2 ವರ್ಷದ ಹಿಂದೆ ಬಸ್​ನಲ್ಲಿ ನಟಿಗೆ ಗುಪ್ತಾಂಗ ತೋರಿಸಿ ಅರೆಸ್ಟ್​ ಆಗಿದ್ದ ಯುವಕನಿಂದ ಮತ್ತದೇ ಕೃತ್ಯ! Nandita Shankara

Nandita Shankara
Published on

Nandita Shankara : ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮತ್ತೆ ಬಂಧಿತನಾಗಿರುವ ಸಾವದ್ ವಿರುದ್ಧ 2023ರಲ್ಲೇ ಮಲಯಾಳಂ ನಟಿ ಹಾಗೂ ಮಾಡೆಲ್ ನಟಿ ನಂದಿತಾ ಶಂಕರ ದೂರು ದಾಖಲಿಸಿದ್ದರು. ಆದರೆ, ಅಂದು ಆತನನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು. ಅಲ್ಲದೆ, ಜೈಲಿನಿಂದ ಹೊರಬಂದಾಗ ಅಖಿಲ ಕೇರಳ ಪುರುಷರ ಸಂಘ ಹೂವಿನ ಹಾರ ಹಾಕಿ ಆತನಿಗೆ ಅದ್ಧೂರಿ ಸ್ವಾಗತವನ್ನು ನೀಡಿತ್ತು. ಅದೇ ಆರೋಪಿ ಇಂದು ಲೈಂಗಿಕ ದೌರ್ಜನ್ಯದಲ್ಲಿ ಮತ್ತೆ ಜೈಲು ಪಾಲಾಗಿದ್ದು, ನಂದಿತಾ ಶಂಕರ್​ ಕಾನೂನಿನ ವಿರುದ್ಧ ಬೇಸರ ಹೊರಹಾಕಿದ್ದಾರೆ.

ಈ ತಿಂಗಳ 14 ರಂದು ಮಲಪ್ಪುರಂಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಸಾವದ್ ಮಹಿಳೆಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅದೇ ದಿನ ಸಂತ್ರಸ್ತೆ ತ್ರಿಸ್ಸೂರ್​ ಪೂರ್ವ ಪೊಲೀಸರಿಗೆ ದೂರು ನೀಡಿದ್ದು, ಸಾವದ್​ ಬಂಧನವಾಗಿದೆ. ಈ ಹಿನ್ನೆಲೆಯಲ್ಲಿ ಆತನ ಈ ಹಿಂದಿನ ಪ್ರಕರಣ ಬೆಳಕಿಗೆ ಬಂದಿದೆ.

ನಮ್ಮ ಕಾನೂನು ಬಲವಾಗಿದ್ದರೆ ಮತ್ತೊಬ್ಬ ಸಂತ್ರಸ್ತೆ ಇಂದು ಹುಟ್ಟಿಕೊಳ್ಳುತ್ತಿರಲಿಲ್ಲ ಮತ್ತು ಆ ಸಮಯದಲ್ಲಿ ನಾನು ಅನುಭವಿಸಿದ ಮಾನಸಿಕ ಯಾತನೆ ತುಂಬಾ ದೊಡ್ಡದಾಗಿತ್ತು. ನಾನು ಹೇಳಿದ್ದನ್ನು ಅಂದು ನಂಬಿದ್ದರೆ, ಇಂದು ಇದು ಸಂಭವಿಸುತ್ತಿರಲಿಲ್ಲ. ಕಾನೂನು ಬಲವಾಗಿದ್ದರೆ, ಸಾವಾದ್ ಹೀಗೆ ತಿರುಗಾಡಲು ಸಾಧ್ಯವಾಗುತ್ತಿರಲಿಲ್ಲ. ಬೇರೆ ಸಂತ್ರಸ್ತೆಯರು ಇರುತ್ತಿರಲಿಲ್ಲ. ಇಲ್ಲಿ ಇನ್ನೂ ಅನೇಕ ಸಂತ್ರಸ್ತರಿದ್ದಾರೆ. ಅನೇಕ ಮಂದಿ ನನಗೂ ಸಂದೇಶಗಳನ್ನು ಕಳುಹಿಸಿದ್ದರು. ನಾನು ಕೂಡ ಇಲ್ಲಿ ಸಂತ್ರಸ್ತೆ. ನಾನು ನನ್ನ ಮುಖವನ್ನು ಮರೆಮಾಡುವ ಅಗತ್ಯವಿಲ್ಲ. ಸಾವಾದ್ ಇನ್ನು ಮುಂದೆ ಹೊರಗೆ ಬರಬಾರದು. ಆ ದಿನ ಬಹಳಷ್ಟು ವಿಷಯಗಳು ನಡೆದವು. ನಾನು ಮಾನಸಿಕವಾಗಿ ಒತ್ತಡಕ್ಕೊಳಗಾಗಿದ್ದೆ. ಆ ದಿನ ನಾನು ಇನ್‌ಸ್ಟಾಗ್ರಾಮ್ ತೆರೆಯಲು ಸಹ ಹೆದರುತ್ತಿದ್ದೆ. ಅಂದು ನನಗೆ ನ್ಯಾಯ ಸಿಕ್ಕಿದ್ದರೆ, ಇಂದಿನ ಯಾವುದೇ ಹುಡುಗಿ ತಾನು ಅತ್ಯಾಚಾರದ ಸಂತ್ರಸ್ತೆ ಎಂದು ಭಾವಿಸಿ ಕುಳಿತುಕೊಳ್ಳುತ್ತಿರಲಿಲ್ಲ ಎಂದು ನಂದಿತಾ ಶಂಕರ ಹೇಳಿದ್ದಾರೆ.

