

ಜಾರ್ಖಂಡ್ನಲ್ಲಿ ಇಂದು ಮೊದಲ ಹಂತದ ಮತದಾನ ನಡೆಯಲಿದ್ದರೆ, ಮಹಾರಾಷ್ಟ್ರದಲ್ಲಿ ನ.20ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಜಾರ್ಖಂಡ್ - ಮಹಾರಾಷ್ಟ್ರದಲ್ಲಿ ಸರಣಿ ರ್ಯಾಲಿಗಳು ನಡೆಯುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ, ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ನಡುವೆ ಮಹಾ ವಾಕ್ಸಮರ ನಡೆದಿದೆ.
ನವದೆಹಲಿ: ಮಹಾರಾಷ್ಟ್ರ ಚುನಾವಣೆ ಜಿದ್ದಾಜಿದ್ದಿ ಜೋರಾಗಿದ್ದು, ವಿಪಕ್ಷಗಳ ಮಹಾ ವಿಕಾಸ್ ಅಘಾಡಿ ಮೈತ್ರಿಕೂಟದಲ್ಲಿರುವವರು ಭ್ರಷ್ಟಾಚಾರದ ದೊಡ್ಡ ಆಟಗಾರರು ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ.
ಮಹಾರಾಷ್ಟ್ರದ ಚಂದ್ರಾಪುರದ ಚಿಮೂರ್ನಲ್ಲಿ ಸಾರ್ವಜನಿಕ ರ‍್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ಮಹಾರಾಷ್ಟ್ರದ ಕ್ಷಿಪ್ರ ಅಭಿವೃದ್ಧಿ ಅಘಾಡಿ ಕಲ್ಪನೆಗೂ ಮೀರಿದೆ. ಮಹಾ ವಿಕಾಸ್ ಅಘಾಡಿ ಅಭಿವೃದ್ಧಿ ಮುರಿಯುವಲ್ಲಿ ಪಿಎಚ್ಡಿ ಮಾಡಿದ್ದಾರೆ. ಕಾಂಗ್ರೆಸ್ ಅಂತೂ ಅದರಲ್ಲಿ ಡಬಲ್ ಪಿಎಚ್ಡಿ ಮಾಡಿದೆ. ಪ್ರಸ್ತುತ ಮಹಾಯುತಿ ಡಬಲ್ ಇಂಜಿನ್ ಸರ್ಕಾರದಿಂದ ಹಲವು ಅದ್ಭುತಗಳನ್ನು ಮಹಾರಾಷ್ಟ್ರ ಕಂಡಿದೆ. ಕಳೆದ ಎರಡೂವರೆ ವರ್ಷಗಳಲ್ಲಿ ಅಭಿವೃದ್ಧಿಯ ದ್ವಿಗುಣ ವೇಗ ನೀವು ನೋಡಿದ್ದೀರಿ. ಅತಿ ಹೆಚ್ಚು ವಿದೇಶಿ ಹೂಡಿಕೆ ಹೊಂದಿರುವ ರಾಜ್ಯ ಮಹಾರಾಷ್ಟ್ರ. ಹೊಸ ವಿಮಾನ ನಿಲ್ದಾಣ ಮತ್ತು ಎಕ್ಸ್ಪ್ರೆಸ್ವೇ ನಿರ್ವಣಗೊಂಡಿವೆ. ಒಂದು ಡಜನ್ ವಂದೇ ಭಾರತ್ ರೈಲುಗಳು ಓಡುತ್ತಿವೆ ಮತ್ತು ನೂರಕ್ಕೂ ಹೆಚ್ಚು ರೈಲು ನಿಲ್ದಾಣಗಳನ್ನು