

ಬೆಂಗಳೂರು: ಡ್ರಗ್ಸ್ ‘ಬಣ್ಣ’ದಾಟದಲ್ಲಿ ದಿನಕ್ಕೊಂದು ಸ್ಫೋಟಕ ಮಾಹಿತಿಗಳು ಬಹಿರಂಗವಾಗುತ್ತಲೇ ಇವೆ. ನಟಿ ರಾಗಿಣಿಗಾಗಿ ಆರ್ಟಿಒ ಕಚೇರಿಯ ಎಸ್ಡಿಎ ರವಿಶಂಕರ್ ತನ್ನ ಹೆಂಡತಿಯನ್ನೂ ತೊರೆದಿದ್ದ ಎಂಬುದು ಸಿಸಿಬಿ ತನಿಖೆಯಲ್ಲಿ ಹೊರಬಿದ್ದಿತ್ತು. ಇದೀಗ ರಾಗಿಣಿ ಮತ್ತು ರವಿಶಂಕರ್ ಇಬ್ಬರೂ ಒಟ್ಟಾಗಿ ಎಲ್ಲೆಲ್ಲಿ ಡ್ರಗ್ಸ್ ಸೇವಿಸಿದ್ದರು ಎಂಬ ಬಗ್ಗೆಯೂ ಗೊತ್ತಾಗಿದೆ.
'ಶಿವಕುಮಾರ್ರಿಂದ ದೂರವಾದ ರಾಗಿಣಿ ಮತ್ತು ನನ್ನ ನಡುವೆ ಗಾಢ ಸ್ನೇಹವಾಯಿತು. ಈ ವಿಚಾರ ಗೊತ್ತಾಗಿ ನನ್ನ ಪತ್ನಿ ನನ್ನೊಂದಿಗೆ ಗಲಾಟೆ ಮಾಡಿದ್ದಳು. ವಿಷಯ ತಿಳಿದ ರಾಗಿಣಿಯೂ, ಕೌಟುಂಬಿಕ ಸಮಸ್ಯೆ ಬಗೆಹರಿಸಿಕೊಳ್ಳಲು ನನಗೆ ಹೇಳಿದ್ದಳು. ಕೊನೆಗೆ ನಾನು ವಿವಾಹ ವಿಚ್ಛೇದನ ಪಡೆದೆ. ನನ್ನ ಸ್ನೇಹಿತ, ಕ್ಲಬ್ ಮಾಲೀಕ ಶ್ರೇಯಸ್ ಪಾಟೀಲ್‌ನ ಬಿಎಂಡಬ್ಲ್ಯು ಕಾರಿನಲ್ಲಿ ರಾಗಿಣಿಯನ್ನು ಹೋಟೆಲ್‌ಗೆ ಕರೆದೊಯ್ಯುತ್ತಿದ್ದೆ' ಎಂದೂ ರವಿಶಂಕರ್ ಹೇಳಿದ್ದಾನೆ. ಹೀಗೆ ಸಿಸಿಬಿ ವಿಚಾರಣೆಯಲ್ಲಿ ರಾಗಿಣಿ ಆಪ್ತ ರವಿಶಂಕರ್, 'ಮಾದಕ' ನಟಿಯ ನಂಟು, ಡ್ರಗ್ಸ್ ಪಾರ್ಟಿ, ಕೌಟುಂಬಿಕ ಕಲಹದ ಬಗ್ಗೆ ಮಹತ್ತರ ಮಾಹಿತಿಯನ್ನು ಬಾಯ್ಬಿಟ್ಟಿದ್ದಾನೆ ಎನ್ನಲಾಗಿದೆ.
ಡ್ರಗ್ಸ್ ಕೇಸ್ನಲ್ಲಿ ಸಿಸಿಬಿ ಪೊಲೀಸರಿಗೆ ಸಿಕ್ಕಿಬಿದ್ದಿರುವ ರವಿಶಂಕರ್, ಸರ್ಕಾರಿ ಕೆಲಸದಿಂದ ಅಮಾನತಿಗೂ ಒಳಗಾಗಿದ್ದಾನೆ.