಬ್ರೇನ್ ಸ್ಟ್ರೋಕ್ನಿಂದಾದ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು ಎನ್ನಲಾಗಿದೆ.
ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾದಲ್ಲಿ ವ್ಯಾಸಂಗ ಮಾಡಿದ್ದ ಸುರೇಖಾ ಸಿಕ್ರಿ ಅವರು ಪ್ರತಿಭಾವಂತ ಕಲಾವಿದೆಯಾಗಿದ್ದರು. 1989 ರಲ್ಲಿ ಅವರಿ ಸಂಗೀತ್ ನಾಟಕ್ ಅಕಾಡೆಮಿ ಅವಾರ್ಡ್ ಕೂಡ ಸಂದಿತ್ತು. 2019 ರಲ್ಲಿ ಹಿಂದಿ ಚಿತ್ರ 'ಬದಾಯಿ ಹೋ'ನಲ್ಲಿನ ನಟನೆಗೆ ಅತ್ಯುತ್ತಮ ಪೋಷಕ ನಟಿಯ ರಾಷ್ಟ್ರ ಪ್ರಶಸ್ತಿ ಪಡೆದಿದ್ದ ಸಿಕ್ರಿ ಅವರಿಗೆ 1988 ರಲ್ಲಿ 'ತಮಸ್' ಚಿತ್ರದ ಪಾತ್ರಕ್ಕೆ ಮತ್ತು 1995ರಲ್ಲಿ 'ಮಮ್ಮೋ' ಚಿತ್ರದ ಪಾತ್ರಕ್ಕೆ ಕೂಡ ರಾಷ್ಟ್ರಪ್ರಶಸ್ತಿಗಳು ಲಭಿಸಿದ್ದವು.
ಇದನ್ನೂ ಓದಿ: ರಿಷಭ್ ಪಂತ್ಗೆ ವೈರಸ್ ಹರಡಿದ್ದು ಯಾರಿಂದ ಗೊತ್ತೇ..?
ಟೆಲಿವಿಷನ್ ಸೀರಿಸ್ 'ಬಾಲಿಕಾ ವಧು'ವಿನಲ್ಲಿ ಅವರು ವಹಿಸಿದ್ದ 'ದಾದಿಸಾ' ಪಾತ್ರ ಅವರಿಗೆ ಬಹು ಜನಪ್ರಿಯತೆ ತಂದಿತ್ತು. ಕಡೆಯದಾಗಿ ನೆಟ್ಫ್ಲಿಕ್ಸ್ನ ಧಾರಾವಾಹಿ ಘೋಸ್ಟ್ ಸ್ಟೋರೀಸ್ನಲ್ಲಿ, ಸಿಕ್ರಿ ಅವರು ಪಾತ್ರ ವಹಿಸಿದ್ದರು.
ನೀನಾ ಗುಪ್ತಾ, ಮನೋಜ್ ಬಾಜಪೇಯಿ, ದಿಯಾ ಮಿರ್ಜಾ, ಪೂಜಾ ಭಟ್, ರಂದೀಪ್ ಹೂಡ, ದಿವ್ಯಾ ದತ್ತ, ಆಶಿಶ್ ವಿದ್ಯಾರ್ಥಿ, ಆಯುಷ್ಮಾನ್ ಖುರಾನ ಮುಂತಾದ ಬಾಲಿವುಡ್ ನಟನಟಿಯರು ಸಿಕ್ರಿ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿದ್ದಾರೆ. (ಏಜೆನ್ಸೀಸ್)