ತಡರಾತ್ರಿ ಕಳೆದರೂ ಹೋಟೆಲ್ ಓಪನ್; ಬೆಳಗಿನ ಜಾವ 3.30ರ ವರೆಗೂ ವಹಿವಾಟು: ಎಲ್ಲಿ, ಏಕೆ, ಎಷ್ಟು ದಿನ?

Hotel
Published on

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿನ ಎಲ್ಲ ಹೋಟೆಲ್​-ರೆಸ್ಟೋರೆಂಟ್​ಗಳು ತಡರಾತ್ರಿ ಕಳೆದರೂ ತೆರೆದೇ ಇರಲಿದ್ದು, ಬೆಳಗಿನ ಜಾವ 3.30ರ ವರೆಗೂ ವಹಿವಾಟು ನಡೆಸಲಿವೆ. ಈ ಕುರಿತಂತೆ ಹಿರಿಯ ಪೊಲೀಸ್ ಅಧಿಕಾರಿಯೇ ಆದೇಶ ಹೊರಡಿಸಿದ್ದಾರೆ.

ಫಿಫಾ ವಿಶ್ವಕಪ್ ಫುಟ್‌ಬಾಲ್ ಸೆಮಿ ಫೈನಲ್ ಪಂದ್ಯಾವಳಿ ನಡೆಯಲಿರುವ ಪ್ರಯುಕ್ತ ನಗರದ ಹೋಟೆಲ್, ರೆಸ್ಟೋರೆಂಟ್‌ಗಳ ವಹಿವಾಟು ಅವಧಿಯನ್ನು ಎರಡು ದಿನಗಳ ಮಟ್ಟಿಗೆ ಅಂದರೆ ಬುಧವಾರ ಮತ್ತು ಗುರುವಾರ ಮುಂಜಾನೆ 3.30ರ ವರೆಗೆ ವಿಸ್ತರಿಸಲಾಗಿದೆ.

ನಗರದ ಹೆಚ್ಚುವರಿ ಪೊಲೀಸ್ ಆಯುಕ್ತ(ಆಡಳಿತ) ಡಾ.ಎ.ಸುಬ್ರಮಣ್ಯೇಶ್ವರರಾವ್, ಮಂಗಳವಾರ ಈ ಆದೇಶ ಹೊರಡಿಸಿದ್ದಾರೆ. ಫೆಡರೇಷನ್ ಆಫ್ ಕ್ಲಬ್ಸ್ ಕರ್ನಾಟಕ ಸಲ್ಲಿಸಿದ್ದ ಮನವಿಯನ್ನು ಪರಿಗಣಿಸಿ, ಅಬಕಾರಿ ಕಾಯ್ದೆ ಮತ್ತು ಶಬ್ದಮಾಲಿನ್ಯದ ಬಗ್ಗೆ ಇರುವ ಮಾರ್ಗಸೂಚಿಗಳನ್ನು ಪಾಲಿಸುವ ಷರತ್ತು ವಿಧಿಸಿ ವ್ಯಾಪಾರದ ಅವಧಿಯನ್ನು ಹಾಲಿ ಇರುವ ಮುಂಜಾನೆ 1 ಗಂಟೆಯಿಂದ ಮುಂಜಾನೆ 3.30ರ ವರೆಗೆ ವಿಸ್ತರಿಸಲಾಗಿದೆ.

ಈ ಆದೇಶವು ಬೆಂಗಳೂರು ನಗರದ ಎಲ್ಲ ಪೊಲೀಸ್ ಠಾಣೆಗಳ ವ್ಯಾಪ್ತಿಯ ತಿಂಡಿ-ತಿನಿಸು ಒದಗಿಸುವ ಹೋಟೆಲ್- ರೆಸ್ಟೋರೆಂಟ್‌ಗಳು ಇರುವ ಸ್ಥಳಗಳಿಗೆ ಅನ್ವಯ ಆಗಲಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ರೈಲು ನಿಲ್ದಾಣ ಮತ್ತು ಬಸ್ ನಿಲ್ದಾಣಗಳಿಗೆ ಈ ಆದೇಶ ಅನ್ವಯವಾಗುವುದಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net