ಹಿಂದು ಯುವಕರ ಮೇಲಿನ ಪೊಲೀಸರ ದೌರ್ಜನ್ಯ ಇಲಾಖೆಗೆ ಕಪ್ಪುಚುಕ್ಕೆ; ತಪ್ಪಿತಸ್ಥ ಅಧಿಕಾರಿಗಳ ಮೇಲೆ ಸೂಕ್ತ ಕ್ರಮಕ್ಕೆ ಆಗ್ರಹ

Nalin Kumar
Published on

ಬೆಂಗಳೂರು: ಸರ್ಕಾರಿ ಬಸ್ ನಿಲ್ದಾಣದ ಮುಂಭಾಗ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಸಿಎಂ ಡಿ.ವಿ.ಸದಾನಂದ ಗೌಡರ ಭಾವಚಿತ್ರ ಇರುವ ಫ್ಲೆಕ್ಸ್ ಅಳವಡಿಸಿ, ಅದಕ್ಕೆ ಚಪ್ಪಲಿ ಹಾರ ಹಾಕಿದ ಪ್ರಕರಣದ ಪೊಲೀಸ್ ವಿಚಾರಣೆ ಗಂಭೀರ ತಿರುವನ್ನು ಪಡೆದುಕೊಂಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದ ಪೊಲೀಸರು 9 ಜನ ಜನರನ್ನು ವಶಕ್ಕೆ ಪಡೆದುಕೊಂಡಿದ್ದರು.

ವಿಚಾರಣೆಗಾಗಿ ವಶಕ್ಕೆ ತೆಗೆದುಕೊಂಡ ಒಂಬತ್ತು ಮಂದಿ ಮೇಲೆ ಪುತ್ತೂರು ಪೊಲೀಸರು ಹಿಗ್ಗಾಮುಗ್ಗ ಹಲ್ಲೆ ನಡೆಸಿ ದೌರ್ಜನ್ಯ ಎಸಗಿರುವ ಮಾಹಿತಿ ಬುಧವಾರ ಬೆಳಕಿಗೆ ಬಂದಿತ್ತು. ದೌರ್ಜನ್ಯಕ್ಕೆ ಒಳಗಾದವರ ಫೋಟೋ ಹಾಗೂ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ, ಪೊಲೀಸರ ನಡೆಗೆ ವಿರೋಧ ಕೇಳಿ ಬಂದಿದೆ.

ಪೊಲೀಸರು ಯುವಕರನ್ನು ಥಳಿಸಿರುವ ಬಗ್ಗೆ ಸಾಕಷ್ಟು ಚರ್ಚೆಗಳಾಗುತ್ತಿರುವ ನಡುವೆ, ಬಿಜೆಪಿ ರಾಜ್ಯಾಧ್ಯಕ್ಷ ಟ್ವೀಟ್ ಮಾಡಿದ್ದು ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಹಿಂದು ಯುವಕರ ಮೇಲೆ ಪುತ್ತೂರಿನಲ್ಲಿ ದಾಖಲಾದ ಪ್ರಕರಣದಲ್ಲಿ ಪೊಲೀಸರ ವರ್ತನೆ ಪೊಲೀಸ್ ಇಲಾಖೆಗೆ ಕಪ್ಪುಚುಕ್ಕೆ. ದೂರಿನ ಬಗ್ಗೆ ಪರಿಶೀಲಿಸಿ ಯಥೋಚಿತ ತನಿಖೆ ನಡೆಸುವ ಬದಲು ಚಿತ್ರಹಿಂಸೆ ನೀಡಿರುವುದನ್ನು ಖಂಡಿಸುತ್ತೇನೆ ಎಂದು ನಳಿನ್ ಕುಮಾರ್ ಕಟೀಲ್ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಬಿಜೆಪಿ ನಾಯಕರ ಫೋಟೋಗೆ ಚಪ್ಪಲಿ ಹಾರ ಹಾಕಿದ್ದ ಪ್ರಕರಣ | ಪಕ್ಷದ ಕಾರ್ಯಕರ್ತರ ಮೇಲೆ ಪೊಲೀಸರಿಂದ ದೌರ್ಜನ್ಯ; ವ್ಯಾಪಕ ಖಂಡನೆ

ಏನಿದು ಬ್ಯಾನರ್ ವಿವಾದ?

ಪುತ್ತೂರು ಅರಣ್ಯ ಇಲಾಖೆ ಕಚೇರಿ ಆವರಣ ಗೋಡೆ ಬಳಿ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಸಿಎಂ ಡಿ.ವಿ.ಸದಾನಂದ ಗೌಡರ ಭಾವಚಿತ್ರ ಹಾಕಿ ಬಿಜೆಪಿ ಸೋಲಿಗೆ ಕಾರಣರಾದ ನಾಯಕರಿಗೆ ಶ್ರದ್ಧಾಂಜಲಿ ಎಂದು ಬರೆದು, ಚಪ್ಪಲಿ ಹಾರ ಹಾಕಿದ್ದ ಬ್ಯಾನರ್ ಭಾನುವಾರ ರಾತ್ರಿ ಕಂಡುಬಂದಿತ್ತು. ಸರ್ಕಾರಿ ಆಸ್ತಿಪಾಸ್ತಿ ಮತ್ತು ಸಾರ್ವಜನಿಕ ಸ್ಥಳ ವಿರೂಪ ಬಗ್ಗೆ ನಗರಸಭೆ ಪೌರಾಯುಕ್ತ ಮಧು ಎಸ್.ಮನೋಹರ್ ನಗರ ಠಾಣೆಗೆ ದೂರು ನೀಡಿದ್ದರು. ಬ್ಯಾನರ್ ಅಳವಡಿಕೆ ವಿರುದ್ಧ ಮೇ 15ರಂದು ಬಿಜೆಪಿಯೂ ಪುತ್ತೂರಿನಲ್ಲಿ ಪ್ರತಿಭಟನೆ ನಡೆಸಿತ್ತು. ಘಟನೆಯಲ್ಲಿ ತಮ್ಮ ಕೈವಾಡ ಇಲ್ಲ ಎಂದು ಕಾಂಗ್ರೆಸ್ ಹೇಳಿಕೊಂಡಿತ್ತು.