ಘಟನೆ ಹಿನ್ನೆಲೆ ಏನು?

ಈ ಘಟನೆ 2023, ಮೇ 16ರ ಮಂಗಳವಾರ ನಡೆದಿತ್ತು. ನಟಿ ಹಾಗೂ ಮಾಡೆಲ್​ ಆಗಿರುವ ನಂದಿತಾ ಶಂಕರ ಅವರು ಇನ್​ಸ್ಟಾಗ್ರಾಂನಲ್ಲಿ ಘಟನೆಯನ್ನು ವಿವರಿಸಿದ್ದರು. ಅವರು ಹೇಳುವ ಪ್ರಕಾರ ಸಿನಿಮಾ ಶೂಟಿಂಗ್​ಗಾಗಿ ಎರ್ನಾಕುಲಂಗೆ ತೆರಳುತ್ತಿದ್ದರಂತೆ. ಈ ವೇಳೆ ಅಂಗಮಾಲಿ ಬಳಿ ಕೊಯಿಕ್ಕೋಡ್​ ಮೂಲದ ಆರೋಪಿ ಸಾವದ್​ ಬಸ್ಸನ್ನು ಏರಿದ್ದ. ಬಳಿಕ ಆತ ಇಬ್ಬರು ಮಹಿಳೆಯರು ಮಧ್ಯೆ ಬಂದು ಕುಳಿತುಕೊಂಡನಂತೆ. ಆ ಇಬ್ಬರು ಮಹಿಳೆಯರಲ್ಲಿ ನಂದಿತಾ ಕೂಡ ಒಬ್ಬರು. ಬಸ್​ ಹೊರಡಲು ಆರಂಭಿಸಿದಾಗ ನಂದಿತಾ ಅವರನ್ನು ಸ್ಪರ್ಶಿಸಲು ಆರಂಭಿಸಿದ್ದಾನಂತೆ. ನಾನು ಕಿಟಕಿ ಪಕ್ಕದಲ್ಲಿ ಕುಳಿತಿದ್ದೆ. ಎಲ್ಲಿಗೆ ಹೋಗುತ್ತಿದ್ದೀರಾ ಎಂದು ಕೇಳಿದ. ಆತ ಕೇಳಿದ ಎಲ್ಲದಕ್ಕೂ ನಾನು ಉತ್ತರಿಸಿದೆ. ನೋಡಲು ಆತ ಒಳ್ಳೆಯವನಂತೆ ಕಾಣುತ್ತಿದ್ದ. ಬಸ್​ ಕೆಲ ದೂರ ಸಾಗಿದ ಕೂಡಲೇ ಆತನ ಕೈ ನನ್ನ ದೇಹವನ್ನು ಸ್ಪರ್ಶಿಸುತ್ತಿರುವಂತೆ ಭಾಸವಾಯಿತು. ನಾನು ಆತನ ಕಡೆ ನೋಡಿದಾಗ ಆತನ ಒಂದು ಕೈ ಆತನ ಖಾಸಗಿ ಅಂಗದ ಮೇಲಿರುವುದನ್ನು ಗಮನಿಸಿದೆ. ಇದರಿಂದ ನನಗೆ ತೀವ್ರ ಮುಜುಗರವಾಯಿತು. ಬಳಿಕ ಬಸ್​ನ ಕಿಟಕಿ ಗಾಜನ್ನು ಮೇಲಕ್ಕೇರಿಸಿ ಆತನಿಂದ ಅಂತರ ಕಾಯ್ದುಕೊಂಡೆ. ಆದರೂ ತನ್ನ ದುಷ್ಕೃತ್ಯ ಮುಂದುವರಿಸಿದ್ದ. ಮತ್ತೆ ನೋಡುವಷ್ಟರಲ್ಲಿ ತನ್ನ ಪ್ಯಾಂಟ್​ ಜಿಪ್​ ತೆರೆದು ಹಸ್ತಮೈಥುನ ಮಾಡಿಕೊಳ್ಳುತ್ತಿದ್ದ. ಈ ಕ್ಷಣದಲ್ಲಿ ಏನು ಮಾಡಬೇಕೆಂದು ತೋಚಲಿಲ್ಲ. ಬಳಿಕ ಮೊಬೈಲ್​ನಲ್ಲಿ ವಿಡಿಯೋ ರೆಕಾರ್ಡ್​ ಮಾಡಿಕೊಂಡು ಏನು ನಿನ್ನ ಸಮಸ್ಯೆ ಎಂದು ಆತನನ್ನು ಪ್ರಶ್ನೆ ಮಾಡಿದೆ. ಪ್ರಶ್ನೆ ಕೇಳುತ್ತಿದ್ದಂತೆಯೇ ಆತ ತಕ್ಷಣ ತನ್ನ ಪ್ಯಾಂಟ್​ ಜಿಪ್​ ಅನ್ನು ಹಾಕಿಕೊಂಡನು. ನಾನು ನನ್ನ ಧ್ವನಿಯನ್ನು ಜೋರು ಮಾಡಿದೆ. ಈ ವೇಳೆ ಬಸ್​ ಸಿಬ್ಬಂದಿ ಬಳಿ ಬಂದರು. ನಡೆದ ಘಟನೆಯನ್ನು ಅವರ ಮುಂದೆ ವಿವರಿಸಿದೆ. ದೂರು ನೀಡುತ್ತೀರಾ ಎಂದು ಬಸ್​ ಕಂಡಕ್ಟರ್​ ಪ್ರಶ್ನಿಸಿದರು. ನಾನು ಹೌದು ಎಂದೆ. ಈ ವೇಳೆ ಆರೋಪಿ ತನ್ನ ಪ್ಯಾಂಟ್​ ಜಿಪ್​ ಓಪನ್​ ಆಗಿಲ್ಲ ಎಂದು ವಾದಿಸಿದನು. ಬಸ್​, ವಿಮಾನ ನಿಲ್ದಾಣದ ಹತ್ತಿರ ನಿಲ್ಲುತ್ತಿದ್ದಂತೆ ಹಾಗೂ ಬಸ್​ನ ಬಾಗಿಲು ತೆರೆಯುತ್ತಿದ್ದಂತೆ ಆತ ಓಡಿ ಹೋದ. ಬಳಿಕ ಕಂಡಕ್ಟರ್​ ಮತ್ತು ಡ್ರೈವರ್ ಸ್ಥಳೀಯರ ನೆರವಿನಿಂದ​ ಚೇಸ್​ ಮಾಡಿ ಹಿಡಿದರು ಎಂದು ನಂದಿತಾ ವಿಡಿಯೋದಲ್ಲಿ ವಿವರಿಸಿದ್ದರು.