ಪರಿವರ್ತಿಸಲಾಗುತ್ತಿದೆ. ಚಂದ್ರಾಪುರದ ಜನರು ರೈಲು ಸಂಪರ್ಕಕ್ಕೆ ಹಲವು ವರ್ಷಗಳಿಂದ ಬೇಡಿಕೆ ಸಲ್ಲಿಸುತ್ತಿದ್ದಾರೆ, ಆದರೆ ಕಾಂಗ್ರೆಸ್ ಮತ್ತು ಅಘಾಡಿ ಅದಕ್ಕೆ ಅವಕಾಶ ನೀಡಲಿಲ್ಲ ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ಜನರನ್ನು ಜಾತಿ ಆಧಾರದ ಮೇಲೆ ವಿಭಜಿಸಲು ಬಯಸಿದೆ. ಆದರೆ, ದೇಶ ಮತ್ತು ತಮ್ಮ ಏಳಿಗೆಗಾಗಿ ಜನರು ಒಗ್ಗಟ್ಟಿನಿಂದ ಇರಬೇಕು. ನೀವು ಒಗ್ಗಟ್ಟಿನಿಂದ ಉಳಿಯದಿದ್ದರೆ ಕಾಂಗ್ರೆಸ್ ನಿಮ್ಮ ಕೋಟಾಗಳನ್ನು ಕಸಿದುಕೊಳ್ಳಲಿದೆ ಎಂದು ಪ್ರಧಾನಿ ಎಚ್ಚರಿಕೆ ನೀಡಿದರು.
ದೇಶದಲ್ಲಿ ಬುಡಕಟ್ಟು ಜನಸಂಖ್ಯೆ ಶೇ.10ರಷ್ಟಿದೆ ಮತ್ತು ಕಾಂಗ್ರೆಸ್ ಆದಿವಾಸಿ ಸಮುದಾಯವನ್ನು ಜಾತಿಗಳಾಗಿ ವಿಂಗಡಿಸಿ ದುರ್ಬಲಗೊಳಿಸಲು ಬಯಸಿದೆ. ಆದಿವಾಸಿ ಸಮುದಾಯ ಜಾತಿಗಳಾಗಿ ವಿಭಜನೆಯಾದರೆ ಅದು ತನ್ನ ಅಸ್ಮಿತೆ-ಶಕ್ತಿ ಕಳೆದುಕೊಳ್ಳಲಿದೆ. ಕಾಂಗ್ರೆಸ್ ಯುವರಾಜ (ರಾಹುಲ್ ಗಾಂಧಿ) ವಿದೇಶದಲ್ಲಿ ಇದನ್ನು ಘೊಷಿಸಿದ್ದಾರೆ. ಹಾಗಾಗಿ ನಾವು ಕಾಂಗ್ರೆಸ್ ಪಿತೂರಿಯ ಭಾಗವಾಗಬೇಕಾಗಿಲ್ಲ ಮತ್ತು ಒಗ್ಗಟ್ಟಿನಿಂದ ಇರಬೇಕಾಗಿದೆ ಎಂದು ಮೋದಿ ಕರೆ ನೀಡಿದ್ದಾರೆ.
ಸ್ವಾತಂತ್ರ್ಯದ ನಂತರ ಕಾಂಗ್ರೆಸ್ ದಲಿತರು, ಹಿಂದುಳಿದ ವರ್ಗಗಳು, ಆದಿವಾಸಿಗಳು ಪ್ರಗತಿಗೆ ಅವಕಾಶ ನೀಡಲಿಲ್ಲ. ಮೀಸಲಾತಿ ವಿಷಯದ ಬಗ್ಗೆ ಕಾಂಗ್ರೆಸ್ ಸಿಟ್ಟಿಗೆದ್ದಿದೆ. 1980ರ ದಶಕದಲ್ಲಿ, ರಾಜೀವ್ ಗಾಂಧಿ ಅವರು ಪಕ್ಷವನ್ನು ಮುನ್ನಡೆಸಿದಾಗ, ದಲಿತರು, ಹಿಂದುಳಿದ ವರ್ಗಗಳು ಮತ್ತು ಆದಿವಾಸಿಗಳು ಅನುಭವಿಸುವ ವಿಶೇಷ ಹಕ್ಕುಗಳ ಬಗ್ಗೆ ಪ್ರಶ್ನೆಗಳನ್ನು ಎತ್ತುವ ಜಾಹೀರಾತನ್ನು ಪ್ರಕಟಿಸಿತ್ತು ಎಂದೂ ನೆನಪಿಸಿದರು.
