'ಸತ್ತವಳು' 6 ವರ್ಷಗಳ ಬಳಿಕ 2ನೇ ಗಂಡನೊಂದಿಗೆ ಪತ್ತೆ!; ಈಕೆಯ ಕೊಲೆ ಪ್ರಕರಣ ಭೇದಿಸಿದ್ದ ಪೊಲೀಸರಿಗೆ ಸಿಕ್ಕಿತ್ತು ಬಹುಮಾನ!

Pub crime
Published on

ರಾಜಸ್ಥಾನ: ಗಂಡ, ಮನೆಯವರಷ್ಟೇ ಅಲ್ಲ, ಪೊಲೀಸರ ಪ್ರಕಾರವೂ ಈಕೆ ಸತ್ತು ಹೋಗಿದ್ದಳು. ಹೀಗೆ ಸತ್ತು ಹೋಗಿದ್ದಳೆನ್ನಲಾದ ಮಹಿಳೆ ಆರು ವರ್ಷಗಳ ಬಳಿಕ ಎರಡನೇ ಗಂಡನ ಜತೆ ಪತ್ತೆಯಾದ ಅಪರೂಪದ ಪ್ರಕರಣವೊಂದು ವರದಿಯಾಗಿದೆ.

ಹೀಗೆ ಪತ್ತೆಯಾದವಳ ಹೆಸರು ಆರತಿ ದೇವಿ. ರಾಜಸ್ಥಾನದ ಈ ಮಹಿಳೆ ಸೋನು ಸೈನಿ ಎಂಬಾತನನ್ನು ಮದುವೆಯಾಗಿದ್ದಳು. ಈಕೆ ತನ್ನ ತಂದೆ ಸೂರಜ್ ಪ್ರಕಾಶ್ ಗುಪ್ತ ಜತೆ ರಾಜಸ್ಥಾನದ ದೌಸ ಜಿಲ್ಲೆಯ ಕರೌಲಿ ಗಡಿ ಪ್ರದೇಶದ ಮೆಹಂದಿಪುರ ಬಾಲಾಜಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾಗ ಸೋನು ಸೈನಿಯ ಭೇಟಿ ಆಗಿತ್ತು. ಬಳಿಕ ಇವರಿಬ್ಬರೂ ತಂದೆಗೆ ತಿಳಿಸದೆ 2015ರಲ್ಲಿ ಗುಟ್ಟಾಗಿ ಮದುವೆಯಾಗಿದ್ದರು.

ಆದರೆ ಅದಾದ ಬಳಿಕ ಈಕೆ ವೃಂದಾವನದಲ್ಲಿನ ತನ್ನ ಬಾಡಿಗೆ ಮನೆಯಿಂದ ನಾಪತ್ತೆಯಾಗಿದ್ದಳು. ನಂತರ ಪೊಲೀಸರಿಗೆ ಒಂದು ಅಪರಿಚಿತ ಮಹಿಳೆಯ ಶವ ಪತ್ತೆಯಾಗಿದ್ದು, ಸೂರಜ್​ ಪ್ರಕಾಶ್ ಅದು ತಮ್ಮ ಮಗಳದೇ ಶವ ಎಂದು ಗುರುತು ಹಿಡಿದಿದ್ದಾಗಿ ಹೇಳಿದ್ದರು. ಮಾತ್ರವಲ್ಲ ಪೊಲೀಸರಿಗೆ ದೂರು ನೀಡಿದ್ದರು. ತಂದೆಯ ದೂರಿನ ಮೇರೆಗೆ ಪೊಲೀಸರು ಆರತಿ ದೇವಿಯ ಕೊಲೆ ಆರೋಪದ ಮೇಲೆ ಸೋನು ಸೈನಿ ಹಾಗೂ ಆತನ ಸ್ನೇಹಿತ ಗೋಪಾಲ್​ ಸೈನಿಯನ್ನು 2016ರಲ್ಲಿ ಬಂಧಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋನು ಸೈನಿಗೆ 18 ತಿಂಗಳು ಜೈಲು ಹಾಗೂ ಗೋಪಾಲ್​ ಸೈನಿಗೆ 9 ತಿಂಗಳು ಜೈಲು ಶಿಕ್ಷೆಯಾಗಿತ್ತು. ಅಲ್ಲದೆ, ಈ ಪ್ರಕರಣವನ್ನು ಭೇದಿಸಿ, ಇವರಿಬ್ಬರನ್ನು ಪತ್ತೆ ಮಾಡಿ ಬಂಧಿಸಿದ್ದ ಪೊಲೀಸರಿಗೆ 15 ಸಾವಿರ ನಗದು ಬಹುಮಾನ ಕೂಡ ನೀಡಲಾಗಿತ್ತು.

ಆರತಿ ದೇವಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿದ್ದ ಸೋನು ಮತ್ತು ಗೋಪಾಲ್ ಸೈನಿಗೆ ಅಲಹಾಬಾದ್ ಹೈಕೋರ್ಟ್ ಜಾಮೀನು ನೀಡಿತ್ತು. ಹೀಗೆ ಜಾಮೀನಿನ ಮೇಲೆ ಬಿಡುಗಡೆಯಾದ ಆರು ವರ್ಷಗಳ ಬಳಿಕ ಇವರಿಬ್ಬರು ಆರತಿ ದೇವಿಯನ್ನು ಎರಡನೇ ಪತಿಯೊಂದಿಗೆ ಇರುವುದನ್ನು ಪತ್ತೆ ಮಾಡಿದ್ದು, ಪೊಲೀಸರಿಗೆ ಮಾಹಿತಿ ನೀಡಿದ್ದರು. ಇವರು ನೀಡಿದ ಮಾಹಿತಿ ಮೇರೆಗೆ ಪೊಲೀಸರು ಆರತಿ ದೇವಿಯನ್ನು ಭಾನುವಾರ ಬಂಧಿಸಿದ್ದಾರೆ. ಈಕೆಯ ಬಳಿ ಪ್ರತ್ಯೇಕ ಜನ್ಮದಿನಾಂಕ ಇರುವ ಎರಡು ಆಧಾರ್​ ಕಾರ್ಡ್​ಗಳು ಪತ್ತೆಯಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. - ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net