ದೂರು ನೀಡಿದ ಬೆನ್ನಲ್ಲೇ ಸಾವದ್​ನನ್ನು ಬಂಧಿಸಲಾಗಿತ್ತು. ಈ ಸಾವದ್​ ಈತ ಕೋಯಿಕ್ಕೊಡ್​ನ ಕಯಾಕೋಡಿ ನಿವಾಸಿ. ಬಂಧನವಾದ ಕೆಲವೇ ದಿನಗಳಲ್ಲಿ ಆರೋಪಿ ಸಾವದ್​ ಅಲುವಾ ಉಪ ಕಾರಾಗೃಹದಿಂದ ಬಿಡುಗಡೆಯಾದನು. ಈ ವೇಳೆ ಪುರುಷರ ಸಂಘದ ಸದಸ್ಯರು ಹೂವಿನ ಹಾರ ಹಾಕಿ ಬರಮಾಡಿಕೊಂಡು ಆತನಿಗೆ ಧೈರ್ಯ ತುಂಬಿದ್ದರು. ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್​ ಆಗಿತ್ತು. ಸಾಮಾಜಿಕ ಜಾಲತಾಣದಲ್ಲಿ ಫಾಲೋವರ್ಸ್​ ಸಂಖ್ಯೆ ಹೆಚ್ಚಿಸಿಕೊಳ್ಳಲು ಸಾವದ್​ ಮೇಲೆ ಸುಳ್ಳು ಆರೋಪ ಮಾಡಿದ್ದಾರೆ ಎಂದು ನಂದಿತಾ ಶಂಕರ ವಿರುದ್ಧವೇ ಕೆಲವರು ಆರೋಪ ಮಾಡಿದ್ದರು. ಆದರೆ, ಇದೀಗ ಸಾವದ್​ ಮತ್ತೆ ಲೈಂಗಿಕ ದೌರ್ಜನ್ಯ ಆರೋಪದಡಿಯಲ್ಲಿ ಬಂಧನವಾಗಿದ್ದು, ನಂದಿತಾ ಶಂಕರ್​ ನಮ್ಮ ಕಾನೂನು ವ್ಯವಸ್ಥೆಯ ವಿರುದ್ಧ ಬೇಸರ ಹೊರಹಾಕಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net