ಭ್ರಷ್ಟರಿಗೆ ಗಲ್ಲುಶಿಕ್ಷೆ ಖಚಿತ: ಜಾರ್ಖಂಡ್ನಲ್ಲಿ ಹಣ ಲೂಟಿ ಮಾಡಿದವರನ್ನು ಗಲ್ಲಿಗೇರಿಸಲಾ ಗುವುದು ಎಂದು ಗೃಹ ಸಚಿವ ಅಮಿತ್ ಷಾ ಆಡಳಿತಾರೂಢ ಜೆಎಂಎಂ ಮೈತ್ರಿಕೂಟಕ್ಕೆ ಎಚ್ಚರಿಕೆ ನೀಡಿದ್ದಾರೆ. ಜಾರ್ಖಂಡ್ನ ಜರಿಯಾದಲ್ಲಿ ಚುನಾವಣೆ ಸಭೆ ಉದ್ದೇಶಿಸಿ ಮಾತನಾಡಿದ ಷಾ, ಇಲ್ಲಿ ಕಾಂಗ್ರೆಸ್-ಜೆಎಂಎಂ ನಾಯಕರಿಂದ ಕೋಟ್ಯಂತರ ರೂಪಾಯಿ ವಶಪಡಿಸಿಕೊಳ್ಳಲಾಗಿದೆ. ಈ ಹಣವೆಲ್ಲ ಜರಿಯಾ ಮತ್ತು ಧನ್ಬಾದ್ನ ಯುವಕರು, ತಾಯಂದಿರು ಮತ್ತು ಸಹೋದರಿಯರಿಗೆ ಸೇರಿದೆ. ನೀವು ಬಿಜೆಪಿ ಸರ್ಕಾರ ರಚನೆಗೆ ನೆರವಾದರೆ, ಈ ಕೋಟಿ ರೂಪಾಯಿಗಳ ಲೂಟಿಕೋರರನ್ನು ನಾವು ನೇಣಿಗೇರಿಸುತ್ತೇವೆ. ಜಾರ್ಖಂಡ್ನ ಬಡ ಆದಿವಾಸಿಗಳು, ಹಿಂದುಳಿದ ವರ್ಗಗಳು ಮತ್ತು ಯುವಕರಿಂದ ಲೂಟಿ ಮಾಡಿದ ಹಣವನ್ನು ಅವರಿಂದ ವಸೂಲಿ ಮಾಡಲಾಗುವುದು ಮತ್ತು ಜಾರ್ಖಂಡ್ನ ಖಜಾನೆಯಲ್ಲಿ ಠೇವಣಿ ಇಡಲಾಗುವುದು ಎಂದು ಭರವಸೆ ನೀಡಿದ್ದಾರೆ. ಕಾಂಗ್ರೆಸ್ನ ರಾಹುಲ್ ಬಾಬಾ ಈಡೇರಿಸದ ಅನೇಕ ಘೊಷಣೆಗಳನ್ನು ಮಾಡುತ್ತಾರೆ. ಈಗ ನೀವೂ ಏನೂ ಆಗಿಲ್ಲ ಎಂದು ಹೇಳುತ್ತಿದ್ದೀರಿ ಮತ್ತು ರಾಹುಲ್ ಬಾಬಾ ಪಕ್ಷದ ಅಧ್ಯಕ್ಷ ಖರ್ಗೆ ಜೀ ಕೂಡ ಏನೂ ಈಡೇರುವುದಿಲ್ಲ ಎಂದು ಹೇಳುತ್ತಿದ್ದಾರೆ. ಆದರೆ ಮೋದಿಯವರ ಭರವಸೆ ಕಲ್ಲಿನಲ್ಲಿ ಕೆತ್ತಲಾಗಿದೆ. ನಾವು ಪ್ರತಿ ಭರವಸೆ ಈಡೇರಿಸುತ್ತೇವೆ ಎಂದು ತಿಳಿಸಿದರು.