ಒಂಭತ್ತು ಜನರ ವಿಚಾರಣೆ

ಪೊಲೀಸರು ಮೊದಲ ಹಂತದಲ್ಲಿ ನರಿಮೊಗರು ನಿವಾಸಿಗಳಾದ ವಿಶ್ವನಾಥ್, ಮಾಧವ ಎಂಬುವರನ್ನು ವಶಕ್ಕೆ ಪಡೆದಿದ್ದರು. ಬಳಿಕ ಅಭಿ ಯಾನೆ ಅವಿನಾಶ್, ಶಿವರಾಮ್, ಚೈತ್ರೇಶ್, ಈಶ್ವರ್, ನಿಶಾಂತ್, ದೀಕ್ಷಿತ್, ಗುರುಪ್ರಸಾದ್ ಎಂಬುವರನ್ನೂ ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದರು. ಈ ವೇಳೆ ಪೊಲೀಸರು ತಮ್ಮ ವಶದಲ್ಲಿದ್ದವರನ್ನು ಹಿಗ್ಗಾಮುಗ್ಗಾ ಥಳಿಸಿ ಗಾಯಗೊಳಿಸಿದರು ಎಂಬ ಆರೋಪ ಕೇಳಿಬಂದಿದೆ. ಥಳಿತದಿಂದ ಗಾಯಗೊಂಡ ಯುವಕರ ಫೋಟೋಗಳು ಹಾಗೂ ತಡರಾತ್ರಿ ನಡೆಯಲು ಕಷ್ಟಪಡುವ ಯುವಕರು ಪುತ್ತೂರು ಡಿವೈಎಸ್‌ಪಿ ಕಚೇರಿಯಿಂದ ಹೊರಬರುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಎಲ್ಲರೂ ಕಾರ್ಯಕರ್ತರು!

ಪೊಲೀಸ್ ದೌರ್ಜನ್ಯಕ್ಕೆ ಒಳಗಾದವರು ಬಿಜೆಪಿ ಕಾರ್ಯಕರ್ತರು. ಈ ಪೈಕಿ ಕೆಲವರು ಈ ಬಾರಿ ಪಕ್ಷೇತರ ಅಭ್ಯರ್ಥಿ ಪುತ್ತಿರ ಅವರ ಚುನಾವಣಾ ಪರ ಪ್ರಚಾರ ಮಾಡಿದ್ದರೆ, ಉಳಿದವರು ಬಿಜೆಪಿ ಪರ ಫೀಲ್ಡ್ ವರ್ಕ್ ಮಾಡಿದ್ದರು. ಪೊಲೀಸರು ದೌರ್ಜನ್ಯದ ಹಿಂದೆ ಸ್ಥಳೀಯ ಹಾಗೂ ಜಿಲ್ಲಾಮಟ್ಟದ ಮುಖಂಡರ ಚಿತಾವಣೆಯಿದೆ ಎಂಬ ಆರೋಪ ಕೇಳಿಬರುತ್ತಿದೆ. ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಯೇ ದೌರ್ಜನ್ಯದ ಉಸ್ತುವಾರಿ ವಹಿಸಿದ್ದಾರೆಂಬ ಟೀಕೆಯೂ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಫೋಟೋ ಮತ್ತು ವಿಡಿಯೋ ಬಗ್ಗೆ ನೆಟ್ಟಿಗರು ಭಾರೀ ಆಕ್ರೋಶ ಹೊರಹಾಕಿ, ಪುತ್ತೂರಿನಲ್ಲಿ ಪೊಲೀಸರೇ ಗೂಂಡಾಗಿರಿಗೆ ಇಳಿದರೇ? ಎಂದು ಪ್ರಶ್ನಿಸಿದ್ದಾರೆ.

ದಸ್ತಗಿರಿ ಮಾಡಿದ್ದ ಆರೋಪಿಗಳ ಮೇಲೆ ಹಲ್ಲೆ ಪೊಲೀಸರು ಹಲ್ಲೆ ಮಾಡಿದ್ದಾರೆಂಬ ಆರೋಪ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವುದು ಗಮನಕ್ಕೆ ಬಂದಿದೆ. ಘಟನೆಯ ಸತ್ಯಾಸತ್ಯೆ ಪರಿಶೀಲಿಸಲಾಗುವುದು ಎಂದು ಪ್ರಕರಣದ ಬಗ್ಗೆ ದ.ಕ. ಎಸ್​ಪಿ ವಿಕ್ರಂ ಅಮಟೆ ಸುದ್ದಿಗಾರರಿಗೆ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net