ಮತ್ತೆ ಕನ್ನಡಾಭಿಮಾನ ಮೆರೆದ ರಿಷಬ್​ ಶೆಟ್ಟಿ; ಈ ಸಲ ಮಾತಿಗೆ ಸೀಮಿತವಾಗದೆ ಕನ್ನಡದಲ್ಲೇ ಬರೆದ್ರು!

Published on

ಬೆಂಗಳೂರು: 'ಕಾಂತಾರ' ಸಿನಿಮಾದ ಯಶಸ್ಸು ದೇಶಾದ್ಯಂತ ಕರೆದೊಯ್ದರೂ ಹೋದಲ್ಲೆಲ್ಲ ಕನ್ನಡದ ಡಿಂಡಿಮವನ್ನು ಬಾರಿಸಿದ ನಟ-ನಿರ್ದೇಶಕ ರಿಷಬ್ ಶೆಟ್ಟಿ, ಇದೀಗ ಇನ್ನೊಮ್ಮೆ ಕನ್ನಡಾಭಿಮಾನ ಮೆರೆದಿರುವುದು ಕನ್ನಡಿಗರಿಂದ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ. ಇಷ್ಟು ದಿನ ಮಾತಿನ ಮೂಲಕ ಕನ್ನಡಾಭಿಮಾನ ವ್ಯಕ್ತಪಡಿಸುತ್ತಿದ್ದ ಅವರು ಈಗ ಬರವಣಿಗೆ ಮೂಲಕವೂ ಅದನ್ನು ವ್ಯಕ್ತಪಡಿಸಿದ್ದು, ಅವರ ಬರಹ ಕೂಡ ವೈರಲ್ ಆಗಿದೆ.

ಕಾಂತಾರ ಚಿತ್ರದ ಅದ್ಭುತ ಯಶಸ್ಸಿನ ಬಳಿಕ ಉತ್ತರ ಭಾರತ ಹಾಗೂ ದಕ್ಷಿಣ ಭಾರತದ ಕನ್ನಡೇತರ ಸುದ್ದಿವಾಹಿನಿಗಳ ಸಂದರ್ಶನಗಳಲ್ಲಿ ಮುಂದೆ ಬೇರೆ ಭಾಷೆಯ ಸಿನಿಮಾಗಳನ್ನು ಮಾಡುತ್ತೀರಾ ಎಂಬ ಪ್ರಶ್ನೆಗೆ ಇಲ್ಲ ಎಂದು ಸ್ಪಷ್ಟವಾಗಿ ಹೇಳುತ್ತಲೇ ಬಂದಿದ್ದರು ರಿಷಬ್. ನನಗೆ ಕನ್ನಡದ ಜನತೆ ಭರ್ಜರಿ ಪ್ರತಿಸ್ಪಂದನೆ ತೋರುವ ಮೂಲಕ ಭಾರಿ ಯಶಸ್ಸನ್ನು ನೀಡಿದ್ದಾರೆ. ಅದರ ಫಲವಾಗಿಯೇ ನನ್ನನ್ನು ಬೇರೆ ಭಾಷೆಯವರೂ ಗುರುತಿಸುವಂತಾಗಿದೆ. ಕನ್ನಡ ಸಿನಿಮಾ ಕಾಂತಾರ, ಅದಕ್ಕೆ ಕನ್ನಡಿಗರು ತೋರಿರುವ ಬೆಂಬಲ ಸಹಕಾರದ ಫಲವಾಗಿಯೇ ನಾನು ಇಲ್ಲಿದ್ದೇನೆ ಎಂದು ಹೋದಲ್ಲೆಲ್ಲ ಹೇಳಿದ್ದ ರಿಷಬ್​, ಕನ್ನಡದಲ್ಲಷ್ಟೇ ಸಿನಿಮಾ ಮಾಡುತ್ತೇನೆ. ಅದು ಭರ್ಜರಿ ಯಶಸ್ಸು ಗಳಿಸಿದಾಗ ಬೇರೆ ಭಾಷೆಗಳಿಂದ ಬೇಡಿಕೆ ಬಂದರೆ ಆ ಭಾಷೆಗಳಿಗೆ ಡಬ್ ಮಾಡಿ ಬಿಡುಗಡೆ ಮಾಡುತ್ತೇನೆ ವಿನಃ ಬೇರೆ ಭಾಷೆಯಲ್ಲೇ ಸಿನಿಮಾ ಮಾಡುವುದಿಲ್ಲ ಎಂದಿದ್ದರು.