ಭಾವನೆ ಸಮಾಧಿ ಮಾಡಿದ ಖರ್ಗೆ: ಸಾಧುಗಳ ವೇಷದಲ್ಲಿರುವ ರಾಜಕೀಯ ನಾಯಕರು ಎಂದು ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಬಗ್ಗೆ ಪರೋಕ್ಷ ಟೀಕೆ ಮಾಡಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರಿಗೆ ಮಹಾರಾಷ್ಟ್ರದ ಅಮರಾವತಿಯಲ್ಲಿ ಯೋಗಿ ತಿರುಗೇಟು ನೀಡಿದ್ದಾರೆ. ನೀವು ನನ್ನ ಮೇಲೆ ಕೋಪಗೊಳ್ಳಬೇಡಿ. ನಾನು ನಿಮ್ಮ ವಯಸ್ಸನ್ನು ಗೌರವಿಸುತ್ತೇನೆ ಕೋಪಗೊಳ್ಳುವುದಾದರೆ ಹೈದರಾಬಾದ್ ನಿಜಾಮನ ಮೇಲೆ ಕೋಪಗೊಳ್ಳಿ. ನಿಜಾಮನ ರಜಾಕರು ನಿಮ್ಮನ್ನು ಸುಟ್ಟುಹಾಕಿದರು. ಹಳ್ಳಿ, ಹಿಂದೂಗಳನ್ನು ಕ್ರೂರವಾಗಿ ಕೊಂದು, ನಿಮ್ಮ ಗೌರವಾನ್ವಿತ ತಾಯಿ-ಸಹೋದರಿ, ಕುಟುಂಬದ ಸದಸ್ಯರನ್ನು ಸುಟ್ಟುಹಾಕಿದ್ದರು. ಈ ಸತ್ಯವನ್ನು ದೇಶದ ಮುಂದೆ ಪ್ರಸ್ತುತಪಡಿಸಿ ಎಂದು ಯೋಗಿ ಸವಾಲು ಹಾಕಿದರು.
ಮೋದಿ ಸಂವಿಧಾನ ಓದಿಲ್ಲ: ದೇಶದ ಸಂವಿಧಾನವನ್ನು ನಾಶ ಮಾಡಲು ಬಿಜೆಪಿ ಮತ್ತು ಆರ್ಎಸ್ಎಸ್ ಹಗಲಿರುಳು ಶ್ರಮಿಸುತ್ತಿವೆ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಮತ್ತೆ ಆರೋಪ ಮಾಡಿದ್ದಾರೆ. ಮಹಾರಾಷ್ಟ್ರದ ಗೊಂಡಿಯಾದಲ್ಲಿ ಚುನಾವಣೆ ಸಭೆ ಉದ್ದೇಶಿಸಿ ಭಾಷಣ ಮಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಸಂವಿಧಾನವನ್ನು ಓದಿಲ್ಲ ಎಂದು ಖಾತರಿಯೊಂದಿಗೆ ಹೇಳಬಹುದು, ಇಲ್ಲದಿದ್ದರೆ ಅದರಲ್ಲಿ ದಾಖಲಾಗಿರುವುದನ್ನು ಅವರು ಗೌರವಿಸುತ್ತಿದ್ದರು. ಕಳೆದ 10 ವರ್ಷಗಳಲ್ಲಿ ಎಷ್ಟು ರೈತರ ಸಾಲ ಮನ್ನಾ ಮಾಡಿದ್ದಾರೆ ಎಂದು ಜನ ಮೋದಿಯವರನ್ನು ಪ್ರಶ್ನಿಸಬೇಕು. ನಾವು ಅಧಿಕಾರಕ್ಕೆ ಬಂದರೆ ಮಹಾರಾಷ್ಟ್ರದ ಸೋಯಾಬೀನ್, ಹತ್ತಿ ಬೆಳೆಗಾರರು ತಮ್ಮ ಬೆಳೆಗಳಿಗೆ ಸರಿಯಾದ ಬೆಲೆ ಪಡೆಯಲಿದ್ದಾರೆ. ಬಡವರಿಗೆ ಆರೋಗ್ಯ ವಿಮೆ ಸಿಗಲಿದೆ ಎಂದು ಭರವಸೆ ನೀಡಿದರು.
