

ದೆಹಲಿಯಲ್ಲಿ ಅಮ್ ಆದ್ಮಿ ಪಕ್ಷವು ಜಾರಿಗೆ ತಂದ ಮೊಹಲ್ಲಾ ಕ್ಲಿನಿಕ್ಗಳು ಸಾಕಷ್ಟು ಸದ್ದು ಮಾಡಿ ಪ್ರಚಾರ ಪಡೆದುಕೊಂಡಿವೆ. ಕರ್ನಾಟಕದಲ್ಲಿಯೂ ನಮ್ಮ ಕ್ಲಿನಿಕ್ಗಳನ್ನು ಆರಂಭಿಸುವುದಾಗಿ ಕೆಲ ದಿನಗಳ ಹಿಂದೆಯಷ್ಟೇ ಘೋಷಣೆ ಮಾಡಿದ್ದ ರಾಜ್ಯ ಸರ್ಕಾರವು ತನ್ನ ಭರವಸೆಯನ್ನು ತ್ವರಿತಗತಿಯಲ್ಲಿ ಈಡೇರಿಸಲು ಕ್ರಮ ಈಗ ಕೈಗೊಂಡಿದೆ. ರಾಜ್ಯದಾದ್ಯಂತ 114 ‘ನಮ್ಮ ಕ್ಲಿನಿಕ್’ಗಳಿಗೆ ಬುಧವಾರ ಏಕಕಾಲದಲ್ಲಿ ಚಾಲನೆ ನೀಡುತ್ತಿರುವುದು ಬಡವರಿಗೆ ಉಚಿತ ಆರೋಗ್ಯ ಸೇವೆ ಕಲ್ಪಿಸುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯಾಗಿದೆ. ಬಡ ಹಾಗೂ ಮಧ್ಯಮ ವರ್ಗದವರಿಗೆ ಸ್ಥಳೀಯವಾಗಿ ಆರೋಗ್ಯ ಸೇವೆ ಒದಗಿಸಲು 150 ಕೋಟಿ ರೂಪಾಯಿ ವೆಚ್ಚದಲ್ಲಿ 438 ಕ್ಲಿನಿಕ್ಗಳನ್ನು ರಾಜ್ಯದಾದ್ಯಂತ ತೆರೆಯಲಾಗುತ್ತಿದ್ದು, ಮೊದಲ ಹಂತದಲ್ಲಿ 114 ಕ್ಲಿನಿಕ್ಗಳನ್ನು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಆರಂಭಿಸಲಾಗುತ್ತಿದೆ. ನಂತರ ಜನವರಿ ತಿಂಗಳಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 300ಕ್ಕೂ ಅಧಿಕ ಕ್ಲಿನಿಕ್ಗಳನ್ನು ತೆರೆಯಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
ಪ್ರತಿ 20 ಸಾವಿರ ಜನರಿಗೆ ಒಂದರಂತೆ ನಮ್ಮ ಕ್ಲಿನಿಕ್ ಆರಂಭಿಸಲಾಗುತ್ತಿದೆ. ಮಧುಮೇಹ, ರಕ್ತದೊತ್ತಡ ಚೆಕ್ ಅಪ್, ಸಾಂಕ್ರಾಮಿಕ ರೋಗಗಳ ನಿರ್ವಹಣೆ, ಗರ್ಭಿಣಿ ಆರೈಕೆ ಸೇರಿದಂತೆ 12 ಪ್ರಮುಖ ಸೇವೆಗಳನ್ನು ಇಲ್ಲಿ ಒದಗಿಸಲು ಉದ್ದೇಶಿಸಲಾಗಿದೆ. ಚಿಕಿತ್ಸೆ ಜತೆಗೆ ಪ್ರಯೋಗಾಲಯ ಸೇವೆಗಳು ಹಾಗೂ ಔಷಧಿಗಳನ್ನು ಕೂಡ ಸಂಪೂರ್ಣ ಉಚಿತ ಒದಗಿಸುತ್ತಿರುವುದು ವಿಶೇಷವಾಗಿದೆ. ಈಗ ಜಿಲ್ಲಾ ಕೇಂದ್ರಗಳಲ್ಲಿ ಜಿಲ್ಲಾ ಆಸ್ಪತ್ರೆ, ವೈದ್ಯಕೀಯ ಕಾಲೇಜುಗಳಿವೆ. ಮಹಾನಗರ ಪಾಲಿಕೆ, ನಗರಪಾಲಿಕೆ ಮುಂತಾದ ಸ್ಥಳೀಯ ಸಂಸ್ಥೆಗಳ ಮೂಲಕ ಬಡಜನರಿಗೆ ಉಚಿತವಾಗಿ ಆರೋಗ್ಯ ಸೇವೆಗಳನ್ನು ಒದಗಿಸಲಾಗುತ್ತಿದೆ. ತಾಲೂಕು ಮಟ್ಟದಲ್ಲಿ ತಾಲೂಕು ಆಸ್ಪತ್ರೆಗಳಿವೆ. ಗ್ರಾಮೀಣ ಭಾಗಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. ಇವುಗಳ ಮೂಲಕವಾಗಿ ಜನರಿಗೆ ಉಚಿತ ಆರೋಗ್ಯ ಸೇವೆಯನ್ನು ಈಗಾಗಲೇ ಒದಗಿಸಲಾಗುತ್ತಿದೆ. ಈ ವೈದ್ಯಕೀಯ ಸೇವೆಗಳ ಸಾಲಿಗೆ ಈಗ ‘ನಮ್ಮ ಕ್ಲಿನಿಕ್’ ಮಹತ್ತರ ಸೇರ್ಪಡೆಯಾಗಿದೆ. ಪ್ರಸ್ತುತವಾಗಿ ಕರ್ನಾಟಕದ ಜನಸಂಖ್ಯೆ 6.5 ಕೋಟಿ ದಾಟಿದೆ. ಸಚಿವರೇ ಹೇಳಿರುವಂತೆ ಪ್ರತಿ 20 ಸಾವಿರ ಜನಸಂಖ್ಯೆಗೆ ಒಂದು ಕ್ಲಿನಿಕ್ ಎಂದು ಲೆಕ್ಕ ಹಾಕಿದರೆ ರಾಜ್ಯದಾದ್ಯಂತ 3250 ಕ್ಲಿನಿಕ್ಗಳನ್ನು ತೆರೆಯಬೇಕಾಗುತ್ತದೆ.
