

ನವದೆಹಲಿ: ನಿನ್ನೆ (ಜೂ.09) ರಾಷ್ಟ್ರಪತಿ ಭವನದಲ್ಲಿ ಅಪಾರ ಸಂಖ್ಯೆಯ ಜನರು ಮತ್ತು ರಾಜಕೀಯ ಗಣ್ಯರ ಎದುರು ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನರೇಂದ್ರ ಮೋದಿ ಅವರಿಗೆ ವ್ಯಾಪಕ ಜನಮನ್ನಣೆ ದೊರಕಿತು. ಮೂರನೇ ಅವಧಿಗೆ ಕಾಲಿಟ್ಟ ನಮೋ 3.0 ಸರ್ಕಾರದ ಆಡಳಿತ ಐದು ವರ್ಷದವರೆಗೂ ಇರಲಿದೆ ಎಂದು ಖ್ಯಾತ ಜ್ಯೋತಿಷಿ ಭವಿಷ್ಯ ನುಡಿದಿದ್ದಾರೆ.
"ನರೇಂದ್ರ ಮೋದಿ ಅವರು ಪ್ರಮಾಣ ವಚನ ಸ್ವೀಕರಿಸಿದ 9 ಜೂನ್ 2024ರಂದು ಸಂಸತ್ತಿನಲ್ಲಿ ಚಾಲ್ತಿಯಲ್ಲಿರುವ ಸಮಯ ಸಂಜೆ 7:23 - 7:28ರ ಪ್ರಕಾರ, ನಮೋ ಸರ್ಕಾರವು 5 ವರ್ಷಗಳ ಅಧಿಕಾರಾವಧಿಯನ್ನು ಪೂರ್ಣಗೊಳಿಸುತ್ತದೆ ಎಂದು ಲೆಕ್ಕಾಚಾರಗಳು ಸೂಚಿಸಿವೆ. ಮೋದಿಯವರ ಆರೋಗ್ಯವು ಉತ್ತಮವಾಗಿರುತ್ತದೆ ಮತ್ತು ಅವರ ಅಧಿಕಾರಾವಧಿಯಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಯಾಗಲಿದೆ ಎಂದು ಅನಿರುದ್ಧ್ ಕುಮಾರ್ ಮಿಶ್ರಾ ತಮ್ಮ ಎಕ್ಸ್ನಲ್ಲಿ (ಈ ಹಿಂದಿನ ಟ್ವಿಟರ್) ಬರೆದುಕೊಂಡಿದ್ದಾರೆ.
ಇನ್ನು ಈ ಮಧ್ಯೆ ಪಿಎಂ ಕಿಸಾನ್ ನಿಧಿಯ 17ನೇ ಕಂತಿನ ಬಿಡುಗಡೆಗೆ ಅಧಿಕಾರ ನೀಡುವ ಮೂಲಕ ಪ್ರಧಾನಿ ಮೋದಿ ಈಗಾಗಲೇ ತಮ್ಮ ಮೂರನೇ ಅವಧಿಯನ್ನು ಸೋಮವಾರ (ಜೂ.10) ಬೆಳಗ್ಗೆ ಪ್ರಾರಂಭಿಸಿದ್ದಾರೆ. ಇದು 9.3 ಕೋಟಿ ರೈತರಿಗೆ ಪ್ರಯೋಜನವನ್ನು ನೀಡುವುದರ ಜತೆಗೆ ಸುಮಾರು 20,000 ಕೋಟಿ ರೂ.ಗಳನ್ನು ವಿತರಿಸುವ ಗುರಿಯನ್ನು ಹೊಂದಿದೆ.
ಈ ಹಿಂದೆಯೇ ಹೇಳಿದಂತೆ, ದೇಶದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ ಮೊದಲ 100 ದಿನಗಳವರೆಗೆ 100 ದಿನಗಳ ಯೋಜನೆಯತ್ತ ಕೆಲಸ ಮಾಡಲು ಮುಂದಾಗಿದ್ದಾರೆ,(ಏಜೆನ್ಸೀಸ್).