ಬಡವರಿಗೆ ನೆರವು: ಬಿಜೆಪಿ ತನ್ನ ಕೋಟ್ಯಧಿಪತಿ ಸ್ನೇಹಿತ ರಿಗೆ ನೀಡುವುದಕ್ಕಿಂತ ಹೆಚ್ಚಿನ ಹಣ ವನ್ನು ಇಂಡಿಯಾ ಮೈತ್ರಿಕೂಟವು ಮಹಿಳೆಯರು, ಯುವಕರು, ರೈತರು, ಬಡವರಿಗೆ ನೀಡಲಿದೆ ಎಂದು ರಾಹುಲ್ ಜಾರ್ಖಂಡ್ ಮತದಾರರಲ್ಲಿ ಹೇಳಿದ್ದಾರೆ. ಮಹಿಳೆ ಯರಿಗೆ ನೀಡುವ ಗೌರವಧನ ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದ ಅವರು ಅವರಿಗೆ ತಮ್ಮ ಅಗತ್ಯ ಪೂರೈಸಲು 2,500 ರೂ. ನೀಡಲಾಗುವುದು. ಇದರಿಂದ ರಾಜ್ಯದ 53 ಲಕ್ಷ ಮಹಿಳೆಯರಿಗೆ ಅನುಕೂಲವಾಗಲಿದೆ ಎಂದು ಜಾಲತಾಣದಲ್ಲಿ ತಿಳಿಸಿದ್ದಾರೆ.
ಉಚಿತ ಯೋಜನೆ ಗೆಲುವಿನ ವಿಶ್ವಾಸ: ಗೃಹಲಕ್ಷ್ಮಿ ಯೋಜನೆ ಅಡಿ ಕರ್ನಾಟಕದ 1.22 ಕೋಟಿ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ವಾರ್ಷಿಕ 25,407 ಕೋಟಿ ರೂ. ಜಮೆ ಮಾಡಲಾಗಿದೆ. ಹಾಗೇ ಅನ್ನಭಾಗ್ಯ, ಗೃಹಜ್ಯೋತಿ ಯೋಜನೆಯಡಿ ಕೋಟ್ಯಂತರ ರೂಪಾಯಿ ವರ್ಗಾಯಿಸಲಾಗಿದೆ. ಶಕ್ತಿ ಯೋಜನೆಯಡಿ ಉಚಿತ ಬಸ್ ಪ್ರಯಾಣಕ್ಕೆ 2023ರ ಮೇನಿಂದ 7,310 ಕೋಟಿ ರೂ. ವೆಚ್ಚ ಮಾಡಲಾಗಿದೆ. ಹೀಗಾಗಿ ಉಪ ಚುನಾವಣೆಯಲ್ಲಿ ಜನ ಕಾಂಗ್ರೆಸ್ ಹಿಡಿಯುವ ವಿಶ್ವಾಸವಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಮಾಹಿತಿ ಹಂಚಿಕೊಂಡಿದ್ದಾರೆ.