ಹೀಗೆ ರಿಷಬ್​ ಕನ್ನಡದ ಪರವಾಗಿ, ಕನ್ನಡ ಮಾತ್ರ ಎಂದೆಲ್ಲ ಮಾತನಾಡಿದ ಮೆಚ್ಚಿ ಅಭಿಮಾನ ವ್ಯಕ್ತಪಡಿಸಿದ್ದ ಕನ್ನಡಿಗರು ಇದೀಗ ಇನ್ನೊಮ್ಮೆ ತಮ್ಮ ಅಭಿಮಾನವನ್ನು ತೋರಿ ಭೇಷ್ ಎನ್ನುತ್ತಿದ್ದಾರೆ. ಅಷ್ಟಕ್ಕೂ ಅವರು ಇಂಥದ್ದೊಂದು ಮೆಚ್ಚುಗೆಗೆ ಪಾತ್ರರಾಗಲು ಕಾರಣ ಅವರು ಹಿಂದಿ ಸುದ್ದಿವಾಹಿನಿಯ ಕಾರ್ಯಕ್ರಮವೊಂದರಲ್ಲಿ ಕನ್ನಡದಲ್ಲೇ ಬರೆದಿದ್ದು.

ಇಂಡಿಯಾ ಟುಡೆ ಸುದ್ದಿವಾಹಿನಿ ಇತ್ತೀಚೆಗೆ ಹಮ್ಮಿಕೊಂಡಿದ್ದ 'ಅಜೆಂಡಾ 2022' ಕಾರ್ಯಕ್ರಮದಲ್ಲಿ ರಿಷಬ್‌ ಶೆಟ್ಟಿ ಭಾಗವಹಿಸಿದ್ದರು. ಆಗ ಅಲ್ಲಿನ ಆ್ಯಂಕರ್ ಬೇರೆ ಎಲ್ಲ ಮಾತುಕತೆ ಬಳಿಕ ಒಮ್ಮೆ 'ನಿಮ್ಮ ಅಜೆಂಡಾ ಏನು?' ಎಂದು ಕೇಳಿದ್ದರು. ಆಗ 'ನನಗೆ ಯಾವ ಅಜೆಂಡಾ ಕೂಡ ಇಲ್ಲ, ಸಮಯ ಹೇಗೆ ಬರುತ್ತದೋ ಹಾಗೆ ಹೋಗುತ್ತೇನೆ, ನಾನೊಬ್ಬ ಕೆಲಸಗಾರ, ಕೆಲಸ ಮಾಡುತ್ತ ಹೋಗುತ್ತೇನಷ್ಟೇ..' ಎಂದು ರಿಷಬ್ ಉತ್ತರಿಸಿದ್ದರು. ಅದಾಗ್ಯೂ ನಿಮ್ಮ ಮುಂದಿನ ಅಜೆಂಡಾ ಬಗ್ಗೆ ಬರೆಯಿರಿ ಎಂದಾಗ ಅವರು, 'ಕಾಯಕವೇ ಕೈಲಾಸ' ಎಂದು ಕನ್ನಡದಲ್ಲೇ ಬರೆದಿದ್ದರು. ಹಾಗೆ ಅವರು ಬರಹ ಡಿಜಿಟಲ್ ಸ್ಕ್ರೀನ್​ನಲ್ಲಿ ಡಿಸ್​ಪ್ಲೇ ಆಗಿದ್ದು, ಅದು ಈಗ ಎಲ್ಲೆಡೆ ವೈರಲ್ ಆಗುತ್ತಿರುವುದಷ್ಟೇ ಅಲ್ಲದೆ, ಕನ್ನಡಿಗರಿಂದ ಈ ಬರಹಕ್ಕೆ ಹಾಗೂ ರಿಷಬ್​ಗೂ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net