

ಬೆಂಗಳೂರು: 'ತೋಟಗಾರಿಕೆ ಸಚಿವ ನಾರಾಯಣ್ ಗೌಡರನ್ನು ಇನ್ಮುಂದೆ ಮಾತನಾಡಿಸಲ್ಲ' ಎಂದು ಕಡೂರು ಕ್ಷೇತ್ರದ ಬಿಜೆಪಿ ಶಾಸಕ ಬೆಳ್ಳಿಪ್ರಕಾಶ್ ಹೇಳಿದ್ದಾರೆ.
ವಿಧಾನಸಭೆಯ ಮೊಗಸಾಲೆಯ ಮುಂದೆಯೇ ಸೋಮವಾರ ಮಧ್ಯಾಹ್ನ ಬೆಳ್ಳಿಪ್ರಕಾಶ್ ಮತ್ತು ನಾರಾಯಣ್ಗೌಡ ಕಿತ್ತಾಡಿಕೊಂಡಿದ್ದರು. ಈ ಬಗ್ಗೆ ದಿಗ್ವಿಜಯ ನ್ಯೂಸ್ಗೆ ಇವರಿಬ್ಬರೂ ಪ್ರತ್ಯೇಕವಾಗಿ ಪ್ರತಿಕ್ರಿಯಿಸಿದ್ದಾರೆ. 'ವರ್ಗಾವಣೆ ವಿಚಾರವಾಗಿ ನಾನು ಹೇಳಿದ ಕೆಲಸ ಮಾಡಿಲ್ಲ. ಈ ವಿಚಾರವಾಗಿ ಸಚಿವರ ಜತೆ ಮಾತಿನ ಚಕಮಕಿ ನಡೆದದ್ದು ನಿಜ. ಆದರೆ ಹಲ್ಲೆ ಮಾಡಿಲ್ಲ. ಬೇರೆಲ್ಲ ಸಚಿವರು ಹೇಳಿದ ಕೆಲಸ ಮಾಡಿಕೊಟ್ಟಿದ್ದಾರೆ. ನಾರಾಯಣ್ ಗೌಡ ಮಾತ್ರ ಕೆಲಸ ಮಾಡಿಕೊಟ್ಟಿಲ್ಲ' ಎಂದು ಅಸಮಾಧಾನ ಹೊರಹಾಕಿದರು. ಇದನ್ನೂ ಓದಿರಿ ಸರ್ಕಾರದ ವಿರುದ್ಧ ಸಿಡಿದೆದ್ದ ರೈತರು… ಮಳೆಯಲ್ಲೇ ಬೃಹತ್ ಪ್ರತಿಭಟನೆ
'ಇನ್ಮುಂದೆ ನಾನು ನಾರಾಯಣಗೌಡ ಹತ್ತಿರ ಕೆಲಸ ಮಾಡಿಕೊಡಿ ಅಂತಾ ಕೇಳುವುದಿಲ್ಲ. ಮಾಡಿದರೆ ಮಾಡಲಿ, ಇಲ್ಲಾಂದ್ರೆ ಬಿಡಲಿ' ಎಂದು ಬೇಸರದಿಂದ ನುಡಿದ ಬೆಳ್ಳಿಪ್ರಕಾಶ್, 'ಈ ಬಗ್ಗೆ ಈಗಾಗಲೇ ಸಿಎಂ ಗಮನಕ್ಕೆ ಬಂದಿದೆ' ಎಂದರು.
ನಾರಾಯಣ್ಗೌಡ ಮಾತನಾಡಿ, 'ಬೆಳ್ಳಿಪ್ರಕಾಶ್ರ ಕೆಲಸ ಪೆಂಡಿಂಗ್ ಇಟ್ಟಿಲ್ಲ. ಕಾರ್ಯದರ್ಶಿಗಳ ಕಚೇರಿಗೆ ಕಳುಹಿಸಿದ್ದೇವೆ. ಆದರೂ ಈ ವಿಚಾರವಾಗಿ ನನ್ನ ವಿರುದ್ಧ ಏಕವಚನ ಬಳಸಿದ್ರು. ಅವರು ಮಾತನಾಡುವುದೇ ರಫ್ ಅಂತ ಹೇಳ್ತಾರೆ. ಅದು ಮಾಡಬೇಡಿ ಅಂತ ಹೇಳಿದ್ದೇನೆ. ಅವರಿಗೆ ನನ್ನ ಇಲಾಖೆಯಿಂದ ಯಾವುದೇ ಸಮಸ್ಯೆ ಆಗಿಲ್ಲ' ಎಂದು ಸ್ಪಷ್ಟಪಡಿಸಿದರು.
'ನಮ್ಮಿಬ್ಬರ ಮಾತಿನ ಚಕಮಕಿ ಮೂಲ ವಲಸಿಗ ಸಮಸ್ಯೆ ಅಲ್ಲ. ಇದರಲ್ಲಿ ತಪ್ಪು ಹುಡುಕುವುದು ಬೇಡ. ನನ್ನ ಮೇಲೆ ಹಲ್ಲೆ ಮಾಡಿಲ್ಲ' ಎಂದರು.