

ಹೈದರಾಬಾದ್: ನ್ಯಾಚುರಲ್ ಸ್ಟಾರ್ ನಾನಿ ಮತ್ತು ಮೃಣಾಲ್ ಠಾಕೂರ್ ಮುಖ್ಯಭೂಮಿಕೆಯಲ್ಲಿ ನಟಿಸಿದ 'ಹಾಯ್ ನನ್ನಾ' ಸಿನಿಮಾ ಇದೀಗ ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡಿದ್ದು, ಸಿನಿಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆಗಳನ್ನು ಪಡೆದಯಕೊಳ್ಳುತ್ತಿದೆ. ಈ ಮಧ್ಯೆ ಯುಎಸ್ ಬಾಕ್ಸ್ ಆಫೀಸ್‌ನಲ್ಲಿ ಮತ್ತೊಂದು ದಾಖಲೆ ನಿರ್ಮಿಸಿದ ನಾನಿ ಚಿತ್ರ, ಭರ್ಜರಿ ಗಳಿಕೆಯಲ್ಲಿ ಮುಂಚೂಣಿಯಲ್ಲಿದೆ.
ಈ ಹಿಂದಿನಿಂದಲೂ ಅಮೆರಿಕಾ ಸಿನಿಪ್ರೇಕ್ಷಕರು ನಾನಿ ನಟನೆಯ ಸಿನಿಮಾಗಳಿಗೆ ಹೆಚ್ಚಿನ ಮನ್ನಣೆ ನೀಡುತ್ತಲೇ ಬಂದಿದ್ದಾರೆ. ಅದೇ ರೀತಿ ಈ ಬಾರಿ ತೆರೆಕಂಡ ಕುಟಂಬ ಆಧರಿತ ಕಥೆಯನ್ನು ಪ್ರೇಕ್ಷಕರು ಮೆಚ್ಚಿ, ಪಾಸಿಟಿವ್ ರೆಸ್ಪಾನ್ಸ್ ನೀಡಿದ್ದಾರೆ. ಇದೀಗ ಯುಎಸ್ ಬಾಕ್ಸ್ ಆಫೀಸ್‌ನಲ್ಲಿ ನಾನಿ ನಟನೆಯ ಈ ಸಿನಿಮಾ 1.5 ಮಿಲಿಯನ್ ಡಾಲರ್ ಗಳಿಕೆಯನ್ನು ಕಂಡಿದ್ದು, ಈ ಮೈಲಿಗಲ್ಲನ್ನು ಸಾಧಿಸಿದ ನಾನಿ ನಟನೆಯ 9ನೇ ಸಿನಿಮಾವಿದು ಎಂದು ಹೇಳಲಾಗಿದೆ.
ಸದ್ಯ ಅಮೆರಿಕಾ ಬಾಕ್ಸ್ ಆಫೀಸ್‌ನಲ್ಲಿ 1.5 ಮಿಲಿಯನ್ ಡಾಲರ್ ಗಳಿಕೆ ಕಾಣುವ ಮೂಲಕ ಅಬ್ಬರಿಸುತ್ತಿರುವ 'ಹಾಯ್ ನನ್ನಾ' ಚಿತ್ರವು ಇದೀಗ ಯುಎಸ್ ಗಲ್ಲಾಪೆಟ್ಟಿಗೆಯಲ್ಲಿ ತನ್ನ ಆರ್ಭಟವನ್ನು ಮುಂದುವರಿಸಲಿದೆ ಎಂದು ನಿರೀಕ್ಷಿಸಲಾಗಿದೆ. ಶೌರ್ಯವ್ ನಿರ್ದೇಶನದ ಈ ಚಿತ್ರಕ್ಕೆ ಮಲಯಾಳಂನ ಖ್ಯಾತ ಸಂಗೀತ ಸಂಯೋಜಕ ಹೇಶಾಮ್ ಅಬ್ದುಲ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.
ಚಿತ್ರದಲ್ಲಿ ನಾನಿ, ಮೃಣಾಲ್ ಠಾಕೂರ್, ಬೇಬಿ ಕಿಯಾರಾ, ಜಯರಾಮ್, ಪ್ರಿಯದರ್ಶಿ, ನಾಸರ್, ಅಂಗದ್ ಬೇಡಿ, ವಿರಾಜ್ ಅಶ್ವಿನ್ ಮುಂತಾದವರ ತಾರಾಗಣವಿದೆ,(ಏಜೆನ್ಸೀಸ್).