ಇದಷ್ಟೇ ಅಲ್ಲದೆ, ಮಹಿಳೆಯರಿಗೆ ಪ್ರತ್ಯೇಕ ಹಾಗು ಗುಣಮಟ್ಟದ ವೈದ್ಯಕೀಯ ಸೇವೆ ಒದಗಿಸಲು ರಾಜ್ಯಾದ್ಯಂತ 250 ‘ಆಯುಷ್ಮತಿ ಕ್ಲಿನಿಕ್’ಗಳನ್ನು ಪ್ರಾರಂಭಿಸುವ ನಿಟ್ಟಿನಲ್ಲಿ ಸರ್ಕಾರ ಯೋಜನೆ ರೂಪಿಸುತ್ತಿದೆ. ಇಲ್ಲಿ ಹಲವು ಬಗೆಯ ಆರೋಗ್ಯ ಸೇವೆಗಳು ದೊರಕಲಿವೆ. ಮಕ್ಕಳಿಲ್ಲದ ಬಡಮಧ್ಯಮ ಕುಟುಂಬಗಳಿಗೆ ನೆರವಾಗುವ ದೃಷ್ಟಿಯಿಂದ ದೇಶದಲ್ಲೇ ಮೊದಲ ಬಾರಿ ಸರ್ಕಾರಿ ಫರ್ಟಿಲಿಟಿ ಕೇಂದ್ರಗಳನ್ನು ಆರಂಭಿಸುವ ಯೋಚನೆಯೂ ಸರ್ಕಾರಕ್ಕಿದೆ. ಇವೆರಡೂ ಪ್ರಸ್ತಾವಿತ ಹೊಸ ಯೋಜನೆಗಳಿಂದ ಪ್ರಮುಖವಾಗಿ ಮಹಿಳೆಯರಿಗೆ ಹಾಗೂ ಕಾಪೋರೇಟ್ ಆಸ್ಪತ್ರೆಗಳಲ್ಲಿ ದುಬಾರಿ ವೆಚ್ಚ ಭರಿಸಲಾಗದ ಬಡ ಕುಟುಂಬಗಳಿಗೆ ನೆರವಾಗಲಿದೆ.
ಸರ್ಕಾರಿ ಆಸ್ಪತ್ರೆಗಳಲ್ಲಿ ನೀಡಲಾಗುವ ವೈದ್ಯಕೀಯ ಸೇವೆ ಹಾಗೂ ಸೌಲಭ್ಯಗಳ ಗುಣಮಟ್ಟದ ಬಗೆಗೆ ಸಾರ್ವಜನಿಕರಿಗೆ ಸಾಕಷ್ಟು ಅನುಮಾನಗಳು ಇದ್ದೇ ಇರುತ್ತವೆ. ಸರ್ಕಾರಿ ಆಸ್ಪತ್ರೆಗಳಲ್ಲಿನ ಸಿಬ್ಬಂದಿ ಕಾರ್ಯವೈಖರಿಯ ಬಗೆಗೂ ಅಸಮಾಧಾನ, ಟೀಕೆ ಟಿಪ್ಪಣಿಗಳು ಕೇಳಿಬರುವುದು ಸಹಜವಾಗಿದೆ. ಆದರೆ, ಕಟ್ಟುನಿಟ್ಟಿನ ವ್ಯವಸ್ಥೆ ರೂಪಿಸಿದರೆ ಹಾಗೂ ಸಿಬ್ಬಂದಿಯಲ್ಲಿ ಸೇವಾ ಮನೋಭಾವ ಧೋರಣೆಯನ್ನು ಬೆಳೆಸಿದರೆ ಹೊಸ ಯೋಜನೆಗಳು ಯಶಸ್ಸನ್ನು ಕಂಡು, ಬಡವರಿಗೆ ಉತ್ತಮ ಸೇವೆ ಲಭ್ಯವಾಗಲಿದೆ.