'ನಮ್ಮ ಬೆಂಗಳೂರು ಹಬ್ಬ' ಜಾಗತಿಕ ಬ್ರ್ಯಾಂಡ್ ಸ್ಪರ್ಶ; ಲಾಂಛನ ಬಿಡುಗಡೆ ಮಾಡಿದ ಸಚಿವ ಆರ್.ಅಶೋಕ್

RAshoka
Published on

ಬೆಂಗಳೂರು: ವಿಶ್ವದ ಪ್ರತಿಷ್ಠಿತ ನಗರವಾಗಿ ಬೆಳೆದಿರುವ ಬೆಂಗಳೂರು ಪರಂಪರೆ, ಸಂಸ್ಕೃತಿ, ಕಲೆ, ಸಾಹಿತ್ಯ ಪರಿಚಯಿಸಲೆಂದು ' ನಮ್ಮ ಬೆಂಗಳೂರು ಹಬ್ಬ ' ಮಾ.25 ಹಾಗೂ 26ರಂದು ಆಯೋಜಿಸಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.

ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ 'ನಮ್ಮ ಬೆಂಗಳೂರು ಹಬ್ಬ' ಲಾಂಛನ ಬಿಡುಗಡೆ ಮಾಡಿ ಮಾತನಾಡಿದ ಅವರು, ಕಬ್ಬನ್ ಪಾರ್ಕ್ ಬೆಳಗ್ಗೆಯಿಂದ ಚಿತ್ರಸಂತೆಯೊಂದಿಗೆ ಶುರುವಾಗಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಅವರು ಈ ಹಬ್ಬವನ್ನು ಸಂಜೆ ಉದ್ಘಾಟಿಸಲಿದ್ದಾರೆ. 26ರ ಸಂಜೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಭಾಗಿಯಾಗಲಿದ್ದಾರೆ.

ಈ‌ ಬಾರಿ ಕಬ್ಬನ್ ಪಾರ್ಕ್, ಬಾಲ ಭವನ ಹಾಗೂ ವಿಧಾನಸೌಧದಲ್ಲಿ ನಡೆಯಲಿದೆ. ಮುಂದಿನ ವರ್ಷದಿಂದ ಜನವರಿಯಲ್ಲಿ ಆಯೋಜಿಸಲಿದ್ದು, ಬೆಂಗಳೂರಿನ ಹಲವು‌ ವಾರ್ಡ್ ಗಳನ್ನು ಒಳಗೊಳ್ಳಲಿದೆ ಎಂದರು.

ಬೆಂಗಳೂರಿನ ಪರಂಪರೆ, ಸಂಸ್ಕೃತಿ, ಕಲೆ, ಸಾಹಿತ್ಯ ಜಗತ್ರಿಗೆ ಪರಿಚಯಿಸುವುದು ಹಬ್ಬದ ಮುಖ್ಯ ಉದ್ದೇಶವಾಗಿದೆ. ಚಿತ್ರಕಲೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ಆಹಾರ ಮೇಳ, ವಿವಿಧ ರಾಜ್ಯಗಳ ಕಲಾ ಪ್ರದರ್ಶನ ಮುಂತಾದ ಕಾರ್ಯಕ್ರಮಗಳಿರಲಿವೆ.

ಹೋಟೆಲ್ ನಲ್ಲಿ ತಿಂಡಿ, ಊಟಕ್ಕೆ ರಿಯಾಯಿತಿ: ಬೆಂಗಳೂರು ಹಬ್ಬದ ನಿಮಿತ್ತ ಮೂರು ದಿನಗಳ ಕಾಲ ಶೇಕಡ 10ರ ರಿಯಾಯಿತಿ ದರದಲ್ಲಿ ತಿಂಡಿ, ಊಟ ನೀಡಲು ಬೆಂಗಳೂರಿನ ಹೋಟೆಲ್ ಮಾಲೀಕರು ಒಪ್ಪಿದ್ದಾರೆ.

ಪುತ್ಥಳಿಗಳ ಅನಾವರಣ: ವಿಧಾನಸೌಧ ಮುಂಬದಿ ಆವರಣದಲ್ಲಿ ನಿರ್ಮಿಸಿರುವ ಜಗಜ್ಯೋತಿ ಬಸವೇಶ್ವರ ಹಾಗೂ ನಾಡಪ್ರಭು ಕೆಂಪೇಗೌಡರ ಪುತ್ಥಳಿ ಅನಾವರಣ ಕಾರ್ಯಕ್ರಮ ಮಾ.26ರ ಬೆಳಗ್ಗೆ ನಡೆಯಲಿದ್ದು, ನಂತರ ನಾಡಿನ ಪ್ರಸಿದ್ಧ ಸಂಗೀತಗಾರರಿಂದ ಗಾಯನ ಕಾರ್ಯಕ್ರಮ ಹಾಗೂ ಪ್ರಭಾತ್ ಕಲಾವಿದರಿಂದ ನೃತ್ಯ ಪ್ರದರ್ಶನ ಆಯೋಜಿಸಲಾಗಿದೆ ಎಂದು ಆರ್.ಅಶೋಕ್ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net