

ಬೆಂಗಳೂರು : ಧ್ಯಾನ ಮತ್ತು ಪ್ರಾಣಾಯಾಮಕ್ಕೆ ಹೇಳಿಮಾಡಿಸಿದಂತಹ ಯೋಗ ಭಂಗಿ ಎಂದರೆ ಪದ್ಮಾಸನ. ಸರಳವಾದ ಈ ಆಸನ ಮಾಡುವುದರಿಂದ ಕಾಲಿನ ನರ, ಹೊಟ್ಟೆ, ಸೊಂಟ, ಬೆನ್ನು, ಮಂಡಿ ಮುಂತಾದ ಅಂಗಗಳಿಗೆ ಹೊಸ ಹುರುಪು ಬರುತ್ತದೆ.
ಪದ್ಮಾಸನ ಮಾಡುವುದರಿಂದ ಉಸಿರಾಟ ಸುಗಮವಾಗುತ್ತದೆ. ಹೊಟ್ಟೆ ತೆಳ್ಳಗಾಗಿ, ಶರೀರದ ಸೌಂದರ್ಯ ಹೆಚ್ಚುತ್ತದೆ. ತೊಡೆಗಳ ಬೊಜ್ಜು ಸಹ ಕರಗುತ್ತದೆ. ಮನಸ್ಸಿನ ಏಕಾಗ್ರತೆಯನ್ನು ಹೆಚ್ಚಿಸುವ ಈ ಆಸನವನ್ನು ವಿದ್ಯಾರ್ಥಿ ದೆಸೆಯಲ್ಲಿ ಕಲಿತರೆ ಬಹಳ ಒಳ್ಳೆಯದು. ಆದರೆ, ಮಂಡಿ ನೋವು ಅಥವಾ ಸೊಂಟ ನೋವು ಇರುವವರು ಪದ್ಮಾಸನವನ್ನು ಅಭ್ಯಾಸ ಮಾಡಬಾರದು.
ಮಾಡುವ ವಿಧಾನ : ನೆಲದ ಮೇಲೆ ಕಾಲು ಚಾಚಿ ಕುಳಿತುಕೊಳ್ಳುವುದು. ಬಲಗಾಲನ್ನು ಮಡಿಸಿಕೊಂಡು ಎಡತೊಡೆಯ ಮೇಲೆ, ಎಡಗಾಲನ್ನು ಮಡಿಸಿಕೊಂಡು ಬಲತೊಡೆಯ ಮೇಲೆ ಇಡುವುದು. ಬೆನ್ನು, ಕುತ್ತಿಗೆ ನೇರ ಮಾಡಿ ಕೂರುವುದು. ತೋರ್ಬೆರಳು ಮತ್ತು ಹೆಬ್ಬೆಟ್ಟನ್ನು ಒಟ್ಟಿಗೆ ಹಿಡಿದು(ಚಿನ್ಮುದ್ರೆ) ಸಹಜ ಉಸಿರಾಟ ನಡೆಸುವುದು. ಮತ್ತೆ ಇದೇ ರೀತಿ ಎಡಗಾಲನ್ನು ಮಡಿಸಿಕೊಂಡು ಬಲತೊಡೆಯ ಮೇಲೆ, ಬಲಗಾಲನ್ನು ಮಡಿಸಿಕೊಂಡು ಎಡತೊಡೆಯ ಮೇಲೆ ಇಡುವುದು. ಬಲಗಾಲನ್ನು ಮಡಿಸಿಕೊಂಡು ಎಡತೊಡೆಯಯ ಮೇಲೆ, ಎಡಗಾಲನ್ನು ಮಡಿಸಿಕೊಂಡು ಬಲತೊಡೆಯ ಮೇಲೆ ಇಡುವುದು. ಮತ್ತೆ ಚಿನ್ಮುದ್ರೆಯಲ್ಲಿ ಸಹಜ ಉಸಿರಾಟ ನಡೆಸುವುದು.